ಕುಶಾಲನಗರ, ನ. 12: ಅತಿ ಶೀಘ್ರದಲ್ಲಿ ಬೆಳವಣಿಗೆ ಕಂಡಿರುವ ಕುಶಾಲನಗರ ಪಟ್ಟಣದಲ್ಲಿ ಖಾಸಗಿ ಬಸ್‍ನಿಲ್ದಾಣ ವ್ಯವಸ್ಥೆಯ ಕೊರತೆ ನೀಗದೆ ಗ್ರಾಮೀಣ ಭಾಗದ ಜನತೆ ಪರದಾಡುವ ಸ್ಥಿತಿಯೊಂದಿಗೆ ಸ್ಥಳೀಯ ನಾಗರಿಕರು ಅವ್ಯವಸ್ಥೆಯ ಆಗರದಲ್ಲಿ ಸಿಲುಕಿಕೊಂಡಿರುವ ದೃಶ್ಯ ದಿನನಿತ್ಯ ಗೋಚರಿಸುತ್ತಿದೆ. ಪಟ್ಟಣ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದರೂ ಇಲ್ಲಿ ಕಾನೂನು ನಿಯಮಗಳು ಬಹುತೇಕ ಗಾಳಿಗೆ ತೂರಲಾಗುತ್ತಿದೆ.
ಕುಶಾಲನಗರದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಆವರಣದ ಸುತ್ತಮುತ್ತ ಒಂದೆಡೆ ಆಟೋ ನಿಲ್ದಾಣ ಇನ್ನೊಂದೆಡೆ ಖಾಸಗಿ ಬಸ್‍ಗಳು, ಮ್ಯಾಕ್ಸಿ ಕ್ಯಾಬ್‍ಗಳು, ತಳ್ಳುವ ಗಾಡಿಗಳು ಇದರ ನಡುವೆ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬದಿಗಳಲ್ಲಿ ವಾಹನಗಳ ಅಸಮರ್ಪಕ ನಿಲುಗಡೆ ಈ ಎಲ್ಲವನ್ನು ಗಮನಿಸಿಕೊಂಡು ನಾಗರಿಕರು ತಮ್ಮ ಜೀವವನ್ನು ಪಣಕ್ಕೆ ಇಟ್ಟು ಸಂಚರಿಸಬೇಕಾದ ದುಸ್ಥಿತಿ ಇಲ್ಲಿಯದ್ದಾಗಿದೆ.
ಮುಖ್ಯಮಂತ್ರಿಗಳ ಅನುದಾನದಡಿಯಲ್ಲಿ 40 ಲಕ್ಷ ರೂ.ವೆಚ್ಚದಲ್ಲಿ ಕಳೆದ 3 ವರ್ಷಗಳ ಹಿಂದೆ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಂಡು ವರ್ಷಗಳೇ ಕಳೆದರೂ ಕಾಮಗಾರಿ ಮಾತ್ರ ಇನ್ನೂ ನೆನೆಗುದಿಗೆ ಬಿದ್ದಿದೆ.
2012 ರ ಡಿಸೆಂಬರ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕುಶಾಲನಗರಕ್ಕೆ ಭೇಟಿ ನೀಡಿದ ಸಂದರ್ಭ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಇಂದಿಗೂ ಈ ಯೋಜನೆ ಅಪೂರ್ಣಗೊಂಡು ಪ್ರಯಾಣಿಕರ ಸೇವೆಗೆ ಅಲಭ್ಯವಾಗಿದೆ. ಆದರೆ ಇದುವರೆಗೆ ಸರಕಾರದ ರೂ. 75 ಲಕ್ಷಕ್ಕೂ ಮಿಕ್ಕಿ ಅನುದಾನ ಇಲ್ಲಿ ಖರ್ಚಾಗಿದ್ದು ಕಾಮಗಾರಿ ಮಾತ್ರ ನೆಲಕಚ್ಚಿದೆ.
ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯ ಅಂಚಿನಲ್ಲಿ ಒಂದು ಏಕರೆ ಜಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಖಾಸಗಿ ಬಸ್‍ನಿಲ್ದಾಣದ ಕೆಲಸ ಕುಂಟುತ್ತಾ ಸಾಗುತ್ತಿದ್ದು, ಇನ್ನೊಂದೆಡೆ ಕಳಪೆ ಕಾಮಗಾರಿಯಿಂದ ಚರಂಡಿ ನಿರ್ಮಾಣ ಕಾಮಗಾರಿ ಕುಸಿದು ಬಿದ್ದಿದೆ.
ಕುಶಾಲನಗರದ ಸುತ್ತಮುತ್ತ ಗ್ರಾಮಗಳಿಗೆ ಹಾಗೂ ತಾಲೂಕು ಕೇಂದ್ರವಾದ ಸೋಮವಾರಪೇಟೆಗೆ ಮತ್ತು ಜಿಲ್ಲೆಯ ಸಿದ್ದಾಪುರ, ವೀರಾಜಪೇಟೆ, ಗೋಣಿಕೊಪ್ಪ ಭಾಗಗಳಿಗೆ ಈ ಮೂಲಕ ದಿನನಿತ್ಯ 70ಕ್ಕೂ ಅಧಿಕ ಖಾಸಗಿ ಬಸ್‍ಗಳು ತೆರಳುತ್ತಿವೆ. ಅಂದಾಜು 4 ಸಾವಿರಕ್ಕೂ ಅಧಿಕ ಪ್ರಯಾಣಿಕರು ದಿನನಿತ್ಯ ಕೆಲಸಗಳಿಗೆ ಖಾಸಗಿ ಬಸ್‍ಗಳನ್ನು ಅವಲಂಭಿಸಬೇಕಾಗಿದೆ.
ಪ್ರಸಕ್ತ ಕುಶಾಲನಗರ ಪಟ್ಟಣದ ಹೃದಯಭಾಗದಲ್ಲಿ ಬಸ್‍ಗಳು ಹೆದ್ದಾರಿ ರಸ್ತೆಯ ಅಂಚಿನಲ್ಲಿರುವ ಸರ್ಕಾರಿ ಬಸ್‍ನಿಲ್ದಾಣದ ಮುಂಭಾಗ ನಿಂತು ನಾಗರಿಕರಿಗೆ ಕಿರಿಕಿರಿ ಉಂಟುಮಾಡುತ್ತಿರುವದು ಸಾಮಾನ್ಯವಾಗಿದೆ. ಸರ್ಕಾರಿ ಬಸ್‍ನಿಲ್ದಾಣದ ಮುಂಭಾಗ ಎಲ್ಲೆಂದರಲ್ಲಿ ಬಸ್‍ಗಳು, ರಿಕ್ಷಾಗಳು, ಖಾಸಗಿ ವಾಹನಗಳು ನಿಲುಗಡೆಗೊಂಡು ಪಟ್ಟಣ ಕಿಷ್ಕಿಂದೆಯಾಗಿದೆ. ಇದರೊಂದಿಗೆ ಗ್ರಾಮೀಣ ಪ್ರದೇಶಕ್ಕೆ ತೆರಳುವ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳ ಕೊರತೆ ಕೂಡ ಇಲ್ಲವಾಗಿದೆ.
ಪ್ರಥಮ ಹಂತದ ಕಾಮಗಾರಿ ಪೂರ್ಣಗೊಳ್ಳುವ ನಡುವೆಯೇ ಎರಡನೇ ಹಂತದ ಕಾಮಗಾರಿಗೆ ಗುದ್ದಲಿ ಪೂಜೆ ನಡೆದು ವರ್ಷಗಳೇ ಸಂದಿವೆ. ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಎಸ್‍ಎಫ್‍ಸಿ ಯೋಜನೆಯಡಿಯಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಎರಡನೇ ಹಂತದ 20 ಲಕ್ಷ ರೂ. ವೆಚ್ಚದ ಕುಡಿಯುವ ನೀರು ಮತ್ತು ಶೌಚಾಲಯ
(ಮೊದಲ ಪುಟದಿಂದ) ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರೂ ಶೌಚಾಲಯ ಕಟ್ಟಡ ಪಾಳು ಬಿದ್ದಿರುವ ದೃಶ್ಯ ಕಾಣಬಹುದು. ವಿದ್ಯುತ್ ಸಂಪರ್ಕ ಕಲ್ಪಿಸಲು ಕಂಬಗಳನ್ನು ಅಳವಡಿಸಲಾಗಿದ್ದು ಅದನ್ನು ಟಿವಿ ಕೇಬಲ್ ಜಾಲ ತಮ್ಮ ಕೇಬಲ್ ಸಂಪರ್ಕಕ್ಕೆ ಬಳಸಿಕೊಂಡಿರುವದನ್ನು ಕಾಣಬಹುದು. ಈ ಬಸ್ ನಿಲ್ದಾಣಕ್ಕೆ ಅವಶ್ಯಕತೆಯಿರುವ ಸಂಪರ್ಕ ರಸ್ತೆಯ ಬಗ್ಗೆಯೂ ಯಾರೂ ಕಾಳಜಿ ವಹಿಸಿದಂತಿಲ್ಲ. ಜನಪ್ರತಿನಿಧಿಗಳ ದೂರದೃಷ್ಟಿಯ ಕೊರತೆ ಕೂಡ ಅಭಿವೃದ್ಧಿ ಕೆಲಸಗಳ ಕುಂಠಿತಕ್ಕೆ ಪ್ರಮುಖ ಕಾರಣ ಎನ್ನುವದು ನಾಗರಿಕರ ಆರೋಪವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಹೊಂದಾಣಿಕೆಯ ಕೊರತೆಯೂ ನಗರ ಸಮಸೆÀ್ಯಗಳ ಆಗರವಾಗಲು ಇನ್ನೊಂದು ಕಾರಣವಾಗಿದೆ.
ಪಟ್ಟಣಕ್ಕೆ ಜನರಿಗೆ ಅವಶ್ಯಕತೆ ಯಿರುವ ವಿಶೇಷ ತಹಶೀಲ್ದಾರ್ ಕಛೇರಿ, ಉಪ ನೋಂದಣಾಧಿಕಾರಿ ಕಛೇರಿಗಳು ಸರಕಾರದಿಂದ ಅನುಮೋದನೆಗೊಂಡಿದ್ದರೂ ಇನ್ನೂ ಅದನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ ಎನ್ನುತ್ತಾರೆ ಸ್ಥಳೀಯ ಬಿಜೆಪಿ ನಗರ ಅಧ್ಯಕ್ಷ ಕೆ.ಜಿ.ಮನು.
ಕಛೇರಿಗೆ ಕಟ್ಟಡ ಸೌಲಭ್ಯ ದೊರಕಿದ ತಕ್ಷಣ ಈ ಕಛೇರಿಗಳು ಪಟ್ಟಣದಲ್ಲಿ ಕಾರ್ಯಾರಂಭ ಮಾಡಲಿವೆ ಎಂದು ಉಪ ತಹಶೀಲ್ದಾರ್ ನಂದಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.
ತಕ್ಷಣ ಸಂಬಂಧಿಸಿದ ಜನಪ್ರತಿನಿಧಿಗಳು ಅಧಿಕಾರಿಗಳು ಈ ಯೋಜನೆ ಪೂರ್ಣಗೊಳಿಸಿ ಈ ಭಾಗದ ಗ್ರಾಮೀಣ ಜನತೆಯ ಸಂಪರ್ಕ ವ್ಯವಸ್ಥೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ.
-ಚಂದ್ರಮೋಹನ್