ಕುಶಾಲನಗರ, ನ. 12: ಕೊಡಗು ಜಿಲ್ಲಾಮಟ್ಟದ 64ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ ತಾ. 14 ರಂದು ಕುಶಾಲನಗರದಲ್ಲಿ ನಡೆಯಲಿದೆ ಎಂದು ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದರು.

ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಇಲಾಖೆ, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕುಶಾಲನಗರ ಹೋಬಳಿ ವಿವಿಧ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬೈಚನಹಳ್ಳಿಯ ಮಾರಮ್ಮ ದೇವಾಲಯದ ಬಳಿಯಿಂದ ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳುವ ಮೆರವಣಿಗೆಗೆ ಕೊಡಗು ಜಿಲ್ಲಾ ವ್ಯಾಪಾರೋದ್ಯಮಿಗಳ ವಿವಿದೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ಚಾಲನೆ ನೀಡುವರು.

ಪಟ್ಟಣದ ಕನ್ನಿಕಾ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿಯ ನಿವೃತ್ತ ಪ್ರಾಂಶುಪಾಲ ಗುರುಮಲ್ಲಪ್ಪ ಸಹಕಾರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಟಿ.ಆರ್. ಶರವಣಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಹಾಮಮಂಡಳ ನಿರ್ದೇಶಕ ಎ.ಕೆ. ಮನು ಮುತ್ತಪ್ಪ ಚಾಲನೆ ನೀಡುವರು ಎಂದು ಮಾಹಿತಿ ನೀಡಿದರು.

ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ವೃತ್ತಪರತೆ ದಿನಾಚರಣೆ ವಿಷಯದ ಕುರಿತು ಬೆಂಗಳೂರು ಆರ್‍ಐಸಿಎಂ ನಿವೃತ್ತ ಪ್ರಾದೇಶಿಕ ನಿರ್ದೇಶಕ ಡಾ. ಎಸ್.ಎ. ಸಿದ್ದಾಂತಿ ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಪಿ. ಚಂದ್ರಕಲಾ, ಬಿ.ಪಿ. ಮಹದೇವಪ್ಪ, ಎಂ.ಕೆ. ನಜೀರ್ ಅಹಮ್ಮದ್, ಎ.ಎಂ. ರಾಘವಯ್ಯ, ಎಂ.ಕೆ. ಕುಶಾಲಪ್ಪ, ಕೆ.ಆರ್. ರಂಗಸ್ವಾಮಿ, ಎಂ.ಎಂ. ಸೋಮಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವದು ಎಂದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ವಿ.ಎಎಸ್. ಆನಂದಕುಮಾರ್, ಎಂ.ಕೆ. ಗಣೇಶ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹೆಚ್.ಎನ್. ರಾಮಚಂದ್ರ, ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪಿ.ಬಿ. ಯತೀಶ್, ಮಾವೇಲಿ ಸಹಕಾರ ಸಂಘ ಅಧ್ಯಕ್ಷ ಪಿ.ಟಿ. ಸುಧೇಶ್, ನಾಡಪ್ರಭು ಪತ್ತಿನ ಸಹಕಾರ ಸಂಘದ ಬಿ.ಎ. ನಾಗೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಇದ್ದರು.