ಮಡಿಕೇರಿ, ನ. 11: ಕೊಡಗಿನ ಜನತೆಯ ತೀವ್ರ ವಿರೋಧದ ನಡುವೆಯೂ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಠಮಾರಿತನ ದೊಂದಿಗೆ ಆಚರಿಸಿರುವ ಟಿಪ್ಪು ಜಯಂತಿಯ ಕಾರ್ಯಕ್ರಮ ಸರಕಾರಕ್ಕೆ ಮುಳುವಾಗಲಿದೆ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲೆಯ ಜನತೆಯೊಂದಿಗೆ ಸಂಘ-ಸಂಸ್ಥೆಗಳ ವಿರೋಧದ ನಡುವೆ ನಡೆಸಿರುವ ಟಿಪ್ಪು ಜಯಂತಿ ಆಚರಣೆಯಿಂದ ರಾಜ್ಯ ಸರಕಾರದ ಯಾವ ಉದ್ದೇಶ ಫಲಿಸದು ಎಂದು ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ದೇವಯ್ಯ ಟೀಕಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಇಂಥ ಹಠಮಾರಿತನ ಬಿಡದಿದ್ದರೆ ಕಾಂಗ್ರೆಸ್ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಸಮಾಜದ ಸಭೆ
ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿಯ ಸದಸ್ಯರೆಲ್ಲ ಸೇರಿ ಖಂಡನೆ ವ್ಯಕ್ತಪಡಿಸಿದರು. ದೇವಟ್ಟಿಪರಂಬಿನಲ್ಲಿ ಟಿಪ್ಪು ಕುತಂತ್ರದಿಂದ ಕಗ್ಗೊಲೆಗೊಂಡ ಕೊಡವ ಹಿರಿಯರಿಗೆ ಹಾಗೂ ಟಿಪ್ಪು ಜಯಂತಿ ಆಚಣೆಯ ಸಂದರ್ಭ ಮರಣವನ್ನಪ್ಪಿದ ದೇವಪಂಡ ಕುಟ್ಟಪ್ಪ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು.
ಕೊಂಗಂಡ ಎಸ್. ದೇವಯ್ಯ ಮಾತನಾಡಿ, ಕೊಡವರನ್ನು ಹತ್ಯೆಗೈದ ಮತಾಂದ ಟಿಪ್ಪುವಿನ ಜಯಂತಿಯನ್ನು ಆಚರಿಸವದು ಖಂಡನೀಯ. ನಾವಿಂದು ಸಭೆ ಸೇರಿ ಟಿಪ್ಪು ಜಯಂತಿಯನ್ನು ಖಂಡಿಸುತೇವೆಂದರು. ಸಭೆಯಲ್ಲಿ ಉಪಾಧ್ಯಕ್ಷ ಮಣವಟ್ಟಿರ ಈ. ಚಿಣ್ಣಪ್ಪ, ಕಾರ್ಯದರ್ಶಿ ಅರೆಯಡ ರಮೇಶ್ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು. ಉಳ್ಳಿಯಡ ಗಂಗಮ್ಮ ನಂಜಪ್ಪ ಪ್ರಾರ್ಥಿಸಿದರೆ, ಜಂಟಿ ಕಾರ್ಯದರ್ಶಿ ಮಾದೇಟಿರ ಬೆಳ್ಳಯಪ್ಪ ವಂದಿಸಿದರು.