ಮಡಿಕೇರಿ, ನ. 12: ಕಳೆದ ವರ್ಷ ಸೆಪ್ಟೆಂಬರ್ 9 ರಂದು ನಡೆದಿದ್ದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಂದಿನ ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷರು ನೀಡಿದ್ದ ‘ವಿಪ್’ ಉಲ್ಲಂಘನೆ ದೂರಿನಡಿ ಜಿಲ್ಲಾಧಿಕಾರಿಗಳು ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಇವರಿಬ್ಬರ ಸದಸ್ಯತ್ವ ವಜಾಗೊಳಿಸಿದ್ದ ಪ್ರಕರಣ ಇದೀಗ ಮಹತ್ವ ಪಡೆದುಕೊಂಡಿದೆ.ಜಿಲ್ಲಾಧಿಕಾರಿಗಳು ಕಳೆದ ಮಾರ್ಚ್ನಲ್ಲಿ ಹೊರಡಿಸಿದ್ದ ವಜಾ ಆದೇಶ ಪ್ರಶ್ನಿಸಿ ಇಬ್ಬರು ಸದಸ್ಯೆಯರು ರಾಜ್ಯ ಉಚ್ಚನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ಆಲಿಸಿದ್ದ ಉಚ್ಚ ನ್ಯಾಯಾಲಯವು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಂದರ್ಭ ಕಾಂಗ್ರೆಸ್ ವಿಪ್ ಜಾರಿಗೊಳಿಸುವಲ್ಲಿ ಪಕ್ಷದ ನಿಯಮ ಉಲ್ಲಂಘನೆಯಾಗಿದ್ದು, ನಗರಸಭೆಯ ಸದಸ್ಯತ್ವದಿಂದ ಜಿಲ್ಲಾಧಿಕಾರಿ ಸದಸ್ಯರಿಬ್ಬರನ್ನು ವಜಾಗೊಳಿಸಿದ್ದು ಸಿಂಧುವಲ್ಲವೆಂದು ತೀರ್ಪು ನೀಡಿತ್ತು.
ಕಳೆದ ಜುಲೈ 31 ರಂದು ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಈ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ರಾಗಿದ್ದ ಟಿ.ಪಿ. ರಮೇಶ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ಈ ಸಂಬಂಧ ವಿಚಾರಣೆ ಆಲಿಸುವದರೊಂದಿಗೆ, ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭ ‘ವಿಪ್’ ಜಾರಿಗೊಳಿಸುವ ವೇಳೆ ಪಕ್ಷ ಅನುಸರಿಸಬೇಕಿದ್ದ ನಿಯಮಗಳನ್ನು ಉಲ್ಲಂಘಿಸಿರುವದಾಗಿ ಈ ಹಿನ್ನೆಲೆ ಹೈಕೋರ್ಟ್ ತ್ರಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.
2004ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧಾರದಂತೆ ಪಕ್ಷದಿಂದ ಯಾರಿಗಾದರೂ ‘ವಿಪ್’ ಜಾರಿಗೊಳಿಸಬೇಕಿದ್ದರೆ, ನೇರವಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಈ ಅಧಿಕಾರವಿದೆ. ತಪ್ಪಿದಲ್ಲಿ ಅಧ್ಯಕ್ಷರು ಪಕ್ಷದ ಪ್ರಧಾನ ಕಾರ್ಯದರ್ಶಿ ಅಥವಾ ಜಿಲ್ಲಾಧ್ಯಕ್ಷರಿಗೆ ‘ವಿಪ್’ ಜಾರಿಗೆ ನಿರ್ದೇಶಿಸಬಹುದು.
ಆದರೆ ನಗರಸಭೆಯ ಚುನಾವಣೆ ಸಂದರ್ಭ ಕೆಪಿಸಿಸಿ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗೆ
(ಮೊದಲ ಪುಟದಿಂದ) ‘ವಿಪ್’ ಜಾರಿಗೆ ಸೂಚಿಸಿದ್ದಾಗಿದೆ. ಈ ಸಂದರ್ಭ ಅವರು ವಿಪ್ ಜಾರಿಗೊಳಿಸದೆ ಜಿಲ್ಲಾಧ್ಯಕ್ಷರಿಗೆ ಆ ಬಗ್ಗೆ ಸೂಚನೆಯೊಂದಿಗೆ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಈ ಕಾರಣಕ್ಕಾಗಿ ಕಾಂಗ್ರೆಸ್ನಿಂದ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯತ್ವ ಪಡೆದಿರುವ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಅವರುಗಳ ಸದಸ್ಯತ್ವ ವಜಾಗೊಳಿಸಿರುವ ಕ್ರಮ ಅಸಿಂಧು ಎಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಸದಸ್ಯರಿಗೆ ಖುಷಿ: ಇದೀಗ ಹಿಂದಿನ ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್ ಹಾಗೂ ಇತರರು ತಮ್ಮ ವಿರುದ್ಧ ನಡೆಸಿರುವ ಪಿತೂರಿ ವಿಫಲಗೊಂಡು, ಸರ್ವೋಚ್ಚ ನ್ಯಾಯಾಲಯದಲ್ಲಿ ಗೆಲುವು ಸಿಕ್ಕಿರುವದು ತೀವ್ರ ಆನಂದ ತಂದಿದೆ ಎಂದು ಸದಸ್ಯರುಗಳಾದ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಪ್ರತಿಕ್ರಿಯಿಸಿದ್ದಾರೆ.
ಕ್ಷೇತ್ರದ ಕೆಲಸಕ್ಕೆ ಒತ್ತು: ಈಗಾಗಲೇ ತನ್ನ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಜನಸೇವೆಯಲ್ಲಿ ತೊಡಗಿರುವ ತಾನು ಸ್ವತಂತ್ರ ಳಾಗಿಯೇ ಮುಂದುವರಿಯುವೆ ಎಂದು ತಿಳಿಸಿದ ವೀಣಾಕ್ಷಿ, ಎಷ್ಟೋ ಸಂದರ್ಭ ಪಕ್ಷದ ಕೆಲವರು ಅವಮಾನಕರವಾಗಿ ನಡೆಸಿಕೊಂಡ ನೋವು ಮರೆಯಲು ಅಸಾಧ್ಯವೆಂದು ವಿಷಾದದ ನುಡಿಯಾಡಿದರು.
ಅಧ್ಯಕ್ಷ ಸ್ಥಾನ ಬಿಟ್ಟುಕೊಡಲಿ: ತಾನು ಈ ಕ್ಷಣಕ್ಕೂ ಕಾಂಗ್ರೆಸ್ನಲ್ಲಿಯೇ ಇದ್ದು, ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಒಪ್ಪಂದದಂತೆ, ಕಾಂಗ್ರೆಸ್ ಮುಖಂಡರು ನಗರಸಭಾ ಅಧ್ಯಕ್ಷ ಸ್ಥಾನವನ್ನು ಮುಂದಿನ ಒಂದೂಕಾಲು ವರ್ಷ ತನಗೆ ಬಿಟ್ಟುಕೊಡಬೇಕೆಂದು ಶ್ರೀಮತಿ ಬಂಗೇರ ಪಟ್ಟು ಹಿಡಿದಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಸಭೆಗಳಲ್ಲಿ ಮುಖಂಡರ ಎದುರು ಪದೇ ಪದೇ ಅವಮಾನಕ್ಕೆ ಒಳಗಾಗಿದ್ದೆಯಾದರೂ, ಯಾರೊಬ್ಬರೂ ಸೌಜನ್ಯಕ್ಕೂ ಸಮಾಧಾನ ಹೇಳಲಿಲ್ಲವೆಂದು ದುಃಖ ಹೊರಗೆಡವಿದರು.
ಈಗಾಗಲೇ ಹಾಲಿ ಅಧ್ಯಕ್ಷರಿಗೆ ಜಿಲ್ಲಾ ಉಸ್ತುವಾರಿ ಸಚಿವರು ತನಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸೂಚಿಸಿದ್ದು, ಪಕ್ಷದಿಂದ ನ್ಯಾಯ ಸಿಗುವ ವಿಶ್ವಾಸವಿರುವದಾಗಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದರು.