ವೀರಾಜಪೇಟೆ, ನ. 13: ನಿನ್ನೆ ದಿನ ರಾತ್ರಿ ಇಲ್ಲಿನ ಚರ್ಚ್ ರಸ್ತೆಯ ಸಾರ್ವಜನಿಕ ಶೌಚಾಲಯದ ಬಳಿಯ ಚರಂಡಿಯಲ್ಲಿ ಪತ್ತೆಯಾದ ಪುರುಷನ ಮೃತದೇಹದ ಗುರುತು ಇನ್ನೂ ಸಿಗದರಿಂದ ವೈದ್ಯಕೀಯ ಪರೀಕ್ಷೆಯನ್ನು ಮುಂದೂಡಲಾಗಿದೆ.ಮೃತದೇಹದ ಜೇಬಿನಲ್ಲಿ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ನಿನ್ನೆ ದಿನಕೇರಳದ ಇರಿಟ್ಟಿಯಿಂದ ವೀರಾಜಪೇಟೆಗೆ ಪ್ರಯಾಣ ಬೆಳೆಸಿದ ಬಸ್ಸಿನ ಟಿಕೇಟ್‍ನಿಂದ ಈತ ಕೇರಳದ ಮೂಲದವನಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದಕ್ಕಾಗಿ ನಗರ ಪೊಲೀಸರ ತಂಡ ಇಂದು ಬೆಳಿಗ್ಗೆ ಕೇರಳದ ಇರಿಟ್ಟಿ ಹಾಗೂ ಕೂಟುಪೊಳೆಗೆ ತೆರಳಿ ತನಿಖೆ ನಡೆಸಿದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಈ ಸಂಶಯಾಸ್ಪದ ಕೊಲೆ ಪ್ರಕರಣದಲ್ಲಿ ಇಂದು 15ಮಂದಿಯನ್ನು ತನಿಖೆ ನಡೆಸಿದರೂ ಕೊಲೆ ಹಾಗೂ ಮೃತನ ಚಹರೆ ಕುರಿತು ಮಾಹಿತಿ ತಿಳಿದು ಬಂದಿಲ್ಲ. ತಲೆಗೆ ದೊಡ್ಡ ಗಾತ್ರದ ಹಾಲೋಬ್ರಿಕ್ಸ್ ಎಸೆದು ಕೊಲೆ ಮಾಡಲಾಗಿದೆ. ಮೃತದೇಹ ವನ್ನು ಗುರುತಿಸುವ ಸಲುವಾಗಿ ಇಲ್ಲಿನ ಸಾರ್ವಜನಿಕ ಶವಗಾರದಲ್ಲಿರಿಸ ಲಾಗಿದೆ. ಪೊಲೀಸರ ಪ್ರಕಾರ ಕೇರಳದ ಇರಿಟ್ಟಿಯಿಂದ ಮೃತನ ಜೊತೆಯಲ್ಲಿ ಸಂಗಡಿಗನು ಬಂದಿದ್ದು
ಜೊತೆಯಲ್ಲಿಯೇ ಇದ್ದ ಇಬ್ಬರು ರಾತ್ರಿ ಗಲಾಟೆ ಮಾಡಿಕೊಂಡು ಸಂಗಡಿಗ ಈತನನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ
ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.