ಚೆಟ್ಟಳ್ಳಿ, ನ. 12: ಬಿದ್ದಾಟಂಡ ಹಾಕಿ ಉತ್ಸವಕ್ಕೆ 40 ಲಕ್ಷ ಘೋಷಿಸಿ ಸರಕಾರ ಕೇವಲ 5 ಲಕ್ಷ ನೀಡಿದೆ ಎನ್ನುವ ಮಾತು ಕೆ.ಜಿ. ಬೋಪಯ್ಯ ಅವರಿಗೆ ಯಾರೋ ನೀಡಿದ ತಪ್ಪು ಮಾಹಿತಿ ಎಂದು ಎಂ.ಎಲ್.ಸಿ. ವೀಣಾ ಅಚ್ಚಯ್ಯ ಹಾಗೂ ಬಿದ್ದಾಟಂಡ ಹಾಕಿ ಉತ್ಸವದ ಸಂಚಾಲಕ ಬಿದ್ದಾಟಂಡ ತಮ್ಮಯ್ಯ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.20016-17ರ ಮೇ ತಿಂಗಳಲ್ಲಿ ನಾಪೋಕ್ಲುವಿನಲ್ಲಿ ನಡೆದ ಹಾಕಿ ಉತ್ಸವಕ್ಕೆ ವರ್ಷಪ್ರತಿ ನೀಡುವಂತೆ ರೂ. 40 ಲಕ್ಷ ಅನುದಾನವನ್ನು ಉಸ್ತುವಾರಿ ಸಚಿವರ ಭರವಸೆಯಂತೆ ಮುಖ್ಯಮಂತ್ರಿಗಳು ಆದೇಶ ಹೊರಡಿಸಿ ಯುವ ಸಬಲೀಕರಣ ಕ್ರೀಡಾ ಇಲಾಖೆಗೆ ಕಳುಹಿಸಿದ್ದಾರೆ. ಆದರೆ ಬಿದ್ದಾಟಂಡ ಹಾಕಿ ಉತ್ಸವ ಸಮಿತಿಯವರು ಲೆಕ್ಕ ಪರಿಶೋಧನೆಯ ವಿಳಂಬದ ಕಾರಣದಿಂದ ಉಸ್ತುವಾರಿ ಸಚಿವರ ಆದೇಶದಂತೆ ಒಂದು ತಿಂಗಳ ಮುಂಚೆಯೇ ಲೆಕ್ಕ ಪತ್ರವನ್ನು ಯುವಜನ ಸಬಲೀಕರಣ ಇಲಾಖೆಗೆ ನೀಡಲು ವಿಫಲರಾದ ಕಾರಣ, ಇಲಾಖೆಯು ಮೊದಲ ಹಂತವಾಗಿ ಐದು ಲಕ್ಷ ಹಣವನ್ನು ಬಿಡುಗಡೆ ಮಾಡಿತ್ತು.

ಬಿದ್ದಾಟಂಡ ಹಾಕಿ ಸಮಿತಿಯವರು ಪೂರ್ತಿ ಲೆಕ್ಕಪತ್ರವನ್ನು ನೀಡಿಯೇ 40 ಲಕ್ಷ ಹಣವನ್ನು ಪಡೆದುಕೊಳ್ಳಲಿದೆ ಎಂದು ತಮ್ಮಯ್ಯ ಮಾಹಿತಿ ನೀಡಿದರು.

ವೀಣಾ ಅಚ್ಚಯ್ಯ ಮಾತನಾಡಿ ಕಳೆದು ಹೋದ ಹಾಕಿ ಉತ್ಸವದ ಬಗ್ಗೆ ಮಾತನಾಡಲು ಬೋಪಯ್ಯ ಅವರಿಗೆ ಅಧಿಕಾರ ಕೊಟ್ಟವರ್ಯಾರು ಎಂದು ಕಿಡಿಕಾರಿದರು. ರಾಜಕೀಯ ರಹಿತವಾಗಿ ನಡೆಯುವ ಹಾಕಿ ನಮ್ಮೆಗೆ ರಾಜಕೀಯ ಬೆರೆಸಿ ಚುನಾವಣೆಗೆ ಸ್ಪರ್ದಿಸುವ ಪ್ರಯತ್ನ ಬೇಡ ಎಂದು ಕುಟುಕಿದರು. ತಾವು ಸರಕಾರದಿಂದ 40 ಲಕ್ಷದ ಜೊತೆಯಲ್ಲಿ, ಸಂಸದರಾ ಪ್ರತಾಪ್ ಸಿಂಹ ಅವರ ನಿಧಿಯಿಂದ ಹಾಕಿ ನಮ್ಮೆಗೆ 20 ಲಕ್ಷ ಹಣವನ್ನು ನಾಪೋಕ್ಲು ಜೂನಿಯರ್ ಕಾಲೇಜಿನ ಮೈದಾನಕ್ಕೆ ತಡೆಗೋಡೆ ನಿರ್ಮಿಸುವದಕ್ಕೆ ಕೊಟ್ಟಿದ್ದಾರೆ. ಎಂ.ಎಲ್.ಸಿ. ವೀಣಾ ಅಚ್ಚಯ್ಯ ಅವರ ನಿಧಿಯಿಂದ 5ಲಕ್ಷ ಹಣವನ್ನು ಮೈದಾನಕ್ಕೆ ಹೋಗುವ ರಸ್ತೆ ಡಾಂಬರೀಕರಣಕ್ಕೆ ಬಳಸಿಕೊಳ್ಳ ಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುರುಳಿಯವರು ತಮ್ಮ ನಿಧಿಯಿಂದ ಎರಡು ಲಕ್ಷ ಹಣವನ್ನು ಮೈದಾನದ ಕೆಲಸಕ್ಕೆ ನೀಡಿದ್ದಾರೆ.

ಅದೇ ರೀತಿ ಬಿದ್ದಾಟಂಡ ಹಾಕಿ ಉತ್ಸವದ ಮೈದಾನಕ್ಕೆ ಆಗಮಿಸಿದ ಶಾಸಕ ಬೋಪಯ್ಯ ಅವರು, ಮೈದಾನದಲ್ಲಿ ಬಿದ್ದಾಟಂಡ ಉತ್ಸವ ಸಮಿತಿಯವರ ಕಾಮಗಾರಿ ವೀಕ್ಷಿಸಿ ತಮ್ಮ ಶಾಸಕರ ನಿಧಿಯಿಂದ ಮೂರು ಲಕ್ಷ ಹಣವನ್ನು ಗುತ್ತಿಗೆದಾರರಿಗೆ ನೀಡುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಆ ದುಡ್ಡು ಇದುವರೆಗೂ ಸಿಕ್ಕಿಲ್ಲ. ಹೀಗಿರುವಾಗ ಸರಕಾರವನ್ನು ದೂರುವದಕ್ಕೆ ಬೋಪಯ್ಯ ಅವರಿಗೆ ಯಾವ ನೈತಿಕತೆ ಇದೆ ಎಂದು ತಮ್ಮಯ್ಯ ಪ್ರಶ್ನಿಸಿದರು.

ತಾವು ಯುವಜನ ಸಬಲೀಕರಣ ಇಲಾಖೆಗೆ ಸೂಕ್ತ ದಾಖಲಿಕರಣ ನೀಡಿ ಶೀಘ್ರದಲ್ಲೇ ಹಣವನ್ನು ಪಡೆಯುತ್ತೇವೆ. ಇಲ್ಲವಾದಲ್ಲಿ ತಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ಸರಕಾರದಿಂದ ಅನುದಾನ ಸಿಕ್ಕರೆ ಬೋಪಯ್ಯ ಅವರು ರಾಜಕೀಯದಿಂದ ನಿವೃತ್ತಿ ಹೊಂದಲಿ ಎಂದು ಸವಾಲೊಡ್ಡಿದರು. ಕಾಂಗ್ರೆಸ್‍ನ ವಕ್ತಾರ ಪುತ್ತರಿರ ಪಪ್ಪು ತಿಮ್ಮಯ ಹಾಜರಿದ್ದರು.