ಬೆಂಗಳೂರು, ನ. 13 : ಕೇಂದ್ರದಲ್ಲಿ ಹಲವಾರು ಸಚಿವರ ವಿರುದ್ಧ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಯಾವ ಸಚಿವರೂ ರಾಜೀನಾಮೆ ನೀಡಿಲ್ಲ ಹೀಗಾಗಿ ರಾಜ್ಯದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.ವಿಧಾನ ಪರಿಷತ್ ನಲ್ಲಿ ಪ್ರತಿಪಕ್ಷ ಸಚಿವರು ಸಚಿವ ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಪ್ರತಿಪಕ್ಷಗಳ ಧಾಳಿಗೆ ಉತ್ತರಿಸಿ ಮಾತನಾಡಿ ಸಿಎಂ ರಾಜೀನಾಮೆ ಕೇಳಿದಾಕ್ಷಣ ಕೊಡಲು ಸಾಧ್ಯವಿಲ್ಲ. ಈಗಾಗಲೇ ಸಿಐಡಿ ಜಾರ್ಜ್ ವಿರುದ್ಧ ಕ್ಲೀನ್ ಚಿಟ್ ನೀಡಿದ್ದರಿಂದ ಅವರನ್ನು ನಾನೇ ಖುದ್ದಾಗಿ ಸಂಪುಟಕ್ಕೆ ಹಿಂಪಡೆದಿದ್ದೇನೆ ಎಂದರು.ಎಫ್ ಐ ಆರ್ ದಾಖಲಾದ ತಕ್ಷಣ ರಾಜೀನಾಮೆ ಕೊಡಬೇಕೆಂದೇನಿಲ್ಲ. ಆ ರೀತಿ ಯಾವದಾದರೂ ನಿಯಮವಿದ್ದರೆ ಕೇಂದ್ರ ಸಚಿವರಿಗೂ ಅನ್ವಯವಾಗುತ್ತದೆ. ಹೀಗಾಗಿ ಸಚಿವ ಜಾರ್ಜ್ ಅವರ ರಾಜಿನಾಮೆ ಕೇಳುತ್ತಿರುವುದು ಬಿಜೆಪಿ ರಾಜಕೀಯ ತಂತ್ರಗಾರಿಕೆಯೇ ಹೊರತು ಇನ್ನೇನಿಲ್ಲ. ಹೀಗಾಗಿ ಬಿಜೆಪಿ ಹೋರಾಟವನ್ನು ನಾವು ರಾಜಕೀಯವಾಗಿ ಎದುರಿಸುತ್ತೇವೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಡಾಖಂಡಿತವಾಗಿ ಹೇಳಿದರು.
ವಿಧಾನಪರಿಷತ್ನ ವಿರೋಧ ಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಚಿವ ಜಾರ್ಜ್ ವಿರುದ್ಧ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು. ಸಚಿವ ಜಾರ್ಜ್ ವಿರುದ್ಧ ಗುರುತರ ಆರೋಪವಿರುವದರಿಂದ ಜಾರ್ಜ್ ಅಧಿಕಾರದಲ್ಲಿದ್ದರೆ ತನಿಖೆ ನಡೆಸುವ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಸಿಐಡಿ ನಡೆಸಿದ ತನಿಖೆ ವೇಳೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸಲ್ಲಿಕೆಯಾಗುವ ಮುನ್ನವೇ ಕ್ಲೀನ್ ಚಿಟ್ ನೀಡಲಾಗಿದೆ. ಇದೇ ರೀತಿ ಸಿಬಿಐ ತನಿಖೆ ವೇಳೆಯೂ ಸಚಿವ ಜಾರ್ಜ್ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಸಚಿವ ಜಾರ್ಜ್ ಕೂಡಲೇ ರಾಜೀನಾಮೆ ನೀಡಬೇಕು ಇಲ್ಲವೇ ಸಿಎಂ ಸಿದ್ದರಾಮಯ್ಯ ಅವರನ್ನು ಸಂಪುಟದಿಂದ ಕಿತ್ತುಹಾಕಬೇಕು ಎಂದು ಸಭಾಪತಿ ಡಿ.ಹೆಚ್ ಶಂಕರಮೂರ್ತಿಯವರನ್ನು ಪದೇ ಪದೇ ಮನವಿ ಮಾಡಿದರು. ಇದಕ್ಕೆ ಕಾಂಗ್ರೆಸ್ ಪ್ರತಿಯುತ್ತರ ನೀಡಿ ಆರೋಪ ಕೇಳಿದಾಕ್ಷಣ ರಾಜೀನಾಮೆ ನೀಡಿದ ಉದಾಹರಣೆಗಳಿಲ್ಲ. ಈ ಹಿಂದೆ ಮಡಿಕೇರಿ ನ್ಯಾಯಾಲಯ ಎಫ್ಐಆರ್ ದಾಖಲು ಮಾಡಲು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ. ಆದರೆ ಆರೋಪ ಸಾಭೀತಾಗಿ ದೋಷಾರೋಪ ಪಟ್ಟಿ ಸಲ್ಲಿಕೆಯಾದರೆ ಮಾತ್ರ ರಾಜೀನಾಮೆ ಪಡೆಯಬಹುದು. ಕೇಂದ್ರ ಸರ್ಕಾರದ ಸಚಿವರ ವಿರುದ್ಧವೂ ಈ ರೀತಿ ಆರೋಪಗಳಿವೆ. ಎಂದು ಸಿಎಂ ಸಿದ್ದರಾಮಯ್ಯ ಕೆ.ಜೆ. ಜಾರ್ಜ್ ರಾಜಿನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದಾಗ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದರು ಹೀಗಾಗಿ ಸಭಾಪತಿ ಶಂಕರಮೂರ್ತಿ ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.