ಮಡಿಕೇರಿ, ನ.13 : ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ 64ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ತಾ. 14 ರಿಂದ 20 ರವರೆಗೆ ಜಿಲ್ಲೆಯ ವಿವಿಧೆಡೆ ಆಚರಿಸಲಾಗುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಕಾರ ಯೂನಿಯನ್‍ನ ಜಿಲ್ಲಾಧ್ಯಕ್ಷ ಎ.ಕೆ. ಮನು ಮುತ್ತಪ್ಪ, ಸಹಕಾರ ಸಪ್ತಾಹದ ಮೂಲಕ ಸಹಕಾರ ಸಂಸ್ಥೆಗಳನ್ನು ಗಣಕೀಕರಣಗೊಳಿಸಿ ಜನರ ಸಬಲೀಕರಣಕ್ಕೆ ಮುಂದಾಗಿರುವದಾಗಿ ತಿಳಿಸಿದರು. ಏಳು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಕೊಡಗಿನ ಹಿರಿಯ ಸಹಕಾರಿಗಳನ್ನು ಸನ್ಮಾನಿಸುತ್ತಿರುವದಾಗಿ ಹೇಳಿದರು.

ಇದೇ ಮೊದಲ ಬಾರಿಗೆ ಕೊಡಗು ಸಹಕಾರಿ ರತ್ನ ಪ್ರಶಸ್ತಿಯನ್ನು ನೀಡಲು ಮುಂದಾಗಿದ್ದು, ಹಿರಿಯ ಸಹಕಾರಿಯಾದ ಬಿ.ಬಿ.ನಾಣಯ್ಯ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವದು. ಉಳಿದಂತೆ ನಾಲ್ವರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ ನೀಡಲಾಗುತ್ತಿದ್ದು, ಹಿರಿಯರಾದ ಪ್ರೇಮಾ ಸೋಮಯ್ಯ, ಎಂ.ಎ.ರಮೇಶ್, ಟಿ.ಎಸ್.ನಾರಾಯಣ ಆಚಾರ್ ಹಾಗೂ ಎ.ವಿ.ಶಾಂತಕುಮಾರ್ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಮನು ಮುತ್ತಪ್ಪ ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಇನ್‍ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ ಮೆಂಟ್ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಸಹಕಾರ ಸಪ್ತಾಹ ನಡೆಯುತ್ತಿದೆ. ತಾ.16 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆಯುವ ‘ಸಹಕಾರಾಭಿವೃದ್ಧಿಗೆ ಶಾಸನವನ್ನು ಸಶಕ್ತಗೊಳಿಸುವ ದಿನಾಚರಣೆ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದೆಂದರು.

ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಲದ ಉಪಾಧ್ಯಕ್ಷ ಎಂ.ಬಿ.ದೇವಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಿಲ್ಲಾ ಸಹಕಾರ ಯೂನಿಯನ್‍ನ ಉಪಾಧ್ಯಕ್ಷರಾದ ಎಸ್.ಪಿ.ನಿಂಗಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದಿನದ ಮಹತ್ವದ ಕುರಿತು ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ ಮೆಂಟ್‍ನ ಪ್ರಾಂಶುಪಾಲೆ ಆರ್.ಎಸ್. ರೇಣುಕಾ ಮಾತÀನಾಡಲಿದ್ದಾರೆ.

ತಾ.14 ರಂದು (ಇಂದು) ಬೆಳಗ್ಗೆ 11 ಗಂಟೆಗೆ ಕುಶಾಲನಗರದ ಕನ್ನಿಕಾ ಇಂಟರ್‍ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಲಾಗುವದು. ಮೆರವಣಿಗೆ, ಸಹಕಾರಿ ಧ್ವಜಾರೋಹಣ, ಸಭಾ ಕಾರ್ಯಕ್ರಮ ಮತ್ತು ವಿಷಯ ಮಂಡನೆ ನಡೆಯಲಿದೆ. ತಾ.15 ರಂದು ಚೇರಂಬಾಣೆಯ

(ಮೊದಲ ಪುಟದಿಂದ) ಕೊಟ್ಟೂರು ಶ್ರೀ ಗೋಪಾಲಕೃಷ್ಣ ದೇವಾಲಯದ ಸಭಾಂಗಣ, ತಾ.17 ರಂದು ಅಮ್ಮತ್ತಿ ಎಪಿಸಿಎಂಎಸ್ ಸಭಾಂಗಣ, ನ.18 ರಂದು ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ, ತಾ.19 ರಂದು ಬೆಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ತಾ.20 ರಂದು ನಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘÀದಲ್ಲಿ ಸಹಕಾರ ಸಪ್ತಾಹದ ಕಾರ್ಯಕ್ರಮಗಳು ನಡೆಯಲಿವೆ ಎಂದು ಮನು ಮುತ್ತಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್‍ನ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಹಾಗೂ ವ್ಯವಸ್ಥಾಪಕಿ ಮಂಜುಳಾ ಉಪಸ್ಥಿತರಿದ್ದರು.