ಮಡಿಕೇರಿ, ನ. 13: ವೀರಾಜಪೇಟೆ ತಾಲೂಕಿನ ಬಾಳೆಲೆ ಬಳಿಯ ರಾಜಾಪುರದ ತೋಟವೊಂದರಲ್ಲಿ ಕೂಲಿ ಕಾರ್ಮಿಕ ಹರೀಶ್ ಎಂಬ ವ್ಯಕ್ತಿಗೆ ನಾಯಿಯಿಂದ ಕಚ್ಚಿಸಿ ದೌರ್ಜನ್ಯ ಎಸಗಿರುವ ಸಂಬಂಧ ಸೂಕ್ತ ತನಿಖೆಗೆ ಶಿಫಾರಸು ಮಾಡಲಾಗುವದು ಎಂದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗದ ಅಧ್ಯಕ್ಷ ವಿ .ಮುನಿಯಪ್ಪ ಹೇಳಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರ ಅಹವಾಲು ಆಲಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗವು ಈ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಲಿದ್ದು, ಡಿಜಿ ಅಥವಾ ಐಜಿ ಅವರಿಂದ ಸೂಕ್ತ ನ್ಯಾಯ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.

ಕಂದಾಯ, ಪೊಲೀಸ್, ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳ ವಿಷಯಗಳಿಗೆ ಸಂಬಂಧಿಸಿದಂತೆ ಆಯಾಯ ಸಚಿವರ

(ಮೊದಲ ಪುಟದಿಂದ) ಗಮನಕ್ಕೆ ತರಲಾಗುವದು ಎಂದು ತಿಳಿಸಿದರು.

ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ವಸಂತ್ ಅವರು ಬಾಳೆಲೆ ಬಳಿಯ ತೋಟವೊಂದರ ಮಾಲೀಕರು ಹರೀಶ್ ಎಂಬ ಕೂಲಿ ಕಾರ್ಮಿಕನಿಗೆ ನಾಯಿಯನ್ನು ಚೂ ಬಿಟ್ಟು ಕಚ್ಚಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದೊಂದು ಅಮಾನವೀಯ ದೌರ್ಜನ್ಯವಾಗಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಅಲ್ಲಿನ ಡಿವೈಎಸ್‍ಪಿ ಮಾಲೀಕರ ಜೊತೆಗೂಡಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಡಿವೈಎಸ್‍ಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಸಂಘಟನೆಗಳ ಪ್ರಮುಖರು ಒತ್ತಾಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತಹಶೀಲ್ದಾರರು ದೌರ್ಜನ್ಯ ಸಮಿತಿ ಸಭೆ ಆಹ್ವಾನಿಸಬೇಕು. ಪರಿಶಿಷ್ಟರ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುಂದಾಗಬೇಕಿದೆ ಎಂದು ವಿವಿಧ ಸಂಘಟನೆಗಳ ಪ್ರಮುಖರು ಅಳಲು ತೋಡಿಕೊಂಡರು.

ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಭೂಮಿ ಇಲ್ಲದವರಿಗೆ ಭೂಮಿ ನೀಡಬೇಕು. ಮಾಂಗಲ್ಯ ಭಾಗ್ಯ ಯೋಜನೆಯಡಿ 2 ಲಕ್ಷ ರೂ. ನೀಡಬೇಕು. ಪೌಷ್ಟಿಕ ಆಹಾರ ಒದಗಿಸಬೇಕು. 94 ಸಿ ರಡಿ ಭೂಮಿ ಹಂಚಿಕೆ ಮಾಡಬೇಕು. ಆಹಾರ ಭದ್ರತೆ ಒದಗಿಸಬೇಕು ಎಂದು ಪರಿಶಿಷ್ಟ ಪಂಗಡದ ಭರತ್ ಹೇಳಿದರು.

ಕುಡಿಯರ ಮುತ್ತಪ್ಪ ಮಾತನಾಡಿ ಜಿಲ್ಲೆಯಲ್ಲಿ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬುಡಕಟ್ಟು ಅಕಾಡೆಮಿ ಸ್ಥಾಪಿಸಬೇಕು ಜೊತೆಗೆ ಬುಡಕಟ್ಟು ವಿಶ್ವವಿದ್ಯಾನಿಲಯ ಆರಂಭಿಸಬೇಕು ಎಂದು ಅವರು ಮನವಿ ಮಾಡಿದರು.

ತಿತಿಮತಿ ದೇವರಕಾಡು ಪೈಸಾರಿಯಲ್ಲಿ 150 ಕುಟುಂಬಗಳು ವಾಸ ಮಾಡುತ್ತಿದ್ದು, ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.

ಸೋಮವಾರಪೇಟೆ ತಾಲೂಕಿನ ಬುಡುಕಟ್ಟು ಸಂಘದ ಆರ್.ಕೆ. ಚಂದ್ರು ವಾಲ್ನೂರು ತ್ಯಾಗತ್ತೂರು ವ್ಯಾಪ್ತಿಯಲ್ಲಿ 150 ಜೇನುಕುರುಬ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ ಮತ್ತಿತರ ಮೂಲ ಸೌಲಭ್ಯ ಕಲ್ಪಿಸಿಲ್ಲ. ನಮಗೆ ಸೂರು, ನೀರು, ಬೆಳಕು ನೀಡಿ ಎಂದು ಒತ್ತಾಯಿಸಿದರು.

ನಾಗರಹೊಳೆಯ ಜೆ.ಎಂ.ಸೋಮಯ್ಯ ಮಾತನಾಡಿ ನಾಗರಹೊಳೆ, ಗೋಣಿಗದ್ದೆ, ಬೊಮ್ಮಾಡು, ನಾಣಚ್ಚಿ ಹಾಡಿಯ ಕುಟುಂಬಗಳಿಗೆ ಅರಣ್ಯ ಹಕ್ಕು ಪತ್ರ ನೀಡಿದ್ದರೂ ಸಹ ಕುಡಿಯುವ ನೀರು, ಮನೆ, ನಿರ್ಮಿಸಲು ಬಿಡುತ್ತಿಲ್ಲ ಎಂದರು.

ಜಿ.ಪಂ. ಸದಸ್ಯ ಲತೀಫ್, ಜಿ.ಪಂ. ಮಾಜಿ ಅಧ್ಯಕ್ಷ ಬಿ. ಶಿವಪ್ಪ ಅವರು ಪರಿಶಿಷ್ಟರಿಗೆ ಮೂಲ ಸೌಲಭ್ಯ ಕಲ್ಪಿಸುವ ಬಗ್ಗೆ ಹಲವು ಮಾಹಿತಿ ನೀಡಿದರು.

ರಜನಿಕಾಂತ್, ಇಂದಿರಾ, ಜೆ.ಪಿ.ರಾಜು, ಕಾಳಿಂಗ, ರಾಜಪ್ಪ, ಮೋಹನ್ ಇತರರು ಹಲವು ವಿಚಾರಗಳ ಕುರಿತು ಅಧ್ಯಕ್ಷರ ಗಮನಕ್ಕೆ ತಂದರು.

ಮುನಿಯಪ್ಪ ಮಾತನಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿಕೊಂಡು ಕಾರ್ಯ ನಿರ್ವಹಿಸುವದರಿಂದ ಸಮಸ್ಯೆಗಳು ಜಠಿಲವಾಗುತ್ತ್ತಿವೆ. ಗಿರಿಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಸಲಹೆ ಮಾಡಿದರು.

ಬಸವನಹಳ್ಳಿ ಲ್ಯಾಂಪ್ ಸಂಸ್ಥೆಯ ರಾಜಾರಾವ್ ಬಾಳೆಗುಂಡಿ ವ್ಯಾಪ್ತಿಯಲ್ಲಿ 150 ಮಂದಿ ವಾಸಿಸುತ್ತಿದ್ದು, ಅವರಿಗೆ ಇದುವರೆಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಡಿವೈಎಸ್‍ಪಿ ಸುಂದರರಾಜ್, ಉಪ ಸಂರಕ್ಷಣಾಧಿಕಾರಿ ಸೂರ್ಯಸೇನ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಾಯಾದೇವಿ ಗಲಗಲಿ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ನಾನಾ ಇಲಾಖೆ ಅಧಿಕಾರಿಗಳು ಇತರರು ಇದ್ದರು.