ಮಡಿಕೇರಿ, ನ. 14: ಡಿವೈಎಸ್ಪಿ ಎಂ.ಕೆ ಗಣಪತಿ ಸಂಶಯಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಬಿ.ಐ ತಂಡ ಮಡಿಕೇರಿಗೆ ಆಗಮಿಸಿದೆ. ಎಸ್. ಪಿ. ಶರವಣ್ ಪಿ.ಎ, ಅಡಿಷನಲ್ ಎಸ್.ಪಿ. ಕಲಂಕಣಿ, ಇನ್ಸ್‍ಪೆಕ್ಟರ್‍ಗಳು ಸೇರಿದಂತೆ ಮೂರು ವಾಹನಗಳಲ್ಲಿ ಸಿ.ಬಿ.ಐ ತಂಡ ಇಂದು ನೇರವಾಗಿ ವಿನಾಯಕ ಲಾಡ್ಜ್‍ಗೆ ದೌಡಾಯಿಸಿದೆ. ಗಣಪತಿ ಸಾವಿಗೀಡಾದ ರೂಂ ನಂ. 315 ರಲ್ಲಿ ತನಿಖೆ ಆರಂಭಿಸಿದೆ. ಕೋಣೆಯೊಳಗೆ ಸಂಪೂರ್ಣ ತಪಾಸಣೆ ನಡೆÀಸಿದೆ. ಘಟನೆಯ ಸ್ಥಳದಲ್ಲಿ ಹೊಸದಾಗಿ ತನಿಖೆ ಪ್ರಾರಂಭಿಸಲಾಗಿದೆ. ಈ ಸಂದರ್ಭ ಗಣಪತಿ ಸಾವಿನ ಬಳಿಕ ನಡೆದಿದ್ದ ತನಿಖೆಯಲ್ಲಿ ಸಾಕ್ಷಿದಾರರಾಗಿದ್ದ ಜಿ.ಎ.ಉದಯ, ಕ್ಲೈವ್ ಪೊನ್ನಪ್ಪ, ಅರಮಣಮಾಡ ಉದಯ್, ಜಗನ್ ಬೆಳ್ಳಿಯಪ್ಪ ಇವುಗಳನ್ನು ಕರೆಸಿದ್ದ ಸಿ.ಬಿ.ಐ ಇವರುಗಳ ಸಮ್ಮುಖದಲ್ಲಿಯೇ ಕೋಣೆಯಲ್ಲಿ ತಪಾಸಣೆ ನಡೆಸಿತು. ಅಲ್ಲದೆ, ಆಗ ತನಿಖೆ ನಡೆಸಿದ್ದ ಮಡಿಕೇರಿಯ ಸರ್ಕಲ್ ಇನ್ಸ್‍ಪೆಕ್ಟರ್ ಐ.ಪಿ.ಮೇದಪ್ಪ ಹಾಗೂ ಆಗ ಎಸ್. ಐ. ಆಗಿದ್ದ ಭರತ್ ಇವರುಗಳನ್ನು ಕರೆಸಿದ್ದು ಇವರುಗಳೂ ತಪಾಸಣೆ ಸಂದರ್ಭ ಸ್ಥಳದಲ್ಲಿ ಹಾಜರಿದ್ದರು. ಪ್ರಾರಂಭಿಕ ತಪಾಸಣೆ ಬಳಿಕ ಕೋಣೆಯನ್ನು ಸಿ.ಬಿ.ಐ ತಂಡ ಸೀಲ್ ಮಾಡಿತು.
ಸಿ.ಬಿ.ಐ ತಂಡ ಅನೇಕ ದಾಖಲಾತಿಗಳನ್ನು ಪಡೆದುಕೊಂಡಿರುವದಾಗಿ ತಿಳಿದು ಬಂದಿದೆ. ಸ್ಥಳದಲಿದ್ದ ಗಣಪತಿ ಅವರ ಸಹೋದರ ಎಂ.ಕೆ.ಮಾಚಯ್ಯ ಅವರು “ಶಕ್ತಿ” ಯೊಂದಿಗೆ ಮಾತನಾಡಿ ಸಿ.ಬಿ.ಐ ತನಿಖೆ ಸಮರ್ಪಕವಾಗಿ ಪ್ರಾರಂಭಗೊಂಡಿದ್ದು, ಇದರಲ್ಲಿ ತಮ್ಮ ಕುಟುಂಬಕ್ಕೆ ನ್ಯಾಯ ಲಭಿಸುವ ವಿಶ್ವಾಸವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.