ಕುಶಾಲನಗರ, ನ. 14: ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಎರಡನೇ ಹಂತದ ಹೋರಾಟದ ಅಂಗವಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಆಶ್ರಯದಲ್ಲಿ ಧರಣಿ ನಡೆಯಿತು.
ಪಟ್ಟಣದ ಕಾರು ನಿಲ್ದಾಣ ಆವರಣದ ಗುಂಡೂರಾವ್ ವೇದಿಕೆಯಲ್ಲಿ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ನೇತೃತ್ವದಲ್ಲಿ ಪಂಚಾಯಿತಿ ಜನಪ್ರತಿನಿಧಿಗಳು ಧರಣಿ ನಡೆಸಿದರು. ಕುಶಾಲನಗರವನ್ನು ಕಾವೇರಿ ತಾಲೂಕಾಗಿ ರಚಿಸಬೇಕೆಂದು ಘೋಷಣೆಗಳನ್ನು ಕೂಗಿದರು. ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಪಂಚಾಯಿತಿ ಸದಸ್ಯ ಹೆಚ್.ಜೆ. ಕರಿಯಪ್ಪ, ಎಲ್ಲಾ ಅರ್ಹತೆ ಹೊಂದಿರುವ ಕುಶಾಲನಗರವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸುವಲ್ಲಿ ಸರಕಾರ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಆರಂಭಗೊಂಡ ಹೋರಾಟಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವದಾಗಿ ತಿಳಿಸಿದರು.
ಕಾವೇರಿ ತಾಲೂಕು ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಈಗಾಗಲೇ ಬೃಹತ್ ಜನಾಂದೋಲನದ ಮೂಲಕ ಸರಕಾರಕ್ಕೆ ಕಾವೇರಿ ತಾಲೂಕು ಆಗ್ರಹದ ಕೂಗನ್ನು ಮುಟ್ಟಿಸುವಲ್ಲಿ ಮೊದಲ ಹಂತದ ಹೋರಾಟ ಸಫಲವಾಗಿದೆ. ಆದರೂ ಕೂಡ ಸಕಾರಾತ್ಮಕವಾದ ಭರವಸೆ ದೊರಕದಿರುವ ಹಿನ್ನೆಲೆಯಲ್ಲಿ ಹೋರಾಟವನ್ನು ಮುಂದುವರೆಸ ಲಾಗಿದೆ. ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ, ಬೆಂಗಳೂರು ಚಲೋ ಆಂದೋಲನದ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಇದಕ್ಕೂ ಮುಂಚಿತವಾಗಿ ಸರಕಾರ ಎಚ್ಚೆತ್ತುಕೊಳ್ಳುವದು ಒಳಿತು ಎಂದರು.
ಪ.ಪಂ. ಚುನಾಯಿತ ಜನ ಪ್ರತಿನಿಧಿಗಳು, ಕಾವೇರಿ ತಾಲೂಕು ಹೋರಾಟ ಸಮಿತಿ ಪ್ರಮುಖರು ಇದ್ದರು.