ವೀರಾಜಪೇಟೆ, ನ. 14: ವೀರಾಜಪೇಟೆಯಲ್ಲಿ ಭಾನುವಾರ ರಾತ್ರಿ ಇಲ್ಲಿನ ದೊಡ್ಡಟ್ಟಿ ಚೌಕಿಯಿಂದ ಚರ್ಚ್ ರಸ್ತೆಗೆ ಹೋಗುವ ಹಾದಿಯ ಶೌಚಾಲಯ ಬಳಿಯ ಹಳೆ ಚರಂಡಿಯಲ್ಲಿ ದೊರೆತ ಮೃತದೇಹ ನಂಜನಗೂಡು ತಾಲೂಕಿನ ತಗಡೂರಿನ ನಿವಾಸಿ ಸಿದ್ಧರಾಜು ಎಂಬುವನದ್ದೆಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈತನನ್ನು ಕೊಲೆ ಮಾಡಿದ ಆರೋಪಿ ಶಾಜು ಎಂಬಾತನನ್ನು ನಗರ ಪೊಲೀಸರು ಬಂಧಿಸಿ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಮೇರೆ ಆತನ್ನು 15ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.ಮೃತ ಸಿದ್ಧರಾಜು ಮೂರು ವರ್ಷಗಳ ಹಿಂದೆ ವೀರಾಜ ಪೇಟೆಗೆ ಬಂದಿದ್ದು ಕೂಲಿ ಕಾರ್ಮಿಕ ನಾಗಿದ್ದನು. ತಾ. 12ರಂದು ಭಾನುವಾರ ಇಲ್ಲಿನ ದೊಡ್ಡಟ್ಟಿ ಚೌಕಿಯ ಬಳಿ ಈತನಿಗೆ ಶಾಜುವಿನ ಪರಿಚಯ ವಾಗಿ ಇಬ್ಬರು ಮದ್ಯ ಸೇವಿಸಿದ್ದಾರೆ. ನಂತರ ಚೌಕಿಯಿಂದ ಚರ್ಚ್ ರಸ್ತೆಗೆ ತೆರಳುತ್ತಿರುವಾಗ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿದೆ. ಇದೇ ಸಮಯದಲ್ಲಿ ಸಿದ್ದರಾಜು ಇದೇ ರಸ್ತೆಯಲ್ಲಿದ್ದ ಸಾರ್ವಜನಿಕ ಶೌಚಾಲಯಕ್ಕೆ ಮೂತ್ರ ವಿಸರ್ಜನೆಗೆ ಹೋಗುವಾಗ ಪಕ್ಕದ ಹಳೆ ಚರಂಡಿಯಲ್ಲಿ ಕತ್ತಲೆಯಲ್ಲಿ ಕಾಲು ಜಾರಿ ಬಿದ್ದಿದ್ದಾನೆ. ಇದೇ ಸಮಯವನ್ನು ಸಾಧಿಸಿದ ಶಾಜು ಪಕ್ಕದಲ್ಲಿಯೇ ಇದ್ದ ಭಾರೀ ಗಾತ್ರದ ಹಾಲೋ ಬ್ರಿಕ್ಸ್‍ನ್ನು ಆತನ ತಲೆಯ ಮೇಲೆ ಹಾಕಿದ್ದರಿಂದ ಸಿದ್ಧರಾಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ರಾತ್ರಿ 9.30ರ ಸಮಯದಲ್ಲಿ ದಾರಿ ಹೋಕರು ಮೃತ ದೇಹವನ್ನು ಕಂಡು ನಗರ ಪೊಲೀಸರಿಗೆ ಸುಳಿವು ನೀಡಿದ್ದಾರೆ. ತಕ್ಷಣ ನಗರ

(ಮೊದಲ ಪುಟದಿಂದ) ಪೊಲೀಸರು ಘಟನೆಯ ಸ್ಥಳಕ್ಕೆ ಬಂದು ಮೃತ ದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಆರೋಪಿಯ ಶೋಧನೆಯಲ್ಲಿ ತೊಡಗಿದ್ದರು. ರಾತ್ರಿ 9.45ರ ವೇಳೆ ಸಂಗಡಿಗನ ಕೊಲೆಯ ನಂತರ ಶಾಜು ಪುನ; ಬ್ರಾಂದಿ ಅಂಗಡಿಗೆ ಹೋಗಿ ಮದ್ಯ ಸೇವಿಸಿ ಹೊರಗಡೆ ಬಂದು ನಿಂತಿದ್ದಾನೆ. ಅದೇ ವೇಳೆ ಪೊಲೀಸರು ಬ್ರಾಂದಿ ಅಂಗಡಿಯ ಮುಂದೆ ನಿಂತಿದ್ದವನನ್ನು ನೋಡಿದಾಗ ಆತನ ಶರಟಿನಲ್ಲಿ ರಕ್ತದ ಕಲೆಗಳು ಗೋಚರಿಸಿವೆ. ಶಾಜು ಹಾಗೂ ಆತನ ಜೊತೆಯಲ್ಲಿದ್ದವನನ್ನು ಪೊಲೀಸರು ನಿನ್ನೆ ದಿನ ವಿಚಾರಣೆಗೊಳಪಡಿಸಿದಾಗ ಸಿದ್ದರಾಜುವನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ನಂತರ ಪೊಲೀಸರು ಶಾಜು ವಿರುದ್ದ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಯಿತು ಎಂದು ಸರ್ಕಲ್ ಇನ್ಸ್‍ಪೆಕ್ಟರ್ ಎನ್ ಕುಮಾರ್ ಆರಾಧ್ಯ “ಶಕ್ತಿ” ಗೆ ತಿಳಿಸಿದ್ದಾರೆ.

‘ಶಕ್ತಿ’ ದಿನ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಗೊಂಡ ಭಾವಚಿತ್ರವನ್ನು ನೋಡಿದ ಸಿದ್ದರಾಜುವಿನ ಎರಡನೇ ಪುತ್ರಿ ಶಿಲ್ಪಾ ಇಂದು ಅಪರಾಹ್ನ 3 ಗಂಟೆಗೆ ನಗರ ಪೊಲೀಸ್ ಠಾಣೆಗೆ ಪತ್ರಿಕೆಯ ಪ್ರತಿಯೊಂದಿಗೆ ತೆರಳಿ ವಿಚಾರಿಸಿದಾಗ ಸಿದ್ದರಾಜುವಿನ ಮೃತದೇಹ ಈಕೆಯ ತಂದೆಯದೆಂದು ಖಚಿತವಾಯಿತು. ನಂತರ ಶಿಲ್ಪಾ ತಂದೆಯ ಪೂರ್ಣ ಚಹರೆಯನ್ನು ನೀಡಿದಳು.

ಸಿದ್ದರಾಜುವಿಗೆ ಪತ್ನಿ ಹಾಗೂ ಐದು ಮಂದಿ ಹೆಣ್ಣು ಮಕ್ಕಳಿದ್ದು ಶಿಲ್ಪಾ ಎಂಬಾಕೆ ಇಲ್ಲಿನ ತಾಲೂಕು ಕಚೇರಿಯ ನೆಲ ಅಂತಸ್ತುವಿನಲ್ಲಿರುವ ಝೆರಾಕ್ಸ್ ಅಂಗಡಿಯಲ್ಲಿ ಉದ್ಯೋಗದಲ್ಲಿದ್ದಾಳೆ. ಸಿದ್ದರಾಜು, ಕುಟುಂಬದ ಸಂಪರ್ಕ ಕಳೆದುಕೊಂಡು ಮೂರು ವರ್ಷವಾಗಿದೆ. ತಾಯಿ ಕೇರಳದಲ್ಲಿ ದಾದಿಯ ಉದ್ಯೋಗದಲ್ಲಿದ್ದು ಉಳಿದ ಮಕ್ಕಳು ಪೆರುಂಬಾಡಿಯಲ್ಲಿ ವಾಸಿಸುತ್ತಿದ್ದಾರೆ. ಸಿದ್ದರಾಜು ಮರ ಕೆಲಸದ ಕಾರ್ಮಿಕನಾಗಿದ್ದು ಆಗಿಂದಾಗ್ಗೆ ತಗಡೂರಿಗೂ ಹೋಗಿ ವೀರಾಜಪೇಟೆಗೆ ಬರುತ್ತಿದ್ದ, ಆತನಿಗೆ ಮದ್ಯ ಸೇವಿಸುವ ಚಟವಿತ್ತೆಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಮೃತದೇಹದ ಗುರುತಿಗಾಗಿ ಇಂದು ಅಪರಾಹ್ನ 3ಗಂಟೆಯ ತನಕ ಕಾದಿದ್ದ ಪೊಲೀಸರು ನಿಗಧಿತ ಅವಧಿಯಲ್ಲಿ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದ ನಂತರ ಗುರುತು ಪತ್ತೆಯಾಗಿದೆ.

ಕೊಲೆ ಆರೋಪಿ ಕೇರಳದ ತಿರುವನಂತಪುರ ಚಿಂಬಲಿಕೆರ ಗ್ರಾಮದ ನಿವಾಸಿಯಾಗಿದ್ದು 5ವರ್ಷಗಳ ಹಿಂದೆ ಪತ್ನಿ ಹಾಗೂ ಕುಟುಂಬವನ್ನು ಬಿಟ್ಟು ವಿರಾಜಪೇಟೆಗೆ ಕಾರ್ಮಿಕನಾಗಿ ಬಂದಿದ್ದನು. ಈಗ 6 ತಿಂಗಳುಗಳಿಂದ ಇಲ್ಲಿನ ದೊಟ್ಟಟ್ಟಿ ಚೌಕಿಯಲ್ಲಿರುವ ಬ್ರಾಂದಿ ಅಂಗಡಿಯಲ್ಲಿ ಕೆಲಸಕ್ಕಿದ್ದನು.