ಗೊಣಿಕೊಪ್ಪ ವರದಿ, ನ. 14: ಪೊನ್ನಂಪೇಟೆ ತಾಲೂಕು ರಚನೆಗೆ ಒತ್ತಾಯಿಸಿ ತಾ. 17 ರಂದು ಜಿಲ್ಲಾ ರೈತ ಸಂಘದಿಂದ ಪೊನ್ನಂಪೇಟೆಯ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ಗಮನ ಸೆಳೆಯುವ ನಿರ್ಧಾರವನ್ನು ಸಂಘದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಪೊನ್ನಂಪೇಟೆ ಕೇಂದ್ರವನ್ನು ಹೊಸ ತಾಲೂಕಾಗಿ ರಚನೆ ಮಾಡುವದರಿಂದ ಸುತ್ತಮುತ್ತಲಿನ ಕುಗ್ರಾಮಗಳಿಗೆ ಅನುಕೂಲವಾಗಲಿದೆ. ಹಾಗೂ ಇದನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಎಲ್ಲಾ ಮೂಲ ಸೌಕರ್ಯಗಳು ಈ ಕೇಂದ್ರದಲ್ಲಿದೆ.

ಸರ್ಕಾರಕ್ಕೆ ಹೆಚ್ಚಿನ ಹಣಕಾಸನ್ನು ಈ ಕೇಂದ್ರಕ್ಕೆ ಖರ್ಚು ಮಾಡುವ ಅಗತ್ಯವಿರುವದಿಲ್ಲ. ಈ ಬಗ್ಗೆ ಮಾನವ ಸರಪಳಿ ನಿರ್ಮಿಸಿ ಸರಕಾರದ ಗಮನ ಸೆಳೆಯುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.

ಮೆರವಣಿಗೆ ಸಂದರ್ಭ ತಾಲೂಕು ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕಳುಹಿಸಿಕೊಡುವಂತೆ ನಿರ್ಧರಿಸಲಾಯಿತು. ಈ ಹಿಂದೆ ಜಿಲ್ಲಾ ರೈತ ಸಂಘ ಅಕ್ಟೋಬರ್‍ನಲ್ಲಿ ತಾಲೂಕು ಕೇಂದ್ರದ ಬಗ್ಗೆ ರೈತ ಸಂಘದ ಮುಖಂಡರು, ಶಾಸಕ ಪುಟ್ಟಣಯ್ಯ ಅವರನ್ನು ಬೆಂಗಳೂರಿನ ಶಾಸಕರ ಭವನದಲ್ಲಿ ಭೇಟಿ ಮಾಡಿ ಮುಂಬರುವ ಅದೀವೇಶನದಲ್ಲಿ ಈ ಬಗ್ಗೆ ಜಿಲ್ಲೆಯ ಪರವಾಗಿ ಪ್ರಸ್ತಾಪಿಸಬೇಕೆಂದು ಮನವಿ ಮಾಡಿರುವದನ್ನು ಸಭೆಯಲ್ಲಿ ಗಮನಸೆಳೆಯಲಾಯಿತು.

ಸಂಘದ ಕಾರ್ಯದರ್ಶಿ ಕಳ್ಳಿಚಂಡ ಧನು, ಮುಖಂಡ ಬಾಚಮಾಡ ಭವಿ ಕುಮಾರ್, ಸಂಚಾಲಕ ಚಿಮ್ಮಂಗಡ ಗಣೇಶ್, ಮುಖಂಡರುಗಳಾದ ಚೋನಿರ ಸತ್ಯ, ಅಜ್ಜಮಾಡ ಚಂಗಪ್ಪ, ಬೋಡಂಗಡ ಅಶೋಕ್, ಮಚ್ಚಮಾಡ ರಂಜಿ, ಐಯ್ಯಮಾಡ ಹ್ಯಾರಿಸ್, ಪುಚ್ಚಿಮಾಡ ಸಂತೋಷ್, ತೀತರಮಾಡ ಸುನೀಲ್, ಪುಚ್ಚಿಮಾಡ ಸುನೀಲ್, ಅಜ್ಜಮಾಡ ಪ್ರದೀಪ್, ಅಜ್ಜಮಾಡ ಮೋಹನ್, ಪ್ರಮೋದ್ ಹಾಗೂ ಕಾಳಿಮಾಡ ಉದಯ್ ಪಾಲ್ಗೊಂಡಿದ್ದರು.