ಹೆಬ್ಬಾಲೆ, ನ. 11: ಜಿಲ್ಲೆಯ ಗಡಿಗ್ರಾಮ ಅರೆಮಲೆನಾಡು ಪ್ರದೇಶ ಹೆಬ್ಬಾಲೆ ಗ್ರಾಮದಲ್ಲಿ ತಾ.19 ರಂದು ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವವು ಅದ್ದೂರಿಯಾಗಿ ನಡೆಯಲಿದೆ.
ಅಮಾವಾಸ್ಯೆಯ ತಾ.19 ರಂದು ರಾತ್ರಿ ದೇವಿಯ ಪೂಜೆ ನೆರವೇರಲಿದೆ.
ಪ್ರತಿವರ್ಷದಂತೆ ಅಮ್ಮನವರ ಸನ್ನಿಧಿಯಲ್ಲಿ ಬೆಳಿಗ್ಗೆ 7 ಘಂಟೆಗೆ ಗಣಪತಿ ಪೂಜೆ,ಪುಣಾಹಃ ರಕ್ಷಾಬಂಧನ ಧ್ವಜಾರೋಹಣ, ನವಗ್ರಹ ಸ್ಥಾಪನೆ, ನವಗ್ರಹ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ನಡೆಯಲಿವೆ.
ಅಂದು ಗ್ರಾಮದಲ್ಲಿ ದೇವಿಯ ವಾರ್ಷಿಕ ಹಬ್ಬದ ಅಂಗವಾಗಿ ಪವಿತ್ರ ಬನದಲ್ಲಿ ಬನಶಂಕರಿ ದೇವಸ್ಥಾನದಲ್ಲಿ ಬೆಳಿಗ್ಗೆ ಕಳಶ ಸ್ಥಾಪಿಸುವದರೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ದೇವಸ್ಥಾನ ಸಮಿತಿ ಅಧ್ಯಕ್ಷ ಯಜಮಾನ್ ಎಚ್.ಎನ್. ಬಸವರಾಜು ನೇತೃತ್ವದಲ್ಲಿ ನಡೆಯಲಿವೆ.
ಸಂಜೆ 4 ಗಂಟೆಗೆ ಕ್ಷೀರಾಭಿಷೇಕ, ಗಣಪತಿ ಪೂಜೆ ನಂತರ ದೇವಿಯನ್ನು ಅಲಂಕರಿಸಲಾಗುತ್ತದೆ. ರಾತ್ರಿ 8 ಗಂಟೆಗೆ ಬನದಲ್ಲಿ ಅಗ್ನಿಕುಂಡ ಸ್ಥಾಪಿಸಲಾಗುತ್ತದೆ ಹರಕೆ ಹೊತ್ತ ಭಕ್ತಾದಿಗಳು ಅಗ್ನಿಕುಂಡ ತುಳಿದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ ಎಂದು ಸಮಿತಿಯ ಕಾರ್ಯದರ್ಶಿ ಎಚ್.ಪಿ.ರಾಜು ತಿಳಿಸಿದ್ದಾರೆ.
ಹಬ್ಬದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಹಾಗೂ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗುತ್ತದೆ.
ನಂತರ ರಾತ್ರಿ 8 ಗಂಟೆ ವೇಳೆಗೆ ಶ್ರೀ ಬನಶಂಕರಿ ಮತ್ತು ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಬಳಿಯಿಂದ ವಿದ್ಯುತ್ ಅಲಂಕೃತ ಮಂಟಪದಲ್ಲಿ ಬನಶಂಕರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಗುತ್ತದೆ.
ಹರಕೆ ಹೊತ್ತ ಭಕ್ತಾಧಿಗಳು 9 ದಿವಸ ಉಪವಾಸ ವ್ರತ ಆಚರಿಸಿ ಅಂದು ಮೆರವಣಿಗೆಯಲ್ಲಿ ತಾಯಿಯ ಬನಕ್ಕೆ ಬಂದು ದೇವಸ್ಥಾನದ ಮುಂದೆ ಹಾಕಿರುವ ಅಗ್ನಿಕುಂಡವನ್ನು ಹಾಯ್ದು ದೇವಿಯ ದರ್ಶನ ಪಡೆಯುವರು.
ದೇವಿಯ ಉತ್ಸವದೊಂದಿಗೆ ಗ್ರಾಮದ ಇತರೆ ಭಾಗಗಳಿಂದ ಹೊರಟ ಉತ್ಸವ ಮಂಟಪಗಳ ಶೋಭಾಯಾತ್ರೆಯು ಹಬ್ಬಕ್ಕೆ ಮೆರಗು ನೀಡುತ್ತವೆ.
ಮೆರವಣಿಗೆ ಸಂದರ್ಭ ಗ್ರಾಮದ ಬಸ್ ನಿಲ್ದಾಣದ ಬಳಿ ಸಿಡಿಸುವ ಬಣ್ಣ ಬಣ್ಣದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸೆಳೆಯುತ್ತದೆ.
ಈ ಹಬ್ಬಕ್ಕೆ ದೇಶ ವಿದೇಶದಲ್ಲಿ ನೆಲಸಿರುವ ಗ್ರಾಮಸ್ತರು, ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗದ ಜನರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಮಂದಿ ಪಾಲ್ಗೊಳ್ಳುವರು.
ಜಾನಪದ ಕ್ರೀಡಾಕೂಟ : ಮಾದರಿ ಯುವಕ ಸಂಘದ ಆಶ್ರಯದಲ್ಲಿ ತಾ.15 ರಿಂದ 21 ರ ವರೆಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ.
ಜಾತ್ರೆಯ ಅಂಗವಾಗಿ ತಾ.20 ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಗ್ರಾಮೀಣ ಜಾನಪದ ಕ್ರೀಡೆಯಾದ ಎತ್ತಿನ ಗಾಡಿ ಓಟ ಸ್ಪರ್ಧೆ ಹಾಗೂ ಇವರ ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ.