ಗೋಣಿಕೊಪ್ಪ ವರದಿ, ನ. 11: ಜೀವ ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿಶೇಷ ಕಾಳಜಿ ವಹಿಸುವ ಚಿಂತನೆ ರೂಡಿಸಿ ಕೊಳ್ಳಬೇಕು ಎಂದು ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಎ.ಸಿ. ಭೀಮಯ್ಯ ಸಲಹೆ ನೀಡಿದರು.
ವೀರಾಜಪೇಟೆ ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕೈಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 7 ದಿನಗಳ ವಿಶೇಷ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡಿದರು. ಯುವ ಜನತೆ ಅಪಘಾತ ಸಂದರ್ಭ ನೊಂದವರನ್ನು ಆಸ್ಪತ್ರೆಗೆ ಸೇರಿಸುವ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಮಾನವೀಯತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
7 ದಿನ ನಡೆದ ಶಿಬಿರದಲ್ಲಿ ದೈನಂದಿನ ಶೈಕ್ಷಣಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಶ್ರಮದಾನ ನಡೆಸಿದರು. ಆಂಗ್ಲ ಭಾಷೆಯ ಮಹತ್ವ ಕುರಿತು ಸುದೇವಿ ಪದವಿ ಕಾಲೇಜು ಅಧ್ಯಕ್ಷೆ ಕೆ.ಎಸ್. ಜ್ಯೋತಿ ಉಪನ್ಯಾಸ ನೀಡಿದರು. ಪಕ್ಷಿ ವೀಕ್ಷಣೆ ಬಗ್ಗೆ ಅರಣ್ಯ ಕಾಲೇಜು ಪ್ರಾಧ್ಯಾಪಕ ಜಡೇಗೌಡ ಮಾಹಿತಿ ಹಂಚಿಕೊಂಡರು.
ನಿತ್ಯ ಜೀವನದಲ್ಲಿ ಆರೋಗ್ಯದ ಬಗ್ಗೆ ಶ್ರೀ ರಾಮಕೃಷ್ಣ ಸೇವಾಶ್ರಮದ ವೈದ್ಯ ಅಲ್ಲಮಪ್ರಭು ಅವರಿಂದ ಉಪನ್ಯಾಸ, ನಿವೃತ್ತ ಪ್ರಾಧ್ಯಾಪಕ ಟಿ.ಎಂ. ದೇವಯ್ಯ ಅವರಿಂದ ಯುವಜನತೆ ಮತ್ತು ನಾಯಕತ್ವದ ಬಗ್ಗೆ ಉಪನ್ಯಾಸ, ಜಮ್ಮಡ ಜಯ ಜೋಯಪ್ಪ ಅವರಿಂದ ಕರಾಟೆ ಪ್ರದರ್ಶನ ನಡೆಯಿತು.
ಕಾವೇರಿ ಕಾಲೇಜು ಸಪ್ತಸ್ವರ ಮೆಲೋಡೊಯಸ್ ಅವರಿಂದ ಜನಪದ ಗಾಯನ, ಕಲಾವಿದ ಬಿ.ಆರ್. ಸತೀಶ್ ಹಾಗೂ ಗಾಯಕ ಟಿ.ಡಿ. ಮೋಹನ್ ತಂಡದಿಂದ ಕುಂಚ ಗಾಯನ ಗಮನ ಸೆಳೆಯಿತು. ಉಳುವಂಗಡ ಲೋಹಿತ್ ಹಾಗೂ ಮಾಳೇಟೀರ ಅಜಿತ್ ಪೂವಣ್ಣ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಭಗವತಿ ದೇವಸ್ಥಾನ ಆವರಣದಲ್ಲಿ ಶಿಬಿರಾರ್ಥಿಗಳಿಗೆ ಯೋಗ ಗುರು ಗುರುರಂಗಯ್ಯ ಬಲ್ಲಾಳ್ ಯೋಗ ತರಬೇತಿ ನೀಡಿದರು. ಗ್ರಾಮಸ್ತರೊಂದಿಗೆ ಶಿಬಿರ ಜ್ಯೋತಿ ಕಾರ್ಯಕ್ರಮ ಆಯೋಜಿಸಿ ಗ್ರಾಮಸ್ತರೊಂದಿಗೆ ಶಿಬಿರಾರ್ಥಿಗಳು ಬೆರೆಯಲು ಅವಕಾಶ ಮಾಡಿ ಕೊಡಲಾಯಿತು. ಎನ್.ಎಸ್.ಎಸ್. ಘಟಕ ನಾಯಕರುಗಳಾದ ರಿತೇಶ್, ಕೀರ್ತನ ಶಿಬಿರ ನಡೆಸಿಕೊಟ್ಟರು.
ಈ ಸಂದರ್ಭ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ದಾನಿ ಕುಪ್ಪಂಡ ಪೂವಣ್ಣ, ಹಾತೂರು ಗ್ರಾ.ಪಂ. ಸದಸ್ಯೆ ಜಮ್ಮಡ ಕವಿತಾ, ಶಾಲಾ ಮುಖ್ಯ ಶಿಕ್ಷಕಿ ಪಿ.ಡಿ. ಅನ್ನಮ್ಮ, ದಾನಿ ಕೊಕ್ಕಂಡ ಧರ್ಮಜ, ಯೋಜನಾಧಿಕಾರಿ ಕೆ.ಎಂ. ಕುಸುಮ್, ಸಹ ಶಿಬಿರಾರ್ಥಿ ಕೆ.ಪಿ. ಗಾಯಿತ್ರಿ ಉಪಸ್ಥಿತರಿದ್ದರು.