ಶನಿವಾರಸಂತೆ, ನ. 12: ಕೊಡ್ಲಿಪೇಟೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇಂದು ನಡೆದ ಹೋಬಳಿ ಜಾತ್ಯತೀತ ಜನತಾದಳದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆಯನ್ನು ಜನತಾದಳದ ಜಂಟಿ ಕಾರ್ಯದರ್ಶಿ ಎಸ್.ಡಿ. ತಮ್ಮಯ್ಯ ವಹಿಸಿದ್ದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆ ಮತ್ತು ಸರ್ಕಾರದ ನಡುವೆ ಸೇತುವೆಯಾಗಲಿಲ್ಲ. ಕೊಡಗು ರೈತರ ಜಿಲ್ಲೆಯಾಗಿದ್ದು, ಕಾಂಗ್ರೆಸ್ ಸರ್ಕಾರ 5 ಬಾರಿ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿದ್ದು, ಅಭಿವೃದ್ಧಿ ಕುಂಠಿತವಾಗಿದೆ. ಸೇವಾ ಮನೋಭಾವದ ಕೊರತೆಯಿಂದ ಇಚ್ಛಾಶಕ್ತಿಗೆ ಅಡ್ಡಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಶೇ.70ರಷ್ಟು ಮತದಾರರಿದ್ದು, ಇಂದು ಜನರ ಭಾವನೆ ಮತವಾಗಿ ಪರಿವರ್ತನೆ ಯಾಗಿದೆ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅವಧಿಯಲ್ಲಿ ಅದ್ಭುತ ಅಭಿವೃದ್ಧಿ ಯಾಗಿತ್ತು. ಸಾರಾಯಿ, ಲಾಟರಿ ನಿಷೇಧವಾಗಿತ್ತು. ಜೆಡಿಎಸ್ ಮುಖಂಡರು ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ನಿರಂತರ ಕಾನೂನಿನ ಹೋರಾಟ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮಾಜಿ ಸಚಿವ ಜೀವಿಜಯ ಅವರು ಬಹುಮತದಿಂದ ಗೆಲುವು ಸಾಧಿಸಬೇಕೆಂಬ ಆಶಾಭಾವನೆಯಿಂದ ಸಂಘಟನೆ ನಡೆಯುತ್ತಿದೆ ಎಂದು ಸಂಕೇತ್ ಪೂವಯ್ಯ ಹೇಳಿದರು. ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಜಿಲ್ಲೆಯ ಜೆಡಿಎಸ್ ಕುಟುಂಬ ಜನರ ನಡುವೆಯಿದ್ದು ಸ್ಪಂದಿಸುತ್ತಿದೆ. ಸಮಸ್ಯೆ ಪರಿಹರಿಸುತ್ತಾ ಸೇತುವೆಯಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.

ಜಿ.ಪಂ. ಸದಸ್ಯ ಸಿ.ಪಿ. ಪುಟ್ಟರಾಜು, ಪಕ್ಷದ ಮುಖಂಡರು ಗಳಾದ ರಾಜಾರಾವ್, ನಿಸಾರ್, ಹೆಚ್.ಎಸ್. ಸುರೇಶ್, ಕೆ.ಎಂ. ಗಣೇಶ್ ಅವರುಗಳು ಮಾತನಾಡಿ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯ ಅಭಿವೃದ್ಧಿಯಾಗುವದಿಲ್ಲ ಎಂದರು.

ಸಭೆಯಲ್ಲಿ ಕೊಡ್ಲಿಪೇಟೆ ಹೋಬಳಿಯ ನೂತನ ಅಧ್ಯಕ್ಷರನ್ನಾಗಿ ಪಕ್ಷದ ಮುಖಂಡರಾದ ಕೆ.ಆರ್. ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಯಿತು.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಹಲವು ಕಾರ್ಯಕರ್ತರುಗಳು ಪಕ್ಷದ ನಾಯಕರುಗಳಾದ ಜೀವಿಜಯ ಮತ್ತು ಸಂಕೇತ್ ಪೂವಯ್ಯ ಸಮ್ಮುಖದಲ್ಲಿ ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಗೊಂಡರು.

ಸೋಮವಾರಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷ ಪುಷ್ಪರಾಜೇಶ್, ಪ್ರಮುಖರಾದ ಆದಿಲ್ ಪಾಷ, ಜಯಪ್ಪ, ಬಿ.ಕೆ. ದಿನೇಶ್, ಡಿ.ವಿ. ಭೂಪಾಲ್, ಕಾಂತರಾಜ್, ಡಿ.ಪಿ. ಬೋಜಪ್ಪ, ಹೊನ್ನೇಗೌಡ, ಸಾಬು ಮುತ್ತೇಗೌಡ ಹಾಗೂ ಇತರ ಕಾರ್ಯಕರ್ತರು ಹಾಜರಿದ್ದರು. ಕೆ.ಟಿ. ಪರಮೇಶ್ ನಿರೂಪಿಸಿ, ಶೇಖರ್ ಸ್ವಾಗತಿಸಿ, ವಂದಿಸಿದರು.