ಕೂಡಿಗೆ, ನ. 13: ಕರ್ನಾಟಕ ರಾಜ್ಯದಲ್ಲಿ ಆಯಾ ಜಿಲ್ಲೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಮತ್ತು ನಬಾರ್ಡ್ ಸಹಾಯದೊಂದಿಗೆ ಒಂದೊಂದು ಉಗ್ರಾಣ (ಗೋದಾಮು) ನಿರ್ಮಾಣ ಮಾಡುವ ಯೋಜನೆಯು ಕಾರ್ಯಗತವಾಗಿದೆ.
ಆದರೆ ಕೊಡಗು ಜಿಲ್ಲೆ ಕುಶಾಲನಗರ ಹೋಬಳಿಯ ಕೂಡಿಗೆಯ ರೇಷ್ಮೆ ಕೃಷಿ ಕ್ಷೇತ್ರದ ಆವರಣದಲ್ಲಿ 10 ಎಕರೆ ಪ್ರದೇಶದಲ್ಲಿ 18 ಕೋಟಿ ರೂ. ವೆಚ್ಚದ ನಾಲ್ಕು ಉಗ್ರಾಣಗಳ ನಿರ್ಮಾಣಕ್ಕೆ ಶಂಕುಸ್ಥಾಪನೆಗೊಂಡು ನಾಲ್ಕು ವರ್ಷಗಳೇ ಕಳೆದರೂ ಪೂರ್ಣಗೊಂಡಿಲ್ಲ. ಕಳೆದೆರೆಡು ವರ್ಷಗಳಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ ಎಂಬ ಸ್ಥಳೀಯರ ಆರೋಪದ ಮೇರೆಗೆ ಶಾಸಕ ಅಪ್ಪಚ್ಚುರಂಜನ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿ ಉಗ್ರಾಣದ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಅಧಿಕಾರಿಗಳು ಕಳಪೆಯಾಗಿದ್ದ ಗೋಡೆಯ ಹಂತವನ್ನು ಕೆಡುವಿ ಮರು ಕಟ್ಟಡವನ್ನು ನಿರ್ಮಿಸಲು ಮುಂದಾಗಿದ್ದರು. ಆದರೂ ಎರಡು ವರ್ಷಗಳು ಕಳೆದರೂ ಹಣ ಬಿಡುಗಡೆಯಾಗದೆ ಕಾಮಗಾರಿ ಗುತ್ತಿಗೆ ಪಡೆದ ಬೆಂಗಳೂರು ಮತ್ತು ಮುಂಬೈ ಗುತ್ತಿಗೆದಾರರು ಉಗ್ರಾಣ ಕಟ್ಟಡ ಕಾಮಗಾರಿ ಅರ್ಧದಲ್ಲೆ ಸ್ಥಗಿತಗೊಳಿಸಿದ್ದಾರೆ. ಇದೀಗ ಈ ಸ್ಥಳವು ಪಾಳು ಬಿದ್ದಿದೆ.
ಉಗ್ರಾಣ ಕಟ್ಟಡ ಕಾಮಗಾರಿಗೆ ನಬಾರ್ಡ್ ಸಂಸ್ಥೆಯಿಂದ ಹಣ ಬಿಡುಗಡೆಯಾಗಿ ರಾಜ್ಯ ಸರ್ಕಾರದ ನಿಯಮಾನುಸಾರ ಕಾಮಗಾರಿ ನಿರ್ವಹಿಸಲು ಆದೇಶವಿದೆ. ಆದರೆ ಇದುವರೆಗೂ ನಬಾರ್ಡ್ ಅಥವಾ ಸರ್ಕಾರಗಳಾಗಲೀ ಹಣ ಬಿಡುಗಡೆ ಮಾಡದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಜಿಲ್ಲೆಯಲ್ಲಿ ಉಗ್ರಾಣ ಕಟ್ಟಡ ನಿರ್ಮಾಣವಾದರೆ ರಾಜ್ಯ ಸರ್ಕಾರ ಬಿಡುಗಡೆಗೊಳಿಸುವ ಪಡಿತರ ವಸ್ತುಗಳು ಮತ್ತು ಜಿಲ್ಲೆಯ ರೈತರು ಬೆಳೆದ ಭತ್ತ, ಜೋಳವನ್ನು ಸಂಗ್ರಹಿಸಲು ಅನುಕೂಲವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಿಲ್ಲೆಯ ರೈತರಿಗೆ ಅನುಕೂಲ ವಾಗುವಂತಹ ಈ ಬೃಹತ್ ಯೋಜನೆಯ ಕಾಮಗಾರಿಗೆ ಹಣ ಬಿಡುಗಡೆಗೊಳಿಸಲು ಪ್ರಯತ್ನಿಸಬೇಕಿದೆ.
-ಕೆ.ಕೆ.ನಾಗರಾಜಶೆಟ್ಟಿ