ವೀರಾಜಪೇಟೆ, ನ. 14: ರಾಷ್ಟ್ರೀಯ ಪಕ್ಷಗಳು ದೇಶದ ಅಸಂಘಟಿತ ಕಾರ್ಮಿಕ ವರ್ಗಗಳನ್ನು ನಿಲ್ರ್ಯಕ್ಷಿಸುತ್ತಿದ್ದು ಮತದಾರರು ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಭ್ರಮನಿರಸನಗೊಂಡಿದ್ದಾರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಉತ್ತರ ನೀಡಲಾಗುವದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಟಿ. ಶೆಟ್ಟಿಗೇರಿ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ಕ್ಷೇತ್ರ ಕಾರ್ಮಿಕ ಘಟಕದ ಅಧ್ಯಕ್ಷ ಪರಮಲೆ ಗಣೇಶ್ ಆಯೋಜಿಸಿದ್ದ ಪಕ್ಷದ ಸ್ಥಳೀಯ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಈ ಬಾರಿ ರಾಜ್ಯದ ಜನತೆ ರಾಜಕೀಯವಾಗಿ ಆಡಳಿತದ ಬದಲಾವಣೆಯನ್ನು ಬಯಸಿದ್ದು ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಆಗುವದರಲ್ಲಿ ಯಾವದೇ ಸಂಶಯವಿಲ್ಲ ಎಂದರು. ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಬೇಕಾಗಿದ್ದು, ಮಡಿಕೇರಿ ಕ್ಷೇತ್ರದಲ್ಲಿ ಜೀವಿಜಯ ಸ್ಪಷ್ಟ ಬಹುಮತದಿಂದ ಗೆಲ್ಲಲಿದ್ದಾರೆ ಅವರ ಗೆಲುವಿನ ಮತಗಳ ಅಂತರವನ್ನು ಅಧಿಕ ಮಾಡುವದಕ್ಕಾಗಿ ಕಾರ್ಯಕರ್ತರಾದ ನಾವೆಲ್ಲಾ ಪಣ ತೊಡಬೇಕಿದೆ ಎಂದರು. ಜಿಲ್ಲೆಯ ಅಸಂಘಟಿತ ಕಾರ್ಮಿಕರ ಬಗ್ಗೆ ಮಾತನಾಡಿದ ಸಂಕೇತ್ ಅವರು ರಾಜ್ಯ ಸರಕಾರವು ಇ ಎಸ್ ಐ ಕಾನೂನುಗನುಗುಣವಾಗಿ ಕೇಂದ್ರದಲ್ಲಿ ಇಎಸ್‍ಐ ನಿಗಮವಿದ್ದು, ರಾಜ್ಯ ಸರಕಾರಗಳು ಕೇಂದ್ರದೊಡನೆ ಸಮಾಲೋಚನೆ ನಡೆಸಿ ರಾಜ್ಯದ ಆಯ್ದ ಜಿಲ್ಲೆಗಳನ್ನು ನೋಟಿಫೈ ಮಾಡುವದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿರುವ ಕೊಡಗಿನ ಶ್ರಮಜೀವಿಗಳಿಗೆ ಅನುಕೂಲವಾಗು ವಂತೆ ಇ ಎಸ್ ಐ ಆಸ್ಪತ್ರೆಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಕೇಂದ್ರ ಸಮಿತಿ ಅಧ್ಯಕ್ಷ ಎಸ್.ಎಚ್. ಮತೀನ್ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು. ಕುಮಾರಸ್ವಾಮಿ ಯವರ ಕೈಯನ್ನು ಬಲಪಡಿಸಲು ಬೆಂಬಲ ಸಾಬೀತುಪಡಿಸಬೇಕಿದೆ ಎಂದರು. ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೋಹಿತ್ ಗೌಡ, ನೂತನವಾಗಿ ಆಯ್ಕೆಯಾದ ಸ್ಥಾನೀಯ ಸಮಿತಿ ಅಧ್ಯಕ್ಷ ಉಳುವಂಗಡ ದತ್ತ, ಕ್ಷೇತ್ರ ಕಾರ್ಮಿಕ ಘಟಕದ ಅಧ್ಯಕ್ಷ ಪರಮಲೆ ಗಣೇಶ್ ಮಾತನಾಡಿದರು.

ವೇದಿಕೆಯಲ್ಲಿ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ವಿ. ರೆನ್ನಿ, ಜಿಲ್ಲಾ ಹಿಂದುಳಿದ ಘಟಕದ ಉಪಾಧ್ಯಕ್ಷ ಗೋಪಾಲ್, ಸ್ಥಳೀಯ ಮುಖಂಡ ಚಂದ್ರ ಹಾಗೂ ಇತರ ಮುಖಂಡರು ಹಾಜರಿದ್ದರು.

ಇದೆ ಸಂದರ್ಭ ಸ್ಥಳೀಯ ಅನೇಕ ಮುಖಂಡರು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.