ಕುಶಾಲನಗರ, ನ. 14: ಹಿರಿಯ ಸಹಕಾರಿಗಳ ಪರಿಶ್ರಮ, ತ್ಯಾಗದಿಂದಾಗಿ ಕೊಡಗು ಜಿಲ್ಲೆಯಲ್ಲಿ ಸಹಕಾರಿ ರಂಗ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಎ.ಕೆ. ಮನುಮುತ್ತಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕೊಡಗು ಜಿಲ್ಲಾ ಸಹಕಾರ ಇಲಾಖೆ, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕುಶಾಲನಗರ ಹೋಬಳಿ ವಿವಿಧ ಸಹಕಾರ ಸಂಘಗಳ ಸಂಯುಕ್ತಾಶ್ರ ಯದಲ್ಲಿ ಸ್ಥಳೀಯ ಕನ್ನಿಕಾ ಸಭಾಂಗಣ ದಲ್ಲಿ ನಡೆದ ಕೊಡಗು ಜಿಲ್ಲಾಮಟ್ಟದ 64ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಸಹಕಾರಿ ರಂಗ ಶತಮಾನ ಗಳನ್ನು ಕಂಡಿದೆ.
(ಮೊದಲ ಪುಟದಿಂದ) ಯಾವದೇ ವಾಣಿಜ್ಯ ಬ್ಯಾಂಕುಗಳಿಗೆ ಕಡಿಮೆಯಿಲ್ಲದಂತೆ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುವದರೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ. ಈ ಯಶಸ್ಸಿನ ಹಿಂದೆ ಹಿರಿಯರ ಕೊಡುಗೆಯನ್ನು ಸ್ಮರಿಸಬೇಕಾಗಿದೆ ಎಂದರು.
ತಂತ್ರಜ್ಞಾನಗಳ ಬಳಕೆ, ನಗದು ರಹಿತ ವ್ಯವಹಾರಗಳು ದೇಶದ ಪ್ರಗತಿ ಸಂಕೇತವಾಗಿದೆ. ಯಾವದೇ ಕ್ಷೇತ್ರ ಕೂಡ ಬದಲಾವಣೆಗಳ ಮೂಲಕ ಯಶಸ್ಸು ಕಂಡುಕೊಳ್ಳಲು ಸಾಧ್ಯವಿದೆ. ಸಹಕಾರಿ ಕ್ಷೇತ್ರದಲ್ಲಿ ಗಣಕೀಕರಣ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ರಂಗ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಸದಸ್ಯರು ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ಹೊಂದಿಕೊಳ್ಳುವದು ಅತ್ಯವಶ್ಯಕವಾಗಿದೆ ಎಂದರು.
ಸಹಕಾರ ಧ್ವಜಾರೋಹಣ ನೆರವೇರಿಸಿದ ಮಡಿಕೇರಿ ಸಹಕಾರ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಗುರುಮಲ್ಲಪ್ಪ ಮಾತನಾಡಿ, ಅಸಮರ್ಪಕ ಆಡಳಿತ ವ್ಯವಸ್ಥೆ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಕೆಲವು ಸಹಕಾರ ಸಂಘಗಳಲ್ಲಿ ಅವ್ಯವಹಾರಗಳು ತಾಂಡವಾಡುತ್ತಿರುವದು ಕಂಡುಬಂದಿದೆ. ಹಿರಿಯ ಸಹಕಾರಿಗಳು ಯಾವದೇ ಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆ ಮೂಲಕ ಸಹಕಾರ ಕ್ಷೇತ್ರವನ್ನು ಕಟ್ಟಿ ಬೆಳೆಸಿಕೊಂಡು ಬಂದಿದ್ದಾರೆ. ಇದನ್ನು ಮನಗಂಡು ಇಂದಿನ ಸಹಕಾರಿಗಳು ಕ್ಷೇತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ ಯಶಸ್ಸಿನತ್ತ ಕೊಂಡೊಯ್ಯುವಲ್ಲಿ ಚಿಂತನೆ ಹರಿಸಬೇಕಿದೆ ಎಂದರು.
ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ವೃತ್ತಿಪರತೆ ದಿನಾಚರಣೆ ವಿಷಯದ ಕುರಿತು ಬೆಂಗಳೂರು ಆರ್ಐಸಿಎಂ ನಿವೃತ್ತ ಪ್ರಾದೇಶಿಕ ನಿರ್ದೇಶಕÀ ಡಾ.ಎಸ್.ಎ. ಸಿದ್ದಾಂತಿ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೆ.ಪಿ. ಚಂದ್ರಕಲಾ, ಬಿ.ಪಿ.ಮಹದೇವಪ್ಪ, ಎಂ.ಕೆ.ನಜೀರ್ ಅಹಮ್ಮದ್, ಎ.ಎಂ.ರಾಘವಯ್ಯ, ಎಂ.ಕೆ.ಕುಶಾಲಪ್ಪ, ಕೆ.ಆರ್.ರಂಗಸ್ವಾಮಿ, ಎಂ.ಎಂ. ಸೋಮಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಎಸ್.ಪಿ. ನಿಂಗಪ್ಪ, ನಿರ್ದೇಶಕ ಹೆಚ್.ಎನ್. ರಾಮಚಂದ್ರ, ಪಿ.ಸಿ.ಅಚ್ಚಯ್ಯ ವೇದಿಕೆಯಲ್ಲಿದ್ದರು.
ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮನುಮಹೇಶ್ ಕಾವೇರಿ ತಾಲೂಕು ನಿರ್ಣಯ ಮಂಡಿಸಿದರು, ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ನಂಜುಂಡಸ್ವಾಮಿ ರೈತಗೀತೆ ಹಾಡಿದರು, ಆರ್.ಮಂಜುಳಾ ಪ್ರಾರ್ಥಿಸಿದರು, ವಿ.ಪಿ.ನಾಗೇಶ್ ಸ್ವಾಗತಿಸಿದರು.
ಮೆರಣಿಗೆ : ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೈಚನಹಳ್ಳಿಯ ಮಾರಮ್ಮ ದೇವಾಲಯದಿಂದ ಸಹಕಾರಿಗಳ ಮೆರವಣಿಗೆ ಪಟ್ಟಣದ ರಾಜ್ಯ ಹೆದ್ದಾರಿ ಮೂಲಕ ಸಭಾ ವೇದಿಕೆಗೆ ಆಗಮಿಸಿತು. ಕೊಡಗು ಜಿಲ್ಲಾ ವ್ಯಾಪಾರೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ಮೆರವಣಿಗೆಗೆ ಚಾಲನೆ ನೀಡಿದರು.