ಸಿದ್ದಾಪುರ, ನ. 11: ಕೊಡಗಿನ ವೀರ ಸೇನಾನಿ ಫೀ.ಮಾ. ಕಾರ್ಯಪ್ಪ ಅವರಿಗೆ ‘ಭಾರತ ರತ್ನ’ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಶಿಫಾರಸು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.ಫೀ.ಮಾ.ಕೆ.ಎಂ ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಿದ್ದು, ಕಾಂಗ್ರೆಸ್ ವಿರುದ್ಧ ಬಿ.ಜೆ.ಪಿ ಇಲ್ಲಸಲ್ಲದ ಆರೋಪವನ್ನು ಮಾಡುತ್ತಿದೆ ಎಂದು ವೀಣಾ ಅಚ್ಚಯ್ಯ ಟೀಕಿಸಿದ್ದಾರೆ.ಅಮ್ಮತ್ತಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಜಿಲ್ಲೆಯ ಮಾತ್ರವಲ್ಲ ರಾಷ್ಟ್ರದ ಹೆಮ್ಮೆ. ಅವರಿಗೆ ಭಾರತ ರತ್ನ ಗೌರವ ನೀಡಬೇಕು
(ಮೊದಲ ಪುಟದಿಂದ) ಎಂಬದು ಎಲ್ಲರ ಆಗ್ರಹವಾಗಿದೆ. ಆದರೆ ಕಾಂಗ್ರೆಸ್ ಪಕ್ಷವು ಫೀ.ಮಾ. ಕಾರ್ಯಪ್ಪರವರಿಗೆ ಭಾರತ ರತ್ನ ನೀಡಬಾರದೆಂದು ಹೇಳುತ್ತಿದೆ ಎಂದು ಬಿ.ಜೆ.ಪಿ ಸುಳ್ಳು ಆರೋಪ ಮಾಡುತ್ತಿರುವದು ಖಂಡನೀಯ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದೇಶದ ಪ್ರಥಮ ಮಹಾ ದಂಡನಾಯಕ ಫೀ.ಮಾ ಕಾರ್ಯಪ್ಪರವರಿಗೆ ಭಾರತ ರತ್ನ ಗೌರವ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ ಎಂದರು. ರಾಷ್ಟ್ರೀಯ ಕಾಂಗ್ರೆಸ್ ವಕ್ತಾರರು ಈ ಬಗ್ಗೆ ಆಕ್ಷೇಪಿಸಿದ್ದಾರಲ್ಲವೇ ಎಂದು ಪ್ರಶ್ನಿಸಿದಾಗ ಅವರು ಮೇಲಿನಂತೆ ಸಮರ್ಥಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರ ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಗ್ರಾಮೀಣ ರಸ್ತೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಅಮ್ಮತ್ತಿ ಗ್ರಾ.ಪಂ ವ್ಯಾಪ್ತಿಯ ಪುಲಿಯೇರಿ ಕಲ್ಲುಕೊರೆ ಮಸೀದಿಯ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು.
ರಾಜ್ಯ ಸರಕಾರವು ಪ್ರತಿ ಪ್ಯಾಕೇಜ್‍ನಲ್ಲಿ 50 ಕೋಟಿ ರೂ ಜಿಲ್ಲೆಗೆ ನೀಡುತ್ತಿದ್ದು, ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿ ಕಾಣುತ್ತಿದೆ. ಗ್ರಾಮಸ್ಥರು ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳಬೇಕು ಎಂದರು.
ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಪಿ.ಸಿ ಹಸೈನಾರ್ ಹಾಜಿ ಮಾತನಾಡಿ, ರಾಜ್ಯ ಸರಕಾರವು ಬಡವರ ಹಾಗೂ ಜನಪರ ಕೆಲಸವನ್ನು ಮಾಡುತ್ತಿದ್ದು, ರಾಜ್ಯ ಸರಕಾರದ ಅನುದಾನವನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ಕೆಲ ಅಧಿಕಾರಿಗಳು ರಾಜಕೀಯ ಮಾಡುತ್ತಿದ್ದು, ಬಿ.ಜೆ.ಪಿ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಎಸ್ ವೆಂಕಟೇಶ್ ಮಾತನಾಡಿ, ರಾಜ್ಯ ಸರಕಾರದ ಜನಪ್ರಿಯ ಯೋಜನೆಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸುವದರ ಮೂಲಕ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಪ್ರಯತ್ನಿಸಬೇಕು ಎಂದರು.
ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಆನಂದಪುರ ರಸ್ತೆ, ಮುತ್ತಪ್ಪ ದೇವಾಲಯ ರಸ್ತೆ, ಇಂಜಿಲಗರೆ ಮೇಫ್ಲವರ್-ಗೌರಿ ರಸ್ತೆ, ವೀರಂಗೊಲ್ಲಿ- ಕಿಸೂರು ರಸ್ತೆ, ಗೌರಿ ರಸ್ತೆಗೆ ಒಟ್ಟು 54 ಲಕ್ಷ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉಸ್ಮಾನ್ ಹಾಜಿ, ವಲಯ ಕಾಂಗ್ರೆಸ್ ಅಧ್ಯಕ್ಷ ಶಾಜಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ರಾಜೀವ್ ಗಾಂಧಿ ಸಂಘಟನೆಯ ಜಿಲ್ಲಾ ಸಂಚಾಲಕ ತೆನ್ನೀರ ಮೈನಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹನೀಫ್, ವಕ್ಫ್ ಮಂಡಳಿ ಸದಸ್ಯ ಸಯ್ಯದ್ ಬಾವ, ಸೇವಾದಳದ ಶರಣು, ರಫೀಕ್ ನೌಷಾದ್, ಉಮ್ಮರ್ ಸೇರಿದಂತೆ ಗ್ರಾಮಸ್ಥರು ಇದ್ದರು.
ಮರಳಿ ಅಧಿಕಾರಕ್ಕೆ
ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವದು ಖಚಿತ ಎಂದು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಳೆದ ನಾಲ್ಕುವರೆ ವರ್ಷಗಳಿಂದ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ರಾಜ್ಯದ ಜನರ ವಿಶ್ವಾಸಗಳಿಸಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದರು. ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಜಿಲ್ಲೆಯಾದ್ಯಂತ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದ್ದು ಎಲ್ಲಾ ಜನಾಂಗದವರು ಉತ್ತಮ ರೀತಿಯಲ್ಲಿ ಸ್ಪಂದನ ನೀಡುತ್ತಿದ್ದಾರೆಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷÀ ಶಿವುಮಾದಪ್ಪ ಮಾತನಾಡಿ ಇತ್ತೀಚೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವಹಿಸಿಕೊಂಡಿದ್ದ ವೇಣುಗೋಪಾಲ್ ಜಿಲ್ಲೆಗೆ ಭೇಟಿ ನೀಡಿದ ಸಂಧರ್ಭದಲ್ಲಿ ಪಕ್ಷವನ್ನು ಸಂಘಟಿಸಲು ಹಾಗೂ ಮನೆಮನೆ ಕಾರ್ಯಕ್ರಮವನ್ನು ತಾ. 13 ರ ಒಳಗೆ ಮುಕ್ತಾಯಗೊಳಿಸಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಐ.ಎನ್.ಟಿ.ಯು.ಸಿ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ ಜಿಲ್ಲೆಯಾದ್ಯಂತ ಮನೆಮನೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸುಮಾರು 40 ಸಾವಿರ ಮನೆಗಳಿಗೆ ಭೇಟಿ ನೀಡಿದ್ದು ಪ್ರತೀ ಮನೆಯಿಂದಲೂ ಮತದಾರರಿಂದ ಅಭೂತಪೂರ್ವ ಸ್ಪಂದನ ದೊರಕಿದೆ ಎಂದರು.
ಈ ಸಂದರ್ಭ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್, ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್, ತಾ.ಪಂ. ಸದಸ್ಯ ರವೀಂದ್ರ ಅಪ್ರು, ಗ್ರಾ.ಪಂ. ಉಪಾಧ್ಯಕ್ಷೆ ಸಪಿಯಾ, ಮಡಿಕೇರಿ ವಿಧಾನ ಸಭಾಕ್ಷೇತ್ರದ ಅಧ್ಯಕ್ಷ ಮಿಥುನ್, ವಲಯ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಕಾಂಗ್ರೆಸ್ ಮುಖಂಡರುಗಳಾದ ಕೆ.ಎಂ ಲೋಕೇಶ್, ಎ.ಕೆ. ಹಕೀಂ, ಮೊಣ್ಣಪ್ಪ, ಮಧು ಬೋಯಿಕೇರಿ ಹಾಗೂ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.