ಮಡಿಕೇರಿ, ನ. 12: ಮಡಿಕೇರಿಯ ತಿರಿಬೊಳ್‍ಚ ಕೊಡವ ಸಂಘ ಹಾಗೂ ಕೊಡವ ಸಮಾಜ ಕುಶಾಲನಗರ ಈ ಎರಡು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕುಶಾಲನಗರ ಕೊಡವ ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ಕೊಡವ ಮದುವೆ ಪದ್ಧತಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಕೆಲವು ಆಚಾರದ ಕುರಿತು ಸುಧಾರಣೆ ತರುವ ನಿಟ್ಟಿನಲ್ಲಿ ‘ಮಂಗಲತ್ ನೀರ್ ಎಡ್‍ಪಲ್ಲಿ ಮೂಡಿನ ತಡ್‍ತಿತ್ ಆಡುವೊ’ ಎಂಬ ವಿಷಯದ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡವ ಸಮಾಜದ ಅಧ್ಯಕ್ಷ ಮಂಡೆಪಂಡ ಬೋಸ್ ಮಂದಣ್ಣ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಅಯ್ಯಲಪಂಡ ಮಂದಣ್ಣ, ಕಾರ್ಯದರ್ಶಿ ಪುಲಿಯಂಡ ಚಂಗಪ್ಪ, ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಹಾಜರಿದ್ದರು.

ಸಂಘದ ಸಲಹೆಗಾರ ಕುಕ್ಕೆರ ಜಯ ಚಿಣ್ಣಪ್ಪ ಕೊಡವ ಸಂಪ್ರದಾಯದಂತೆ ನೆಲ್ಲಕ್ಕಿಯಲ್ಲಿ ತಪ್ಪಡಕ ಕಟ್ಟಿದರು. ಬೋಸ್ ಮೊಣ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಂಚಾಲಕಿ ಕೂಪದಿರ ಜೂನ ವಿಜಯ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಉಪಾಧ್ಯಕ್ಷೆ ತೆನ್ನಿರ ರಾಧ ಪೊನ್ನಪ್ಪ ಸ್ವಾಗತಿಸಿದರು. ಸಲಹೆಗಾರ ಉಳ್ಳಿಯಡ ಎಂ. ಪೂವಯ್ಯ ಪ್ರಾಸ್ತಾವಿಕ ನುಡಿಯಾಡಿದರು. ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಪ್ರಬಂಧ ಮಂಡಿಸಿದರು. ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹತ್ತು ಹಲವು ಚರ್ಚೆಗಳು ನಡೆದವು. ಕೊನೆಗೆ ಎಲ್ಲಾ ಊರು- ಕೇರಿ- ನಾಡು- ನಗರಗಳಲ್ಲಿ ಈ ರೀತಿಯ ಇನ್ನಷ್ಟು ವಿಚಾರಗೋಷ್ಠಿ, ಸಂವಾದ ಕಾರ್ಯಕ್ರಮ ಜೊತೆಗೆ ಜಿಲ್ಲಾಮಟ್ಟದ ಬೃಹತ್ ಸಮಾವೇಶ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವದೆಂದು ಸಂಘಟಕರು ಮಾಹಿತಿಯಿತ್ತರು.