ಸೋಮವಾರಪೇಟೆ,ನ.13: ಜಿಲ್ಲೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ಸಾವಿರಾರು ಎಕರೆ ಜಾಗವನ್ನು ತೆರವುಗೊಳಿಸಿ ನಿರ್ಗತಿಕರಿಗೆ ನಿವೇಶನವನ್ನು ನೀಡಬೇಕು ಎಂದು ಆಗ್ರಹಿಸಿ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಇಲ್ಲಿನ ಕಕ್ಕೆಹೊಳೆ ಬಳಿಯಿಂದ ಸಂಘಟನೆಯ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಎದುರು ಧರಣಿ ಮಾಡಿದರು. ನಿವೇಶನದ ಹಕ್ಕು ಮತ್ತು ಇತರೆ ಬೇಡಿಕೆಗಳನ್ನು ಪರಿಹರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ತೋಟ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶಾಲಾ ಕಾಲೇಜುಗಳಲ್ಲಿ ಮತ್ತು ಕಚೇರಿಗಳಲ್ಲಿ ದುಡಿಯುವ ನೌಕರರಿದ್ದಾರೆ. ಇಂದಿನ ಈ ಪರಿಸ್ಥಿತಿಯನ್ನು ಬಳಸಿಕೊಂಡು ಭೂ ಮಾಫಿಯಾಗಳು ಕೊಡಗನ್ನು ಪ್ರವೇಶಿಸಿ ಇಲ್ಲಿನ ಜಮೀನನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೊಡಗಿನ ಪೈಸಾರಿ ಜಮೀನಿನ ಸಮಗ್ರ ಸರ್ವೆ ಮಾಡಿಸಬೇಕು. 6 ಸಾವಿರ ಎಕರೆಯಷ್ಟಿರುವ ಸರಕಾರಿ ಜಮೀನನ್ನು ಕೊಡಗಿನ ಭೂ ರಹಿತ ಸೈನಿಕರು, ಬುಡಕಟ್ಟು ಜನಾಂಗದವರು, ವಿಧವೆಯರು ಮತ್ತಿತರ ಅರ್ಹರಿಗೆ ಹಂಚಬೇಕು. ಗೋಮಾಳ, ದೇವರಕಾಡು ಮೊದಲಾದ ಅರಣ್ಯ ಸ್ವರೂಪದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡಬೇಕು. ಅರಣ್ಯ ಕಾಯಿದೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿ ತಾಲೂಕು ತಹಶೀಲ್ದಾರ್‍ಗೆ ಮನವಿ ಸಲ್ಲಿಸಲಾಯಿತು.

ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ತಾಲೂಕಿನ ಕುಂಬೂರು ಗ್ರಾಮ ವ್ಯಾಪ್ತಿಯಲ್ಲಿ 30 ಎಕರೆ, ಬಿಳಿಗೇರಿಯಲ್ಲಿ 17.30 ಎಕರೆ, ಯಡವಾರೆಯಲ್ಲಿ 27.43 ಎಕರೆ, ಕಿರಗಂದೂರಿನಲ್ಲಿ 40.27 ಎಕರೆ, ಕುಸುಬೂರಿನಲ್ಲಿ 3.44 ಎಕರೆ, 7ನೇ ಹೊಸಕೋಟೆಯಲ್ಲಿ 18 ಎಕರೆ, ಗರಗಂದೂರಿನಲ್ಲಿ 13.35 ಎಕರೆ, ಇಗ್ಗೋಡ್ಲಿನಲ್ಲಿ 246.19 ಎಕರೆ ಪೈಸಾರಿ ಜಾಗ ಒತ್ತುವರಿಯಾಗಿರುವದನ್ನು ನಾವುಗಳೇ ಪತ್ತೆಹಚ್ಚಿದ್ದೇವೆ ಎಂದು ಸೋಮಪ್ಪ ಹೇಳಿದರು.

ಕಳೆದ 2002ರಿಂದಲೇ ನಿವೇಶಕ್ಕಾಗಿ ಒತ್ತಾಯಿಸುತ್ತಾ ಬರುತ್ತಿದ್ದರೂ ಇಂದಿಗೂ ಯಾವದೇ ಕ್ರಮ ಕೈಗೊಂಡಿಲ್ಲ. ಮನೆಯಿಲ್ಲದ ನಿರ್ಗತಿಕರು ಬಾಡಿಗೆ ಮನೆ, ತೋಟದ ಲೈನ್‍ಮನೆಯಲ್ಲೇ ಜೀವನ ಕಳೆಯುತ್ತಿದ್ದಾರೆ. ಸ್ವಾತಂತ್ರ್ಯ ಲಭಿಸಿ 7 ದಶಕವಾದರೂ ಇಂದಿಗೂ ಸೂರಿನಿಂದ ವಂಚಿತರಾಗಿದ್ದಾರೆ ಎಂದು ಸೋಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ತಕ್ಷಣ ಪೈಸಾರಿ ಜಾಗಗಳ ಒತ್ತುವರಿ ತೆರವುಗೊಳಿಸಬೇಕು. ಇಂತಹ ಜಾಗವನ್ನು ನಿರ್ಗತಿಕರಿಗೆ ವಿತರಿಸಬೇಕು. ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು, ಭರ್ತಿಗೆ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಸೋಮಪ್ಪ ಎಚ್ಚರಿಸಿದರು.

ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಪಟ್ಟಿ ತಯಾರಿಸಲಾಗಿದ್ದು, ಪೈಸಾರಿ ಜಾಗ ಒತ್ತುವರಿ ತೆರವಿಗೆ ಕ್ರಮ ವಹಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಮೂಲಕ ನಿವೇಶನ ವಿತರಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಮನವಿ ಆಲಿಸಿದ ತಹಶೀಲ್ದಾರ್ ಮಹೇಶ್ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ತಾಲೂಕು ಘಟಕದ ಕಾರ್ಯದರ್ಶಿ ಮಹೇಶ್, ಜಿಲ್ಲಾ ಉಪಾಧ್ಯಕ್ಷ ಮಣಿ, ಖಜಾಂಚಿ ಪಿ.ಟಿ. ಸುಂದರ, ಹೋಬಳಿ ಅಧ್ಯಕ್ಷ ಎಂ.ಎ. ಗಣೇಶ್, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಸುರೇಶ್, ಪದಾಧಿಕಾರಿಗಳಾದ ಶೇಷಪ್ಪ, ಚೆಲುವಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.