ಗೋಣಿಕೊಪ್ಪ ವರದಿ, ನ. 12: ಸಹಕಾರಿ ಬ್ಯಾಂಕ್ ಸಾಲವನ್ನು ಸಂಪೂರ್ಣ ಮನ್ನಾ ಮಾಡುವದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಒತ್ತಾಯಿಸಲು ಆಗ್ರಹಿಸಿ ತಾ. 14 ರಂದು ರೈತ ಸಂಘದಿಂದ ಸುವರ್ಣ ವಿಧಾನ ಸೌಧ ಚಲೋ ಕಾರ್ಯಕ್ರಮ ನಡೆಸಲಾಗುವದು ಎಂದು ಕೊಡಗು ರೈತ ಸಂಘ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಾಜ್ಯ ರೈತ ಸಂಘದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವು ಕೊಡಗು ರೈತ ಸಂಘ ಅಧ್ಯಕ್ಷ ಮನು ಸೋಮಯ್ಯ ಮುಂದಾಳತ್ವದಲ್ಲಿ ಕೊಡಗಿನ 15 ಕ್ಕೂ ಹೆಚ್ಚು ರೈತ ಮುಖಂಡರುಗಳು ಪಾಲ್ಗೊಂಡು ಕೊಡಗು ರೈತರ ಹಲವು ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಲಾಗುವದು ಎಂದರು.

ರೈತರು ಸಹಕಾರಿ ಬ್ಯಾಂಕು ಗಳಿಂದ ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವದು, ಅಕಾಲಿಕ ಮಳೆ ಯಿಂದಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ನಷ್ಟವನ್ನು ತುಂಬಿ ಕೊಡುವಂತೆ, ಪ್ರಧಾನಮಂತ್ರಿ ಪಸಲು ವಿಮಾ ಯೋಜನೆಗೆ ಕಂತು ಪಾವತಿಸಿರುವ ರೈತರಿಗೆ ವಿಮೆ ನೀಡುವಂತೆ ಹಾಗೂ ಭತ್ತ ಬೆಳೆಯುವ ರೈತರಿಗೆ ಪ್ರತೀ ಎಕರೆಗೆ 20 ಸಾವಿರ ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸಲಾಗುವದು ಎಂದರು.

ಕೊಡಗು ಜಿಲ್ಲೆಗೆ ಆಮದು ಆಗುತ್ತಿರುವ ಕಾಳುಮೆಣಸು ಹಾಗೂ ಕಾಫಿಯನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಜಿಲ್ಲೆಯ ರೈತರ ಹಿತ ಕಾಪಾಡಬೇಕು. ಕಾಡು ಪ್ರಾಣಿಗಳಿಂದ ಆಗುತ್ತಿರುವ ಫಸಲು ನಷ್ಟಕ್ಕೆ ಪರಿಹಾರ ನೀಡುವದು, ಹೈಟೆನ್ಷನ್ ಹೋರಾಟ ಸಂದರ್ಭ ಹೋರಾಟ ನಡೆಸಿದವರ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಗುವದು ಎಂದರು. ಕೊಡಗು ಮೂಲಕ ಹಾದು ಹೋಗಲಿರುವ ರೈಲ್ವೆಮಾರ್ಗವನ್ನು ರದ್ದುಗೊಳಿಸುವಂತೆ ಒತ್ತಾಯಿಸ ಲಾಗುವದು ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ಹೋರಾಟ ನಡೆಸುವ ಬಗ್ಗೆ ರೂಪುರೇಷೆ ಸಿದ್ದಪಡಿಸ ಲಾಗುವದು ಎಂದರು.

20 ರಂದು ಡೆಲ್ಲಿ ಚಲೋ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾ. 20 ರಂದು ನವದೆಹಲಿಯಲ್ಲಿ ರೈತ ಮುಕ್ತಿ ಸಂಸತ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಹೋರಾಟದಲ್ಲಿ ಕೊಡಗಿನ 20 ರೈತ ಮುಖಂಡರು ಪಾಲ್ಗೊಳ್ಳುತ್ತಿದ್ದಾರೆ.

ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯ ಅನ್ವಯ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿ ಇದಕ್ಕೆ ಕಾನೂನಿನ ಸ್ವರೂಪ ನೀಡಬೇಕು ಎಂಬ ನಿಯಮವನ್ನು ರೂಪಿಸಲು ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಕರಡು ಮಸೂದೆ ಜಾರಿಗೊಳಿಸಲು ಒತ್ತಾಯಿಸಲಾಗುತ್ತಿದೆ. ರಾಷ್ಟ್ರದ ಹಲವಾರು ರೈತಪರ ಸಂಘಗಳು ಈ ಹೋರಾಟದಲ್ಲಿ ಪಾಲ್ಗೊಂಡು ರೈತರ ಪರ ಹೋರಾಟ ನಡೆಸಲಿದ್ದಾರೆ ಎಂದರು.

ಸಂಚಾಲಕ ಚಿಮ್ಮಂಗಡ ಗಣೇಶ್ ಮಾತನಾಡಿ, ಜಿಪಿಎಸ್ ಸರ್ವೆ ಮೂಲಕ ಪಾಳು ಬಿಟ್ಟಿರುವ ಗದ್ದೆಗಳನ್ನು ಸರ್ಕಾರ ವಶಕ್ಕೆ ಪಡೆಯಲು ಮುಂದಾಗುತ್ತಿರುವದು ಖಂಡನೀಯ. ನಮ್ಮ ಪೂರ್ವಜರು ರಕ್ಷಿಸಿ ಇಟ್ಟಿರುವ ನಮ್ಮ ಭೂಮಿಯನ್ನು ಬೇರೆಯವರಿಗೆ ನೀಡಲು ಮುಂದಾಗುವದನ್ನು ಖಂಡಿಸಲಾಗುತ್ತದೆ ಎಂದರು.

ಗೋಷ್ಠಿಯಲ್ಲಿ ಸದಸ್ಯರುಗಳಾದ ಪುಚ್ಚಿಮಾಡ ಸುನಿಲ್ ದೇವಯ್ಯ, ಬಾಚಮಾಡ ಭವಿ ಉಪಸ್ಥಿತರಿದ್ದರು.