ಮಡಿಕೇರಿ, ನ. 13: ಆರ್ಕಿಡ್ ಪುಷ್ಪೋದ್ಯಮದಲ್ಲಿ ಪ್ರಸ್ತುತ ಅತಿ ಹೆಚ್ಚು ಬೇಡಿಕೆ ಪಡೆಯುತ್ತಿರುವ ನವೀನ ವಾಣಿಜ್ಯ ಬೆಳೆಯಾಗಿದೆ. ಭಾರತ ದೇಶದಲ್ಲಿ ಈ ಬೆಳೆಗೆ ಹೆಚ್ಚು ಬೇಡಿಕೆ ಕಂಡುಬರುತ್ತಿದೆಯಾದರೂ ಇದನ್ನು ಹೆಚ್ಚು ಬೆಳೆಯಲಾಗುತ್ತಿಲ್ಲ. ಬದಲಿಗೆ ಕೋಟ್ಯಾಂತರ ರೂ. ಬೆಲೆಬಾಳುವ ಆರ್ಕಿಡ್ ಹೂ ಮತ್ತು ಗಿಡಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದ ಹವಾಮಾನ ಆರ್ಕಿಡ್ ಬೆಳೆಗೆ ಸೂಕ್ತವಾಗಿದ್ದು, ಇದು ರೈತರಿಗೆ ವಾಣಿಜ್ಯವಾಗಿ ಹೆಚ್ಚು ಉಪಕಾರಿಯಾಗುವ ಆರ್ಥಿಕ ಬೆಳೆಯಾಗುವ ಅವಕಾಶವಿದ್ದು, ಇದೀಗ ಇದನ್ನು ಕೊಡಗು ಜಿಲ್ಲೆಯಲ್ಲಿ ಪರಿಚಯಿಸುವ ಪ್ರಯತ್ನವೊಂದು ನಡೆಯುತ್ತಿದೆ.ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದಿಂದ ಜಿಲ್ಲೆಯ ಯುವ ವಿಜ್ಞಾನಿಯೋರ್ವರು ಇದಕ್ಕೆ ಸಲ್ಲಿಸಿದ್ದ ಯೋಜನಾ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದ್ದು, ಯೋಜನೆ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಅನುಷ್ಠಾನಗೊಳ್ಳುತ್ತಿದೆ.
ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದಲ್ಲಿ ಯುವ ವಿಜ್ಞಾನಿಗಳು ಹಾಗೂ ತಾಂತ್ರಿಕತೆಯನ್ನು ಉತ್ತೇಜಿಸಲು ಕಾರ್ಯ ಯೋಜನೆಯಿದೆ. ಇದಕ್ಕೆ ಮೂಲತಃ ಅಮ್ಮತ್ತಿಯವರಿಂದ ಆರ್ಕಿಡ್ನಲ್ಲಿ ಶಿವಮೊಗ್ಗ ಕೃಷಿ ವಿ.ವಿ.ಯಿಂದ ಪಿ.ಎಚ್.ಡಿ. ಪದವಿ ಪಡೆದಿರುವ ಡಾ. ಮಂಡೇಪಂಡ ಕಾವೇರಿ ದೇವಯ್ಯ ಅವರು ವಿವರವಾದ ಯೋಜನಾ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಇದಕ್ಕೆ 2016ರ ಫೆಬ್ರವರಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದಿಂದ ಅನುಮೋದನೆ ದೊರೆತಿದೆ. ಇದಕ್ಕೆ ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯವು ಪೂರ್ಣ ಸಹಕಾರ ನೀಡುತ್ತಿದ್ದು, ಕೊಡಗಿನಲ್ಲಿ ಇದನ್ನು ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಶಿವಮೊಗ್ಗ ಕೃಷಿ ವಿ.ವಿ. ಅಧೀನದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಆರ್ಕಿಡ್ ಬೆಳೆಯನ್ನು ಬೆಳೆಯಲಾಗುತ್ತಿದ್ದು, ಆಸಕ್ತ ರೈತರಿಗೆ, ಸ್ವಸಹಾಯ ಸಂಘ, ಸ್ತ್ರೀಶಕ್ತಿ ಸಂಘಗಳಿಗೆ ಪ್ರಾತ್ಯಕ್ಷಿಕೆಯೊಂದಿಗೆ ಸೂಕ್ತ ತರಬೇತಿಯ ಹಾಗೂ ಮಾರ್ಗದರ್ಶನವನ್ನು ನೀಡಲಾಗುತ್ತಿದೆ.
2016ರ ಜುಲೈಯಿಂದ ಈ ಪ್ರಯತ್ನ ಆರಂಭಿಸಲಾಗಿದ್ದು, ಆರ್ಕಿಡ್ ಗಿಡಗಳು ಅರಳಿ ನಿಂತಿವೆ. ಈ ಯೋಜನೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದಿಂದ ರೂ. 30 ಲಕ್ಷ ಅನುದಾನವನ್ನೂ ಮಂಜೂರು ಮಾಡಲಾಗಿದೆ. ಯುವ ವಿಜ್ಞಾನಿ ಡಾ. ಕಾವೇರಿ ದೇವಯ್ಯ ಅವರು ಮುಂದಾಳತ್ವದಲ್ಲಿ ಆಸಕ್ತರಿಗೆ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ ಮೂರು ತಂಡಗಳಿಗೆ ಪ್ರತ್ಯೇಕವಾಗಿ ಉಚಿತ ತರಬೇತಿ ನೀಡಲಾಗಿದ್ದು, 240 ಮಂದಿ ಮಾಹಿತಿ ಪಡೆದುಕೊಂಡಿದ್ದಾರೆ. ಇದು ಮೂರು ವರ್ಷಗಳ ಯೋಜನೆಯಾಗಿದ್ದು, ಕಾವೇರಿ ಅವರೊಂದಿಗೆ ಸಲಹೆಗಾರರಾಗಿ ಅರಣ್ಯ ಮಹಾ ವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಹಾಗೂ ಸಹಾಯಕ ಸಂಶೋಧಕರಾಗಿ ಡಾ. ಜಡೇಗೌಡ, ಸಹಾಯಕಿಯಾಗಿ ಲಕ್ಷ್ಮಿ ಅವರು ಕಾರ್ಯನಿರ್ವಸುತ್ತಿದ್ದಾರೆ.
(ಮೊದಲ ಪುಟದಿಂದ) ಕೊಡಗಿನ ವಾತಾವರಣ ಆರ್ಕಿಡ್ ಬೆಳೆಗೆ ಪೂರಕವಾಗಿದೆ. ಟ್ರಾಫಿಕಲ್ ಹಿಲ್ (ಉಷ್ಣವಲಯ ಬೆಟ್ಟಗುಡ್ಡ) ಪ್ರದೇಶ ಇದಕ್ಕೆ ಸೂಕ್ತವಾಗಿದೆ ಎನ್ನುತ್ತಾರೆ ಡಾ. ಕಾವೇರಿ.
9 ಬಗೆಯ ಹೂ : ಆರ್ಕಿಡ್ನಲ್ಲಿ ಸುಮಾರು 800ದಷ್ಟು ವಿವಿಧ ಬಗೆಯ ಹೂಗಳಿಗೆ. ಅಲ್ಲದೆ ಎರಡು ಲಕ್ಷಕ್ಕೂ ಅಧಿಕ ಹೈಬ್ರೀಡ್ ತಳಿಗಳಿಗೆ. ವಿಶ್ವ ಮಾರುಕಟ್ಟೆಗೆ ಥೈವಾನ್, ಥೈಲ್ಯಾಂಡ್, ನೆದರ್ಲ್ಯಾಂಡ್ಸ್, ಬ್ರೆಜಿಲ್, ಕೊಲಂಬಿಯಾ, ಮಲೇಷಿಯಾ, ಸಿಂಗಪೂರ್ನಂತಹ ದೇಶಗಳಿಂದ ಆರ್ಕಿಡ್ ಪೂರೈಕೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಸ್ತುತ ಅರಣ್ಯ ಮಹಾವಿದ್ಯಾನಿಲಯದಲ್ಲಿ 9 ಬಗೆಯ ಆರ್ಕಿಡ್ ಗಿಡಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಪೈಕಿ ಫೆಲನಾಪ್ಸಿಸ್, ಅನ್ಸೀಡಿಯಂ, ವ್ಯಾಂಡ ಬಗೆಯ ಗಿಡಗಳು ಉತ್ತಮ ರೀತಿಯಲ್ಲಿ ಫಲಿತಾಂಶ ನೀಡುತ್ತಿರುವದಾಗಿ ಅವರು ಮಾಹಿತಿ ನೀಡಿದರು.
ಕೊಡಗಿನಲ್ಲಿ ಮಹಿಳೆಯರು ಪ್ರತಿಭಾನ್ವಿತರಾಗಿದ್ದಾರೆ. ಇಲ್ಲಿ ಪ್ರತಿ ಮನೆ ಮನೆÀಗಳಲ್ಲಿ ಉದ್ಯಾನವನಗಳ ಮಾದರಿಯಲ್ಲಿ ಹೂ ಗಿಡಗಳನ್ನು ಬೆಳೆದು ಮಹಿ¼ಯರು ಪೋಷಣೆ ಮಾಡುತ್ತಾರೆ. ಇದರೊಂದಿಗೆ ಆರ್ಕಿಡ್ ಅನ್ನು ವಾಣಿಜ್ಯ ಉದ್ದೇಶವಿಟ್ಟುಕೊಂಡು ಏಕೆ ಬೆಳೆಯಲು ಪ್ರಯತ್ನಿಸಬಾರದು ಎಂಬದು ತಮ್ಮ ಚಿಂತನೆಯಾಗಿದೆ ಎಂದು ಡಾ. ಕಾವೇರಿ ಹೇಳಿದರು. ಪ್ರಸ್ತುತ 1500ಕ್ಕೂ ಅಧಿಕ ಗಿಡಗಳನ್ನು ಬೆಳೆಯಲಾಗಿದೆ. ಬೆಂಗಳೂರಿನಿಂದ ಸಣ್ಣ ಗಿಡಗಳನ್ನು ತರಿಸಿಕೊಂಡು ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ರಾಸಾಯನಿಕ ಬಳಸದೆ ಸಾವಯವವಾಗಿಯೇ ಇದನ್ನು ಬೆಳೆಯಲಾಗಿದೆ. ಸಣ್ಣ ಗಿಡಗಳನ್ನು ಅಂದಾಜು ರೂ. 180ಕ್ಕೆ ಪಡೆದುಕೊಳ್ಳಬಹುದು. ಐದಾರು ತಿಂಗಳು ಇದನ್ನು ಪೋಷಿಸಿದರೆ ರೂ. 300 ರಿಂದ ರೂ. 350ಕ್ಕೂ ಅಧಿಕ ಲಾಭ ಪಡೆಯಬಹುದು. ಇದನ್ನು ಮುಖ್ಯವಾಗಿ ಅಲಂಕಾರಕ್ಕೆ ಬಳಸಲಾಗುತ್ತಿದ್ದು, ಹೂ ಕುಂಡಗಳ ಮೂಲ ಅಥವಾ ಗುಲಾಬಿ ಹೂವಿನಂತೆ ಹೂವನ್ನು ಗಿಡದಿಂದ ಬೇರ್ಪಡಿಸಿಯೂ ಬಳಸಬಹುದಾಗಿದೆ. ಆಸಕ್ತರು ಯಾರು ಬೇಕಾದರೂ ತಂಡವಾಗಿ ಆಗಮಿಸಿದಲ್ಲಿ ಉಚಿತವಾಗಿ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುವದು. ಗಿಡಗಳು ಬೇಕಾದಲ್ಲಿ ತರಿಸಿ ಕೊಡಲಾಗುವದು ಎಂದು ಕಾವೇರಿ ವಿವರವಿತ್ತರು.
ಯಶಸ್ಸು ಕಾಣಲಿದೆ : ಕುಶಾಲಪ್ಪ
ಅಂಥೂರಿಯಂನಂತೆ ಭವಿಷ್ಯದಲ್ಲಿ ಆರ್ಕಿಡ್ ಬೆಳೆಯೂ ಭವಿಷ್ಯದಲ್ಲಿ ಕೊಡಗಿನಲ್ಲಿ ಯಶಸ್ಸು ಕಾಣಲಿದೆ. ಕೊಡಗಿನ ವಾತಾವರಣ ಇದಕ್ಕೆ ಸೂಕ್ತವಾಗಿದೆ. ಡಾ. ಕಾವೇರಿ ಅವರು ಇದರಲ್ಲಿ ಅಗತ್ಯ ಸಂಶೋಧನೆ ನಡೆಸಿದ್ದಾರೆ ಎಂದು ಅರಣ್ಯ ಮಹಾವಿದ್ಯಾಲಯದ ಡೀನ್
ಡಾ. ಸಿ.ಜಿ. ಕುಶಾಲಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಸ್ತುತ ಅರ್ಧದಷ್ಟು ಕೆಲಸ ಮುಗಿದಿದ್ದು, ಆಸಕ್ತರಿಗೆ ತರಬೇತಿ ನೀಡಲಾಗುತ್ತಿದೆ. ಮುಂದೆ ಇದನ್ನು ಮಡಿಕೇರಿಗೂ ವಿಸ್ತರಿಸುವ ಚಿಂತನೆ ಇದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.