ಮಡಿಕೇರಿ, ನ. 12: ನಗರದ ಶ್ರೀ ಓಂಕಾರೇಶ್ವರ ದೇವಾಲಯ ರಸ್ತೆಗೆ ಹೊಂದಿಕೊಂಡಂತೆ ನಿರ್ಮಾಣಗೊಳ್ಳಲಿರುವ ರಾಜ್ಯ ಸರಕಾರದ ಬಹು ನಿರೀಕ್ಷೆಯ ಇಂದಿರಾ ಕ್ಯಾಂಟೀನ್ ಮುಂದಿನ ಜನವರಿ ಯೊಳಗೆ ಕಾರ್ಯಾರಂಭಗೊಳ್ಳಲಿದೆ ಎಂದು ಮೂಲಗಳಿಂದ ಗೊತ್ತಾಗಿದೆ.ಆಧುನಿಕ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ ಈ ಕ್ಯಾಂಟೀನ್ ವ್ಯವಸ್ಥೆಯನ್ನು ಬೆಂಗಳೂರಿನಿಂದ ತರಿಸಿ ಅಳವಡಿಸುವ ಕಾರ್ಯಕ್ಕೆ ಈಗಾಗಲೇ ನಿವೇಶನಕ್ಕೆ ತಕ್ಕ ತೇಜನೆ ರೂಪಿಸುತ್ತಿರು ವದಾಗಿ ಖಾತರಿಯಾಗಿದೆ. ಇಲ್ಲಿ ಗುರುತಿಸಿರುವ ನಿವೇಶನವು ತ್ರಿಕೋನಾಕಾರದಲ್ಲಿ ಮೂರುಕಡೆ ರಸ್ತೆ ಸಂಪರ್ಕದಿಂದ ಕೂಡಿದೆ.
ಅದಕ್ಕೆ ಪೂರಕವಾಗಿ ಇಂದಿರಾ ಕ್ಯಾಂಟೀನ್ ರಚನೆಗೊಂಡು ಇಲ್ಲಿ ಅಳವಡಿಸಲ್ಪಡಲಿದ್ದು, ಕಟ್ಟಡ ಇತ್ಯಾದಿ ಕಾಮಗಾರಿ ನಡೆಸದೆ ಸಿದ್ಧಗೊಂಡ ರೀತಿಯಲ್ಲಿ ಜೋಡಣೆ ಮಾಡಲಾಗುವದು ಎಂದು ಮಾಹಿತಿ ಲಭಿಸಿದೆ. 2018ರ ಹೊಸ ವರ್ಷಕ್ಕೆ (ಜನವರಿ) ಕ್ಯಾಂಟೀನ್ ಕಾರ್ಯಾರಂಭಗೊಳಿಸಲು ಸರಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಕಾರ್ಯಪ್ರವೃತ್ತಗೊಂಡಿದೆ.