ಕುಶಾಲನಗರ, ನ. 12: ಪಟ್ಟಣದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಹಿನ್ನೆಲೆ ತೆರವುಗೊಳಿಸಲು ಸ್ಥಳಕ್ಕೆ ತೆರಳಿದ ಅಧಿಕಾರಿಗಳಿಗೆ ಸ್ಥಳೀಯ ಪಟ್ಟಣ ಪಂಚಾಯಿತಿಯ ವಾರ್ಡ್ ಸದಸ್ಯರು ಮತ್ತು ಕಟ್ಟಡದ ಮಾಲೀಕರು ಅಡ್ಡಿಪಡಿಸಿ ವಾಪಾಸ್ ಕಳುಹಿಸಿದ ಪ್ರಕರಣ ಬೈಚನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆಯಿತು.

ಇಲ್ಲಿನ ಮುಖ್ಯರಸ್ತೆಯ ಬದಿಯಲ್ಲಿ ವ್ಯಕ್ತಿಯೊಬ್ಬರು ಪಂಚಾಯಿತಿಯ ಅನುಮತಿಯಿಲ್ಲದೆ ನಿಯಮಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ತಿಳುವಳಿಕೆ ಪತ್ರ ನೀಡಿದರೂ ಯಾವದೇ ರೀತಿ ಸ್ಪಂದಿಸದೆ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಪಂಚಾಯಿತಿ ಇಂಜಿನಿಯರ್ ಶ್ರೀದೇವಿ ನೇತೃತ್ವದಲ್ಲಿ ಪೊಲೀಸರ ಸಹಕಾರದೊಂದಿಗೆ ಪೌರಕಾರ್ಮಿಕರು ಅಕ್ರಮ ಕಟ್ಟಡ ತೆರವುಗೊಳಿಸಲು ತೆರಳಿದ ಸಂದರ್ಭ ವಾರ್ಡ್ ಸದಸ್ಯೆ ಹೆಚ್.ಕೆ. ಪಾರ್ವತಿ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡ ದೃಶ್ಯ ಕಂಡುಬಂತು.

ಪಟ್ಟಣದ ಹಲವೆಡೆ ಈ ರೀತಿಯ ಅಕ್ರಮಗಳು ನಡೆದರೂ ಯಾವದೇ ಕ್ರಮ ಕೈಗೊಳ್ಳಲು ವಿಫಲರಾಗಿರುವ ಅಧಿಕಾರಿಗಳು ಬಡಜನತೆ ಮೇಲೆ ಪ್ರಹಾರ ಮಾಡುತ್ತಿರುವ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ ವಾರ್ಡ್ ಸದಸ್ಯೆ ಮತ್ತು ಕಟ್ಟಡದ ಮಾಲೀಕರು ಕಟ್ಟಡ ತೆರವು ಮಾಡಲು ಅವಕಾಶ ನೀಡದೆ ವಿರೋಧ ಕಂಡುಬಂದ ಹಿನ್ನೆಲೆ ಅಧಿಕಾರಿಗಳು ಬರಿಗೈಯಲ್ಲಿ ಹಿಂತಿರುಗಿದರು. ಕುಶಾಲನಗರ ಪಟ್ಟಣದಲ್ಲಿ ಕಳೆದ 6 ತಿಂಗಳಿನಿಂದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗುತ್ತಿದ್ದರೂ ಕೆಲವು ವಾರ್ಡ್‍ಗಳ ಜನಪ್ರತಿನಿಧಿಗಳ ಅಸಹಕಾರ ಧೋರಣೆಯಿಂದ ಆಡಳಿತ ಸಮಿತಿಯ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಸಮಸ್ಯೆಗಳು ಅಡ್ಡಿ ಉಂಟಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.