*ಗೋಣಿಕೊಪ್ಪಲು, ನ. 11: ಕೇರಳದ ತಲಚೇರಿಯಿಂದ ಮೈಸೂರಿಗೆ ಕೊಡಗಿನ ಮೂಲಕ ಹಾದು ಹೋಗುವ ನೂತನ ರೈಲ್ವೆ ಮಾರ್ಗ ಯೋಜನೆಯನ್ನು ತಡೆ ಹಿಡಿಯಬೇಕು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ. ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಸರಕಾರ ತಲಚೇರಿಯಿಂದ ಕೊಡಗಿನ ಮೂಲಕ ಮೈಸೂರಿಗೆ ರೈಲ್ವೆ ಮಾರ್ಗ ನಿರ್ಮಿಸಲು ಮುಂದಾಗಿದೆ ಎಂಬದು ಕೇರಳ ರಾಜ್ಯದ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಈ ಯೋಜನೆ ಕೊಡಗು ಜಿಲ್ಲೆಗೆ ಮಾರಕವಾಗಿದ್ದು, ಇಲ್ಲಿನ ಪರಿಸರ ನಾಶಕ್ಕೆ ಕಾರಣವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಡಗಿಗೆ ರೈಲ್ವೆ ಬೇಡ ಎಂಬ ಹೋರಾಟ ನಡೆಯುತ್ತಿರುವಾಗ ಈ ರೀತಿಯ ಯೋಜನೆಗೆ 2 ರಾಜ್ಯದ ಮುಖ್ಯಕಾರ್ಯದರ್ಶಿಗಳು ಮಾತುಕತೆ ನಡೆಸಿರುವದಕ್ಕೆ ತಮ್ಮ ತೀವ್ರ ವಿರೋಧವಿದೆ ಎಂದು ಬೋಪಯ್ಯ ಹೇಳಿದರು.
ಕೊಡಗಿಗೆ ರೈಲ್ವೆ ಮಾರ್ಗ ಬೇಡ. ಮೈಸೂರು ಹಾಗೂ ಕುಶಾಲನಗರಕ್ಕೆ ಸೀಮಿತವಾಗಿ ಡಿ.ವಿ. ಸದಾನಂದಾಗೌಡ ಕೇಂದ್ರ ರೈಲ್ವೆ ಸಚಿವರಾಗಿದ್ದ ಸಂದರ್ಭ ಅನುಮತಿ ನೀಡಲಾಯಿತು. ಈ ಯೋಜನೆಯಷ್ಟೇ ಕೇಂದ್ರ ಸರಕಾರದ ಮುಂದಿದೆ ಎಂದು ಅವರು ಮಾಹಿತಿ ನೀಡಿದರು.
(ಮೊದಲ ಪುಟದಿಂದ) ಕೊಡಗಿನ ಜನರ ಆಕ್ಷೇಪದ ನಡುವೆಯು ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಯೋಜನೆಯ ವಿರುದ್ದ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ ಅವರು ನೂತನ ರೈಲ್ವೆ ಮಾರ್ಗ ಯೋಜನೆಯ ಪ್ರಕಾರ ತಲಚೇರಿಯಿಂದ ಮಾನಂದವಾಡಿ, ಅಪ್ಪಪಾರೆÀ, ಕುಟ್ಟ, ಶ್ರೀಮಂಗಲ, ತಿತಿಮತಿ ಮಾರ್ಗವಾಗಿ ಪಿರಿಯಾಪಟ್ಟಣ ಹಾಗೂ ಮೈಸೂರನ್ನು ಸಂಪರ್ಕ ಬೆಸೆಯುವ ಯೋಜನೆಯಾಗಿದೆ ಎಂದು ಬಹಿರಂಗಗೊಳಿಸಿದರು.
ಈ ಸಂದರ್ಭ ಬಿ.ಜೆ.ಪಿ. ವರ್ತಕ ಪ್ರಕೋಷ್ಠದ ಅಧÀ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಹಾಜರಿದ್ದರು.
ಇದೇ ತಾ. 9ರಂದು ಬೆಂಗಳೂರಿನಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಶ್ ಕುಂಠಿಯಾ ಹಾಗೂ ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ.ಎಂ. ಅಬ್ರಾಹಿಂ ಇವರುಗಳ ನಡುವೆ ಕೇರಳದ ತಲಚೇರಿ ಹಾಗೂ ಕರ್ನಾಟಕದ ಮೈಸೂರು ನಡುವಿನ ನೂತನ ರೈಲ್ವೆ ಮಾರ್ಗ ಕುರಿತಾಗಿ ಮಾತುಕತೆ ನಡೆದಿರುವದಾಗಿ ಕೇರಳದ ಮಾಧ್ಯಮಗಳು ವರದಿ ಮಾಡಿವೆ.
ಈ ಯೋಜನೆ ಬಗ್ಗೆ ಸುಧೀರ್ಘ ಯೋಜನಾ ವರದಿ ತಯಾರಿಸುವದಕ್ಕೆ ಮುನ್ನ ಎರಡೂ ರಾಜ್ಯಗಳು ಸರ್ವೆ ಕಾರ್ಯ ನಡೆಸಲು ಒಪ್ಪಿವೆ.
ನೂತನ ಮಾರ್ಗ ತಲಚೇರಿ- ಕೂತುಪರಂಬ- ಮಾನಂದವಾಡಿ- ತ್ರಿಸಿಲ್ಲರಿ ಕುಟ್ಟ- ಕಾನೂರು- ಬಾಳೆಲೆ- ತಿತಿಮತಿ- ಪಿರಿಯಾಪಟ್ಟಣ ಮೂಲಕ ಮೈಸೂರನ್ನು ತಲಪುವ ಬಗ್ಗೆ ಚರ್ಚಿಸಿದ್ದು, ಅದಕ್ಕೆ ಮೈಸೂರು- ಕುಶಾಲನಗರ ಮಾರ್ಗದ ರೈಲು ಜೋಡಿಸಲು ಚರ್ಚಿಸಲಾಗಿದೆ. ಕೇರಳದಲ್ಲಿ ತಲಚೇರಿಯಿಂದ ಕಣ್ಣೂರು ಹಾಗೂ ಮಟ್ಟನೂರಿಗೆ ಸಂಪರ್ಕದ ಬಗ್ಗೆ ಚರ್ಚಿಸಲಾಗಿದೆ.
ಹೊಸ ಮಾರ್ಗ ಯಾವದೇ ರಕ್ಷಿತ ಪ್ರದೇಶಗಳನ್ನು ಹಾಯ್ದು ಹೋಗದ ಬಗ್ಗೆ ತೀರ್ಮಾನಿಸಲಾಗಿದೆ. ಕೊಂಕಣ್ ರೈಲ್ವೆ ಕಾರ್ಪೋರೇಷನ್ ಸರ್ವೆ ಕಾರ್ಯ ನಡೆಸಲಿದ್ದು, ಕೇರಳ ರೈಲು ಅಭಿವೃದ್ಧಿ ನಿಗಮವು ಈ ಕೆಲಸದ ವೆಚ್ಚವನ್ನು ಭರಿಸಲಿದೆ. ಈ ಯೋಜನೆ ಕುರಿತು ಕೆಲ ದಿನಗಳ ಹಿಂದೆ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಮತ್ತು ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವಿನಿ ಲೊಹಾನಿ ನಡುವೆ ತಿರುವನಂತಪುರಂನಲ್ಲಿ ಸಭೆ ನಡೆದಿತ್ತು.
ತಾ. 9ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೇರಳದ ಸಾರಿಗೆ ಕಾರ್ಯದರ್ಶಿ ಕೆ. ಜ್ಯೋತಿಲಾಲ್ ಹಾಗೂ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ಸುರೇಂದ್ರನಾಥನ್ ಪಾಲ್ಗೊಂಡಿದ್ದರೆನ್ನಲಾಗಿದೆ.