ಮಡಿಕೇರಿ, ನ. 12: ಕೊಡಗಿನ ಗಡಿಯಲ್ಲಿರುವ ಸಕಲೇಶಪುರ ತಾಲೂಕು ಹೊಸೂರು ಗ್ರಾಮದ ಶ್ರೀ ಬೆಟ್ಟದ ಬಸವೇಶ್ವರ ಸ್ವಾಮಿಯ ಕೌಟೆಕಾಯಿ ಜಾತ್ರೆÉಯು ತಾ. 13 ರಂದು (ಇಂದು) ಮಧ್ಯಾಹ್ನ 12 ಗಂಟೆಗೆ ಜರುಗಲಿದೆ.

ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ಜರುಗಲಿರುವ ಜಾತ್ರೆಯಲ್ಲಿ ವಿಶೇಷ ಪೂಜಾ ಮಹೋತ್ಸವದೊಂದಿಗೆ ವಿವಿಧ ರಂಗದ ಪ್ರಮುಖರನ್ನು ಸನ್ಮಾನಿಸಲಾಗುವದು ಹಾಗೂ ಧಾರ್ಮಿಕ ಸಭೆ ಏರ್ಪಡಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಹೆಚ್.ಕೆ. ಅಶ್ವತ್ಥ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಜೆಸಿಐ ಹೊಸೂರು ಬಸವೇಶ್ವರ ವತಿಯಿಂದ ಸಮೂಹ ನೃತ್ಯ ಕಾರ್ಯಕ್ರಮ ಏರ್ಪಡಿಸಿದ್ದು, ಕ್ಷೇತ್ರದ ಶಾಸಕ ಹೆಚ್.ಎ. ಕುಮಾರಸ್ವಾಮಿ ಸೇರಿದಂತೆ ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದು, ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ವಿಶೇಷತೆ: ಹಿಂದೆ ಕೊಡಗು ಸೀಮೆಯಲ್ಲೆ ಇದ್ದ ಹೊಸೂರುವಿನಲ್ಲಿ ಶತಮಾನ ಹಿಂದೆ ದುಷ್ಕರ್ಮಿಗಳಿಂದ ಎತ್ತೊಂದು ಹತ್ಯೆಯಾಗಿ ಅದರ ಮಾಂಸವನ್ನು ಸಿದ್ಧಗೊಳಿಸುತ್ತಿದ್ದ ವೇಳೆ ಭಾರೀ ಗಾಳಿ ಮಳೆ ಬಂದು ಗೋಹಂತಕರು ದಿಕ್ಕಾಪಾಲಾಗಿ ಚದುರಿಹೋದರೆನ್ನಲಾಗಿದೆ. ಮಳೆ ನಿಂತ ಮೇಲೆ ಅಲ್ಲಿ ಬಂದು ನೋಡಲಾಗಿ ಉದ್ಭವ ಬಸವೇಶ್ವರ ಕಾಣಿಸಿಕೊಂಡು ಮಾಂಸರಾಶಿ ಕಣ್ಮರೆಯಾಗಿತ್ತೆಂದು ಪ್ರತೀತಿ. ಈ ಹಿನ್ನೆಲೆಯೊಂದಿಗೆ ಪ್ರತಿವರ್ಷ ಕಾರ್ತಿಕ ಮಾಸದ ಕಡೆಯ ಸೋಮವಾರ ಇಲ್ಲಿ ಕಹಿ ಘಟನೆ ಮರೆತು ಕೌಟೆಕಾಯಿಯಿಂದ ತಯಾರಿಸಿದ ದೀಪೋತ್ಸವದೊಂದಿಗೆ ಜಾತ್ರೆ ನಡೆಸಲಾಗುವದು ಎಂದು ಹೊಸೂರು ಜನತೆಯ ನಂಬಿಕೆ.