ನಾಪೆÇೀಕ್ಲು, ನ. 12: ರಾಜ್ಯ ಸರಕಾರದ ಆಡಳಿತ ವೈಫಲ್ಯದಿಂದಾಗಿ ಕೊಡಗಿನ ಅಭಿವೃದ್ಧಿ ಶೂನ್ಯವಾಗಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಆರೋಪಿಸಿದರು.
ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಬಾರಂಡ ಕುಟುಂಬಸ್ಥರ ಮನೆ ರಸ್ತೆಗೆ ರೂ. 7 ಲಕ್ಷ ವೆಚ್ಚದಲ್ಲಿ ನೂತನ ಕಾಂಕ್ರೀಟ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರದ ಅನುದಾನದಿಂದ ಈಗಾಗಲೇ ಎಮ್ಮೆಮಾಡು ವಿಭಾಗದ ಪಡಿಯಾಣಿ, ದರ್ಗಾ ಮತ್ತು ಕೂರುಳಿವರೆಗಿನ ರಸ್ತೆಯನ್ನು ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಾಡಿಯಲ್ಲಿ ಸುಮಾರು ರೂ. 2.38 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಬಿಜೆಪಿ ಸರಕಾರದ ಸಾಧನೆಯಾಗಿದೆ. ಅದರಂತೆ ಈ ವಿಭಾಗದ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲಾಗಿದೆ. ಕೊಡಗಿನಲ್ಲಿ ನಡೆಸಲಾಗುತ್ತಿರುವ ಕೊಡವ ಕುಟುಂಬಗಳ ಹಾಕಿ ಹಬ್ಬಕ್ಕೆ ಮೊದಲ ಬಾರಿ ಹಣ ಬಿಡುಗಡೆಗೊಳಿಸಿದ್ದು ಬಿಜೆಪಿ ಸರಕಾರ ಎಂಬದನ್ನು ಎಲ್ಲರೂ ನೆನಪಿಸಿಕೊಳ್ಳಬೇಕು.
ಆದರೆ ಈಗಿನ ಸರಕಾರ ಯಾವ ಕುಟುಂಬದವರಿಗೆ ಎಷ್ಟು ಹಣ ನೀಡಿದೆ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಬರಿ ಸುಳ್ಳಿನ ಸರಕಾರ ಎಂದು ಲೇವಡಿ ಮಾಡಿದರು.
ಯಡಿಯೂರಪ್ಪ ಮುಖ್ಯ ಮಂತ್ರಿ ಆಗಿದ್ದ ಸಂದರ್ಭ ತಾಳಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ 250 ಕ್ಕೂ ಅಧಿಕ ಕುಟುಂಬಗಳು ಈ ಸೌಲಭ್ಯವನ್ನು ಪಡೆದು ಕೊಂಡಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ, ಇತ್ತೀಚೆಗೆ ಈ ವಿಭಾಗದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ರೂ. 45 ಲಕ್ಷದ ರಸ್ತೆ ಕಾಮಗಾರಿಗೆ ತುರ್ತಾಗಿ ಭೂಮಿ ಪೂಜೆ ನೆರವೇರಿಸಿದ್ದಾರೆ.
ಆದರೆ ಅವರು ಸೌಜನ್ಯಕ್ಕಾದರು ಈ ಕ್ಷೇತ್ರದ ಜನ ಪ್ರತಿನಿಧಿಗಳನ್ನು ಆಹ್ವಾನಿಸಬೇಕಿತ್ತು ಮತ್ತು ಇಲ್ಲಿನ ಗ್ರಾಮ ಪಂಚಾಯಿತಿಯನ್ನು ಕಡೆಗೆಣಿಸಿ ಈ ಕಾರ್ಯವನ್ನು ನೆರವೇರಿಸಿದ್ದಾರೆ ಎಂದು ದೂರಿದರು.
ಬಿಜೆಪಿ ಮುಖಂಡ ರಫೀಕ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್ಮೆಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನೇರೂಟ್ ಆಲಿ ವಹಿಸಿದ್ದರು.
ವೇದಿಕೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್, ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸದಸ್ಯ ಬೈರೂಡ ಮುತ್ತಪ್ಪ, ಎಮ್ಮೆಮಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರುಕೀಯ, ಸದಸ್ಯೆ ಅಬ್ಸತ್, ಚಂಬಾರಂಡ ಮಾಹಿನೆ, ಹಂಸ, ಬಿಜೆಪಿ ನಾಯಕರಾದ ಸಿ.ಎ. ಹಸೀನಾರ್ ಹಾಜಿ, ಸಿ.ಹೆಚ್. ಮೊಯ್ದು, ಮತ್ತಿತರರು ಇದ್ದರು.