ಸಿದ್ದಾಪುರ, ನ. 11: ಇತ್ತೀಚೆಗೆ ‘ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಭಾಜನಗೊಂಡಿರುವ ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಕೇಂದ್ರ ಸರಕಾರದ ವಿಶೇಷ ಗ್ರಾಮೀಣ ಅಭಿವೃದ್ಧಿ ಆಡಳಿತ ಅಧಿಕಾರಿಗಳ ತಂಡ ಭೇಟಿ ನೀಡುವದರೊಂದಿಗೆ ಸಮಗ್ರ ಪರಿಶೀಲನೆಯೊಂದಿಗೆ ಮಾಹಿತಿ ಸಂಗ್ರಹಿಸಿ ಹಿಂತೆರಳಿದ್ದಾರೆ.ನವದೆಹಲಿಯ ಇಂಡಿಯನ್ ಇನ್ಸಿಸ್ಟೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯ 10 ಅಧಿಕಾರಿಗಳ ತಂಡವು ಜಿಲ್ಲಾ ಆಡಳಿತದಿಂದ ನಿಯೋಜನೆಗೊಂಡಿದ್ದ ಅಧಿಕಾರಿಗಳ ಸಹಿತ ಗ್ರಾ.ಪಂ. ಆಡಳಿತ ಕುರಿತು ಅಧ್ಯಯನ ಕೈಗೊಂಡಿದ್ದಾರೆ.
ಪಾಲಿಬೆಟ್ಟ ಗ್ರಾ.ಪಂ. ಕಚೇರಿಗೆ ತಾ. 8ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಆಗಮಿಸಿರುವ ಕೇಂದ್ರ ಅಧ್ಯಯನ ತಂಡವು ಗ್ರಾಮ ಪಂಚಾಯಿತಿಯು ತನ್ನ ಆಡಳಿತಕ್ಕೆ ಒಳಪಟ್ಟಿರುವ ಪ್ರದೇಶ ಅಭಿವೃದ್ಧಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನ ಫಲಾನುಭವಿಗಳ ಆಯ್ಕೆಗೆ ತೋರಿರುವ ಮಾನದಂಡ ಇತ್ಯಾದಿ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ
(ಮೊದಲ ಪುಟದಿಂದ) ಮಾಹಿತಿ ಪಡೆದಿದ್ದಾರೆ. ಅಲ್ಲದೆ ಸಮಗ್ರ ಗ್ರಾಮೀಣ ಜನತೆಯ ಅಭಿವೃದ್ಧಿಯೊಂದಿಗೆ ಮುಖ್ಯವಾಹಿನಿಗೆ ತರಲು ಅನುಸರಿಸಬೇಕಾದ ಮಾರ್ಗಗಳು ಶುಚಿತ್ವ ಕಾಪಾಡುವದು, ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ, ಮಹಿಳೆಯರು ಮತ್ತು ಮಕ್ಕಳ ವಿಕಾಸಕ್ಕಾಗಿ ಕೈಗೊಳ್ಳಬೇಕಾದ ಯೋಜನೆಗಳ ಸ್ಥೂಲ ಪರಿಚಯ ನೀಡಿದ್ದಾಗಿ ತಿಳಿದು ಬಂದಿದೆ.
ಕೇವಲ ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಸುಮಾರು ಎಂಟು ಗಂಟೆಗಳಿಗೂ ಹೆಚ್ಚು ಸಮಯ ಕೇಂದ್ರ ಅಧ್ಯಯನÀ ತಂಡದ ಅಧಿಕಾರಿಗಳು ಸ್ಥಳೀಯರೊಂದಿಗೆ ಸಮಾಲೋಚನೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ.
ತೋಟದಲ್ಲಿ ವಿಹಾರ : ಪಾಲಿಬೆಟ್ಟ ಸುತ್ತಮುತ್ತಲಿನ ಕಾಫಿ ತೋಟಗಳಿಗೂ ತೆರಳಿ ಗಂಟೆಗಟ್ಟಲೆ ಕಾಲ್ನಡಿಗೆಯಲ್ಲೇ ವಿಹರಿಸಿರುವ ತಂಡ ಕೊಡಗಿನ ಕಾಫಿ ಹಾಗೂ ಕಾಳುಮೆಣಸು ಫಸಲು ಬೆಳೆಯುವ ಕ್ರಮ ಫಸಲು ಉತ್ಪನ್ನ ಸಂಗ್ರಹ, ಮಾರುಕಟ್ಟೆ ವ್ಯವಸ್ಥೆ ಇತ್ಯಾದಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಅಂಗನವಾಡಿ : ಪಾಲಿಬೆಟ್ಟ ಅಂಗನವಾಡಿ ಕೇಂದ್ರದಲ್ಲಿ ಪುಟಾಣಿಗಳನ್ನು ನೋಡಿಕೊಳ್ಳುತ್ತಿರುವ ಬಗ್ಗೆ ಮತ್ತು ಪೌಷ್ಟಿಕ ಆಹಾರದೊಂದಿಗೆ ಕಲಿಕೆಗೆ ಪ್ರೋತ್ಸಾಹಿಸುವ ಕುರಿತಾಗಿಯೂ ಕಾರ್ಯಕರ್ತೆ ಯರೊಂದಿಗೆ ಈ ತಂಡ ಸಮಾಲೋಚಿಸಿದೆ.
ಬಿಸಿಯೂಟದ ರುಚಿ : ಪಾಲಿಬೆಟ್ಟ ಸರಕಾರಿ ಶಾಲೆಗೆ ತೆರಳಿ ಅಲ್ಲಿನ ಮಕ್ಕಳಿಗೆ ಪಠ್ಯ ಕ್ರಮ ಬೋಧನೆ, ಮಧ್ಯಾಹ್ನದ ಬಿಸಿಯೂಟ ನೀಡಿಕೆ ಇತ್ಯಾದಿಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಿರುವ ತಂಡ ಖುದ್ದಾಗಿ ಬಿಸಿಯೂಟ ರುಚಿಯನ್ನು ತಾವು ಸೇವಿಸುವ ಮೂಲಕ ಅಧಿಕಾರಿಗಳು ಸಲಹೆ ಸೂಚನೆ ನೀಡಿದ್ದಾರೆ.
ಅಲ್ಲದೆ ಇಲ್ಲಿನ ‘ಚೆಶೈರ್ ಹೋಂ’ ವಿಶೇಷ ಮಕ್ಕಳೊಂದಿಗೆ ಈ ತಂಡ ತಾಸುಗಟ್ಟಲೆ ಬೆರೆತು ಸ್ಪೂರ್ತಿ ತುಂಬಿದ್ದಲ್ಲದೆ, ಪ.ಪೂ. ಕಾಲೇಜು ವಿದ್ಯಾರ್ಥಿಗಳಿಗೆ ಸೇನೆ ಸೇರಲು ಪ್ರೋತ್ಸಾಹ ನೀಡಿ ವಿಚಾರ ವಿನಿಮಯ ನಡೆಸಿತು.
ತಂಡದ ಗಣ್ಯರು : ಪಾಲಿಬೆಟ್ಟ ಗ್ರಾಮ ಪಂಚಾಯತಿ ಸಮಗ್ರ ಅಭಿವೃದ್ಧಿ ಕಾರ್ಯಗಳ ಹಾಗೂ ಗ್ರಾಮೀಣ ಆಡಳಿತ ವ್ಯವಸ್ಥೆಯ ಅಧ್ಯಯನಕ್ಕೆ ನವದೆಹಲಿಯ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್‍ಟ್ರೇಶನ್ ಸಂಸ್ಥೆಯ 10 ಹಿರಿಯ ಅಧಿಕಾರಿಗಳು ಭೇಟಿ ನೀಡಿದ ತಂಡದಲ್ಲಿ ಮೌರೀಶ್ಯಸ್ ಸರಕಾರದ ಹಿರಿಯ ಅಧಿಕಾರಿ ಮುನ್ಬೋಧ್ ಯಂಧೀಸ್ಟರ್, ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳಾದ ಬ್ರಿಗೇಡಿಯರ್ ಹರ್ಷ ಚಿಬ್ಬಿರ್, ಬ್ರಿಗೇಡಿಯರ್ ಸುನಿತ್ ಮಲ್ಲಿಕ್, ಬ್ರಿಗೇಡಿಯರ್ ಅಜಯ ಕುಮಾರ್ ಶರ್ಮ, ಬ್ರಿಗೇಡಿಯರ್ ಪಾಟೀಲ್, ಕ್ಯಾ.ಸಂಜಯ್ ಚೋಪ್ರ, ಕ್ಯಾ.ವಿಜಯ್ ಕುಮಾರ್ ಝಾ, ಭಾರತೀಯ ರೈಲ್ವೇ ಹಿರಿಯ ಆರ್ಥಿಕ ವ್ಯವಸ್ಥಾಪಕರಾದ , ಉಪೇಂದ್ರ ಸಿಂಗ್, ಕುಂಥಾಲ್ ಸನ್ ಶರ್ಮ, ಐ.ಐ.ಪಿ.ಎ. ಸಂಸ್ಥೆಯ ಡಾ. ಸುಜೀತ್ ಪ್ರಸೂತ್ ಆಗಮಿಸಿ ಗ್ರಾಮದ ಪಂಚಾಯತ್ ರಾಜ್ ವ್ಯವಸ್ಥೆಯ ಮಾಹಿತಿ ಪಡೆದು ಕೊಂಡು ಪಂಚಾಯತ್ ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿ ಎಂ.ಪ್ರಕಾಶ್ ಗ್ರಾ.ಪಂ. ಅಧ್ಯಕ್ಷ ಪುಲಿಯಂಡ ಬೋಪಣ್ಣ, ಉಪಾಧ್ಯಕ್ಷೆ ರೇಖಾ ಗಣಪತಿ ಸದಸ್ಯರಾದ ಸುಶೀಲ, ಇಂದಿರಾ, ದೀಪಕ್ ಗಣಪತಿ, ಬಾಬು ,ಪಿಡಿಓ ಅಬ್ದುಲ್ಲಾ ಕಾರ್ಯದರ್ಶಿ ಗಂಗಮ್ಮ ಸೇರಿದಂತೆ ವಿವಿಧ ಯೋಜನೆಯ ಫಲಾನುಭವಿಗಳು ಗ್ರಾಮಸ್ಥರು ಹಾಜರಿದ್ದರು.
ಪಂಚಾಯತ್ ವ್ಯಾಪ್ತಿಯ ಶಾಲೆ, ಆಸ್ಪತ್ರೆ, ಅಂಗನವಾಡಿ ಕೇಂದ್ರಗಳ ನಿರ್ವಹಣೆ ಕುರಿತು ಪರಿಶೀಲಿಸಿದ ತಂಡ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ದೇಶಸೇವೆಗೆ ಹೆಚ್ಚಿನ ಅವಕಾಶವಿರುವ ಭಾರತೀಯ ಸೇನೆಗೆ ಸೇರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪಾಲಿಬೆಟ್ಟ ಚೆಶೈರ್ ಹೋಂ ವಿಶೇಷ ಚೇತನ ಶಾಲೆಗೆ ಭೇಟಿ ನೀಡಿದ ತಂಡ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭ ಸಂಸ್ಥೆಯ ವ್ಯವಸ್ಥಾಪಕರುಗಳಾದ ಗೀತಾ ಚಂಗಪ್ಪ, ಪುನಿತಾ ರಾಮಸ್ವಾಮಿ, ಪ್ರಾಂಶುಪಾಲರಾದ ಶಿವರಾಜ್ ಹಾಜರಿದ್ದು ಮಾಹಿತಿ ನೀಡಿದರು.