ವೀರಾಜಪೇಟೆ, ನ. 13: ಬಿಟ್ಟಂಗಾಲದಿಂದ ನಾಂಗಾಲ ಮಾರ್ಗವಾಗಿ ಪೊದಕೇರಿ ವಿ.ಬಾಡಗ ಗ್ರಾಮಕ್ಕೆ ತೆರಳುವ ರಸ್ತೆ ಹೀನಾಯ ಸ್ಥಿತಿಯಲ್ಲಿದ್ದು ಶಾಲಾ ವಾಹನಗಳು ಇತರ ಖಾಸಗಿ ವಾಹನಗಳು ತೆರಳಲು ಅಡಚಣೆ ಉಂಟಾಗುತ್ತಿದೆ. ಆದ್ದರಿಂದ ಪೊದಕೇರಿ ನಿವಾಸಿಗಳೇ ಸ್ವಯಂಪ್ರೇರಿತರಾಗಿ ರಸ್ತೆ ದುರಸ್ತಿಗೆ ಮುಂದಾಗಿದ್ದು ಇಂದಿನಿಂದ ರಸ್ತೆ ದುರಸ್ತಿ ಆರಂಭಿಸಿದ್ದಾರೆ.ರಸ್ತೆ ದುರಸ್ತಿ ಸ್ಥಳಕ್ಕೆ ತೆರಳಿದ ಮಾಧ್ಯಮಗಳೊಂದಿಗೆ ಪೊದಕೇರಿ ನಿವಾಸಿಗಳ ಪರವಾಗಿ ದುರಸ್ತಿಯ ನೇತೃತ್ವ ವಹಿಸಿದ್ದ ಚೇಮಿರ ಪ್ರಕಾಶ್ ಮಾತನಾಡಿ ಸುಮಾರು 21 ವರ್ಷಗಳಿಂದಲೂ ಈ ರಸ್ತೆ ಹಾಳಾಗಿದ್ದು, ಯಾವದೇ ಖಾಸಗಿ ಬಸ್ಸುಗಳು,

(ಮೊದಲ ಪುಟದಿಂದ) ವಾಹನಗಳು ಸಂಚರಿಸಲು ಆಸಕ್ತಿ ತೋರುತ್ತಿಲ್ಲ. ನಾಂಗಾಲ, ತೊತೇರಿ, ಪೊದಕೇರಿ ಪ್ರದೇಶದಿಂದ ಸುಮಾರು 150ಮಕ್ಕಳು ವಾಹನದಲ್ಲಿಯೇ ಶಾಲೆಗೆ ತೆರಳ ಬೇಕಾಗಿದೆ. ಆದರೆ ಈ ರಸ್ತೆಯಲ್ಲಿ ಶಾಲಾ ವಾಹನಗಳು ಸಂಚರಿಸಲು ಹಿಂದೇಟು ಹಾಕುತ್ತಿರುವದರಿಂದ ತಾತ್ಕಾಲಿಕವಾಗಿಯಾದರೂ ನಿವಾಸಿಗಳು ರಸ್ತೆ ದುರಸ್ತಿ ಮಾಡುತ್ತಿದ್ದಾರೆ. ಸುಮಾರು 5ಕಿ.ಮೀ ರಸ್ತೆ ದುರಸ್ತಿಗೆ ಅಂದಾಜು ರೂ 50,000 ವೆಚ್ಚ ತಗುಲಲಿದೆ. ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗಲಿರುವದರಿಂದ ಈ ರಸ್ತೆ ದುರಸ್ತಿ ಕೈಗೊಂಡಿರುವದಾಗಿ ತಿಳಿಸಿದರು.

ಬಿಟ್ಟಂಗಾಲದ ನಾಂಗಾಲ, ತೊತೇರಿ, ಪೊದಕೇರಿ ರಸ್ತೆ ದುರಸ್ತಿಗೆ ಆಗ್ರಹಿಸಿ ಈ ವಿಭಾಗದ ಜಿಲ್ಲಾ ಪಂಚಾಯಿತಿ ಸದಸ್ಯೆ ಅಪ್ಪಂಡೇರಂಡ ಭವ್ಯ, ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು, ಉಸ್ತುವಾರಿ ಸಚಿವರು ಸೇರಿದಂತೆ ಜನ ಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ನೀಡಿದರೂ ಯಾರೂ ಸ್ಪಂದಿಸದ ಕಾರಣ ನಿವಾಸಿಗಳೇ ರಸ್ತೆ ದುರಸ್ತಿ ಮಾಡಬೇಕಾಯಿತು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪೊದಕೇರಿ ನಿವಾಸಿಗಳು ಸೇರಿದಂತೆ ಈ ವಿಭಾಗದ ಗ್ರಾಮಸ್ಥರು ಇತರ ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ತಿರಸ್ಕರಿಸಿ ಬ್ಯಾಲೆಟ್ ಪೇಪರಿನಲ್ಲಿ ನಮೂದಿಸಿರುವ "ನೋಟ" ಕಾಲಂಗೆ ಮತದಾನ ಮಾಡಲು ತೀರ್ಮಾನಿಸಿರುವದಾಗಿ ಮಳವಂಡ ಗಿರೀಶ್ ಮಾದಯ್ಯ ಹೇಳಿದರು.

ಜೆ.ಸಿ.ಬಿ ಯಂತ್ರವನ್ನು ಬಳಸಿ ರಸ್ತೆ ಗುಂಡಿ ಮುಚ್ಚುವದು, ರಸ್ತೆಯ ಎರಡು ಬದಿಗಳಲ್ಲಿ ಕಳೆ, ಕುರುಚಲು ಗಿಡಗಳನ್ನು ತೆಗೆದು ಮಣ್ಣನ್ನು ಅಗೆದು ನೀರು ಹರಿಯಲು ಚರಂಡಿ ಮಾಡುವದು ಸ್ವಯಂ ಪ್ರೇರಿತ ರಸ್ತೆ ದುರಸ್ತಿಯಲ್ಲಿ ಸೇರಿದೆ ಎಂದು ಕಂಜಿತಂಡ ಧರ್ಮಜ ಹೇಳಿದರು.

ಇಂದು ಬೆಳಗಿನಿಂದಲೇ ಪೊದಕೇರಿ ನಿವಾಸಿಗಳು ರಸ್ತೆ ದುರಸ್ತಿಯಲ್ಲಿ ತೊಡಗಿದ್ದರು. ರಸ್ತೆ ದುರಸ್ತಿಯಲ್ಲಿ ಮಳವಂಡ ಪ್ರಕಾಶ್, ಚೇಮಿರ ಕಾಶಿ, ಭೂಪೇಶ್, ಸತೀಶ್ ಕುಮಾರ್, ಒಕ್ಕಲಿಗರ ರಾಮಚಂದ್ರ, ಸೀತಾರಾಂ ಹಾಗೂ ಒಂದು ಜೆಸಿಬಿ ಯಂತ್ರ, 15ಕ್ಕೂ ಅಧಿಕ ಮಂದಿ ಕೂಲಿ ಕಾರ್ಮಿಕರು ಭಾಗಿಯಾಗಿದ್ದರು.