ಮಡಿಕೇರಿ, ನ.13 : ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗಳಿಗೆ ಸರ್ಕಾರ ನಿಗದಿ ಮಾಡಿರುವ ಕನಿಷ್ಟ ವೇತನವನ್ನು ನೀಡದೆ ಗುತ್ತಿಗೆದಾರರು ವಂಚಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಿಐಟಿಯು ಸಂಯೋಜಿತ ಕೊಡಗು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳ ಸಂಘ, ಕಾರ್ಮಿಕ ಕಾನೂನು ಉಲ್ಲಂಘನೆಯ ಆರೋಪದಡಿ ಕೇಸ್ ದಾಖಲಿಸುವದಾಗಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಆರ್.ಭರತ್, ಮುಂದಿನ 10 ದಿನಗಳ ಒಳಗೆ ಕಡಿತಗೊಳಿಸಿರುವ ವೇತನವನ್ನು ಭರ್ತಿ ಮಾಡಿ, ಸ್ವಚ್ಛತಾ ಸಿಬ್ಬಂದಿಗಳಿಗೆ ನೀಡದಿದ್ದಲ್ಲಿ ಕಾನೂನು ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗಳ ಸಮೂಹವನ್ನು ಎರಡು ಭಾಗವಾಗಿ ವಿಭಾಗಿಸಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಒಟ್ಟು 33 ಸಿಬ್ಬಂದಿಗಳಲ್ಲಿ 10 ಮಂದಿಯನ್ನು ಸಫಾಯಿ ಕರ್ಮಚಾರಿಗಳಾಗಿಯು, ಉಳಿದ 23 ಮಂದಿಯನ್ನು ಆಸ್ಪತ್ರೆಯ ಉಳಿದ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿದೆ. 10 ಕರ್ಮಚಾರಿಗಳಿಗೆ ಮಾಸಿಕ ವೇತನ 10 ಸಾವಿರ ರೂ. ಹಾಗೂ 23 ಸಿಬ್ಬಂದಿಗಳಿಗೆ ತಲಾ 9 ಸಾವಿರ ರೂ.ಗಳಂತೆ ವೇತನ ನೀಡುವದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದರು. ಆದರೆ, ಪ್ರಸ್ತುತ ತಿಂಗಳು ವೇತನ ನೀಡುವ ಸಂದರ್ಭ ಕರ್ಮಚಾರಿಗಳಿಗೆ ಕನಿಷ್ಟ ವೇತನ 10 ಸಾವಿರ ರೂ. ನೀಡಿದ್ದು, ಉಳಿದ 23 ಸಿಬ್ಬಂದಿಗಳಿಗೆ ಕೇವಲ 7 ಸಾವಿರ ರೂ.ಗಳಂತೆ ವೇತನ ಪಾವತಿಸಲಾಗಿದೆ ಎಂದು ಆರೋಪಿಸಿದರು.
ಪ್ರಸ್ತುತ ವರ್ಷ ಡಿ ಗ್ರೂಪ್ ನೌಕರರಾಗಿ 61 ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇವರ ವೇತನಕ್ಕೂ ಕತ್ತರಿ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ಬಯಸಿದಾಗ ಸಿಬ್ಬಂದಿಗಳು ಕೆಲಸಕ್ಕೆ ನೇಮಕಗೊಳ್ಳುವ ಸಂದರ್ಭ ಮುಂಗಡವಾಗಿ ಗುತ್ತಿಗೆದಾರನಿಗೆ 10 ಸಾವಿರ ರೂ. ನೀಡುವ ನಿಯಮ ಕಾನೂನಿಗೆ ವಿರುದ್ಧವಾದ ರೂಪಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಮುಂಗಡ ಹಣ ನೀಡದ ಕಾರ್ಮಿಕರಿಂದ ಹಣವನ್ನು ಭರ್ತಿ ಮಾಡುವದಕ್ಕಾಗಿ ವೇತನದಿಂದ ಕಡಿತಗೊಳಿಸಲಾಗುತ್ತಿದೆ. ಅಲ್ಲದೆ, ಕೆಲಸ ಬೇಕಾದರೆ ಭಾನುವಾರ ರಜೆ ನೀಡುವದಿಲ್ಲವೆಂದು ತಿಳಿಸಿ ವಾರದ ರಜೆ ಇಲ್ಲದಂತೆ ಮಾಡಲಾಗುತ್ತಿದೆ ಎಂದು ಭರತ್ ಅಸಮಾಧಾನ ವ್ಯಕ್ತಪಡಿಸಿದರು.
ವೇತನ ಕಡಿತ, ರಜೆ ಕಡಿತ ಮತ್ತು ಕೆಲಸ ಕೊಡಿಸಿದಕ್ಕಾಗಿ ಮುಂಗಡ ಹಣ ಪಡೆಯುವ ಮೂಲಕ ಗುತ್ತಿಗೆದಾರರು ಬಡವರ್ಗದ ಸಿಬ್ಬಂದಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ. ಜಾನಕಿ, ಉಪಾಧ್ಯಕೆÀ್ಷ ಹೆಚ್.ಪಿ. ಕಾಳಮ್ಮ, ಉಪಕಾರ್ಯದರ್ಶಿ ಎಸ್.ಎಸ್. ಧನಲಕ್ಷ್ಮಿ, ಪ್ರಮುಖರಾದ ಅನಿತಾ ಹಾಗೂ ರೇಖಾ ಮಾತನಾಡಿ, ದುಡಿಮೆಗೆ ತಕ್ಕ ವೇತನ ನೀಡದಿದ್ದಲ್ಲಿ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.