ಕುಶಾಲನಗರ, ನ. 14: ಸರಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಇಲಾಖೆಗಳು ಪ್ರಾಮಾಣಿಕ ವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್ ಹೇಳಿದರು.

ಅರಣ್ಯ ಇಲಾಖೆ ವತಿಯಿಂದ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗಿರಿಜನರಿಗೆ ಅಡುಗೆ ಅನಿಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅಡುಗೆ ಅನಿಲ ವಿತರಿಸುವ ಕಾರ್ಯ ಕೈಗೊಳ್ಳಲಾಗಿದೆ. ಈ ಯೋಜನೆ ಯಿಂದ ಗಿರಿಜನರು ಕಾಡಿನಿಂದ ಉರುವಲು ಸಂಗ್ರಹಿಸಿ ಅಡುಗೆ ತಯಾರಿಸುವ ಬವಣೆ ತಪ್ಪಲಿದೆ. ತಮ್ಮ ವ್ಯಾಪ್ತಿಯ ವಿವಿಧ ಹಾಡಿಗಳ ಅರ್ಹ ಫಲಾನುಭವಿಗಳನ್ನು ಗುರುತಿಸಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು ಫಲಾನುಭವಿಗಳು ಸರಕಾರದ ಸೌಲಭ್ಯಗಳನ್ನು ಸದುಪ ಯೋಗಪಡಿಸಿಕೊಂಡು ಬದುಕನ್ನು ಸರಳವಾಗಿಸಿಕೊಳ್ಳು ವಂತೆ ಅವರು ಕರೆ ನೀಡಿದರು.

ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಎಸ್. ಅರುಣ್ ಮಾತನಾಡಿ, ಕುಶಾಲನಗರ ವಲಯ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿ ಗಳನ್ನು ಗುರುತಿಸಿ ಅಡುಗೆ ಅನಿಲ, ಸೋಲಾರ್ ಲ್ಯಾಂಪ್, ಜೇನು ಪೆಟ್ಟಿಗೆ ವಿತರಿಸುವ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಂಡಿದೆ. 600 ಅಡುಗೆ ಅನಿಲ ಸೌಲಭ್ಯವನ್ನು ವಿತರಿಸುವ ಗುರಿ ಹೊಂದಲಾಗಿದ್ದ ಪ್ರಾಥಮಿಕ ಹಂತದಲ್ಲಿ ಲ್ಯಾಂಪ್ಸ್ ವ್ಯಾಪ್ತಿಯ ಗಿರಿಜನರಿಗೆ 50 ಸಿಲಿಂಡರ್‍ಗಳು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಸೋಲಾರ್ ಲ್ಯಾಂಪ್, ಜೇನು ಪೆಟ್ಟಿಗೆ ವಿತರಿಸಲಾಗುವದು ಎಂದರು. ಲ್ಯಾಂಪ್ಸ್ ಅಧ್ಯಕ್ಷ ಎಸ್.ಎನ್. ರಾಜಾರಾವ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಯಾಸ್ ಸಿಲಿಂಡರ್‍ಗಳನ್ನು ವಿತರಿಸಲಾಯಿತು.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಸದಸ್ಯರಾದ ಡಾಟಿ, ನಾರಾಯಣ, ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ಜನಾರ್ಧನ್, ಲ್ಯಾಂಪ್ಸ್ ನಿರ್ದೇಶಕರಾದ ಆರ್.ಕೆ. ಚಂದ್ರ, ಉದಯ ಕುಮಾರ್, ಸುಲೋಚನಾ, ಗಂಗಾಧರ್, ಬಿ.ಕೆ. ಮೋಹನ್, ಕಾಳಿಂಗ, ತಾಂತ್ರಿಕ ಸಲಹೆಗಾರ ಸುರೇಶ್, ಉಪ ವಲಯಾಧಿಕಾರಿ ರಂಜನ್ ಮತ್ತಿತರರು ಇದ್ದರು.