ಕೂಡಿಗೆ, ನ. 11: ಹಾರಂಗಿ ಜಲಾಶಯ ಈಗಾಗಲೇ ಮುಕ್ಕಾಲು ಭಾಗದಷ್ಟು ಭರ್ತಿಯಾಗಿದ್ದು, ಇದರಿಂದ ಹಾರಂಗಿ ನದಿಗೆ ಕಳೆದ ಒಂದು ತಿಂಗಳಿನಿಂದ ನೀರನ್ನು ವಿದ್ಯುತ್ ಘಟಕದ ಮೂಲಕ ಹರಿಬಿಡಲಾಗುತ್ತಿದೆ. ಈ ನೀರನ್ನು ನದಿಗೆ ಹರಿಬಿಡುವ ಮೊದಲು ಮುಂಬರುವ ಬೇಸಿಗೆ ದಿನಗಳಲ್ಲಿ ಜಿಲ್ಲೆಯ ಗಡಿಭಾಗದ ರೈತರಿಗೆ ಎರಡನೇ ಬೆಳೆ ಮಾಡಲು ಅನುಕೂಲವಾಗುವಂತೆ ನೀರನ್ನು ಸಂಗ್ರಹಿಸಬೇಕೆಂದು ರೈತ ಹೋರಾಟ ಸಮಿತಿ ಆಗ್ರಹಿಸಿದೆ.
ಕುಡಿಯುವ ನೀರಿನ ನೆಪದಲ್ಲಿ ರಾಜ್ಯದ ಎಲ್ಲಾ ಅಣೆಕಟ್ಟೆಗಳಿಂದ ನೀರು ಹರಿಸುವಂತೆ ಕಳೆದ ತಿಂಗಳಿನಿಂದ ಸರ್ಕಾರದ ಸೂಚನೆಯಂತೆ ಕೊಡಗು ಜಿಲ್ಲೆಯ ಜಲಾಶಯದಿಂದಲೂ ನೀರನ್ನು ನದಿಯ ಮೂಲಕ ಹರಿಸಲಾಗುತ್ತಿದೆ.
ಕಾವೇರಿ ನೀರಾವರಿ ನಿಗಮದ ಸೂಚನೆಯನ್ವಯ ನೀರನ್ನು ಹರಿಬಿಡಲಾಗುತ್ತಿದೆ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾ ಹಾರಂಗಿ ವಿದ್ಯುತ್ ಘಟಕಕ್ಕೆ ಅನುಕೂಲವಾಗುವಂತೆ ನೀರನ್ನು ನದಿಗೆ ಹರಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಇದೀಗ ನೀರನ್ನು ನದಿಗೆ ಹರಿಸುವ ಬದಲು ಅಣೆಕಟ್ಟೆಯಲ್ಲಿ ಮೂರು ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾದಲ್ಲಿ ಮುಂದಿನ ದಿನಗಳಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರ ದನ-ಕರುಗಳಿಗೆ ಕುಡಿಯುವ ನೀರಿಗೆ ಕೆರೆಕಟ್ಟೆಗಳಿಗೆ ತುಂಬಿಸಲು ಅನುಕೂಲವಾಗುತ್ತದೆ. ನದಿಗೆ ನೀರನ್ನು ಹರಿಸುತ್ತಿರುವದನ್ನು ನಿಲ್ಲಿಸದಿದ್ದಲ್ಲಿ ಪ್ರತಿಭಟನೆ ಮಾಡ ಲಾಗುವದು ಎಂದು ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳು ಹಾಗೂ ರೈತರು ತಿಳಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.