ಮಡಿಕೇರಿ, ನ. 14: ದೇಶದ ಮಾಜಿ ಪ್ರಧಾನಿ ಜವಹರಲಾಲ್ ನೆಹರು ಅವರ ಜನ್ಮದಿನದ ಪ್ರಯುಕ್ತ ಎಲ್ಲೆಡೆ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಗಳು, ಅಂಗನವಾಡಿ ಕೇಂದ್ರಗಳು, ಬಾಲಭವನ ಮತ್ತಿತರ ಕಡೆಗಳಲ್ಲಿ ಮಕ್ಕಳ ದಿನಾಚರಣೆ ಆಕರ್ಷಣೀಯವಾಗಿ ನಡೆಯಿತು.
ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ, ಗಾಯನ, ನೃತ್ಯ, ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಕೃಷ್ಣ, ಕಾವೇರಿ, ಅಬ್ದುಲ್ ಕಲಾಂ, ಆಂಜನೇಯ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳ, ದೈವಗಳ ವೇಷ ಭೂಷಣದೊಂದಿಗೆ ಪುಟಾಣಿಗಳು ಗಮನ ಸೆಳೆದರು. ಅಂಗನವಾಡಿ ಕೇಂದ್ರಗಳಲ್ಲಂತೂ ವೇಷ ಧರಿಸಿ ಅಂಜುತ್ತಾ, ಅತ್ತಿತ್ತ ನೋಡುತ್ತಾ, ತೊದಲುತ್ತಾ ಸಂಭಾಷಣೆಗಳನ್ನು ಹೇಳಲು ತಡವರಿಸುತ್ತಿದ್ದ ಚಿಣ್ಣರ ಸೊಬಗು ಮಕ್ಕಳ ದಿನಾಚರಣೆಗೆ ವಿಶೇಷ ಮೆರುಗು ನೀಡಿತು. ತಮ್ಮದೆ ಶೈಲಿಯಲ್ಲಿ ಹಾಡುಗಳನ್ನು ಹಾಡಿ, ಹಾಡಿಗೆ ಹೆಜ್ಜೆ ಹಾಕಿ ಮಕ್ಕಳು ಸಂಭ್ರಮಿಸಿದರು.
ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಇನ್ನರ್ ವೀಲ್, ಲಯನ್ಸ್ ಮತ್ತು ಲಯನೆಸ್ ಕ್ಲಬ್ ಮತ್ತು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬಾಲಭವನದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ, ಉದ್ಘಾಟನೆ ಹಾಗೂ ಮುಖ್ಯ ಅತಿಥಿಗಳ ಸ್ಥಾನವನ್ನು ಮಕ್ಕಳೆ ವಹಿಸಿಕೊಂಡು ಮಕ್ಕಳ ದಿನಾಚರಣೆಗೆ ಹೆಚ್ಚಿನ ಆಕರ್ಷಣೆ ನೀಡಿದರು.
ಕಾರ್ಯಕ್ರಮವನ್ನು ಮಡಿಕೇರಿ ಹಿಂದೂಸ್ತಾನಿ ನಗರಸಭಾ ಶಾಲೆಯ ವಿದ್ಯಾರ್ಥಿ ಆಕಾಶ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಡಿಕೇರಿ ನಗರಸಭಾ ಶಾಲೆಯ ವಿದ್ಯಾರ್ಥಿನಿ ದಿವ್ಯಶ್ರೀ ನೆಹರು ಅವರ ಆದರ್ಶ ಹಾಗೂ ದೇಶಸೇವೆಯನ್ನು ಸ್ಮರಿಸಿಕೊಂಡರು.
ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ನಿರ್ದೇಶಕಿ ವಸಂತಿ ಪೊನ್ನಪ್ಪ ಮಾತನಾಡಿ, ಇಂದಿನ ಮಕ್ಕಳು ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮೋಹನ್ ಮೊಣ್ಣಪ್ಪ ಮಾತನಾಡಿ, ತಮ್ಮಲ್ಲಿರುವ ಪ್ರತಿಭೆಯನ್ನು ಮಕ್ಕಳು ಹೊರಹಾಕಲಿ ಎಂಬ ಉದ್ದೇಶದಿಂದ ಪ್ರತಿವರ್ಷವೂ ಸಂಸ್ಥೆ ವಿವಿಧ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ ಎಂದರು.
ಮಡಿಕೇರಿ ಹಿಂದೂಸ್ತಾನಿ ನಗರಸಭಾ ಶಾಲೆಯ ಮುಖ್ಯೋಪಾದ್ಯಾಯಿನಿ ಸರಸ್ವತಿ ನಾಯಕ್, ಮಕ್ಕಳಿಗೆ ಇಂತಹ ಕಾರ್ಯಕ್ರಮದ ಕುರಿತು ಅರಿವು ಮೂಡಿಸುವದರಿಂದ ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಲಯನೆಸ್ ಕ್ಲಬ್ ಅಧ್ಯಕ್ಷೆ ಕನ್ನಂಡ ಕವಿತಾ ಮಕ್ಕಳನ್ನು ಕುರಿತು ಮಾತನಾಡಿದರು. ನಗರಸಭಾ ಶಾಲೆಯ ಮಕ್ಕಳು ಹಾಗೂ ಕಾವೇರಿ ಮಕ್ಕಳ ಗೃಹದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಗರಸಭಾ ಶಾಲೆಯ ಮಕ್ಕಳು ಹಾಗೂ ಕಾವೇರಿ ಮಕ್ಕಳ ಗೃಹದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಇದೇ ಸಂದರ್ಭ ಶಾಲಾ ಮಕ್ಕಳಿಗಾಗಿ ಏರ್ಪಡಿಸಲಾz ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಸುಂಟಿಕೊಪ್ಪ: ಸುಂಟಿಕೊಪ್ಪ ನಾಡು ಪ್ರೌಢಶಾಲೆ ಕೊಡಗರಹಳ್ಳಿಯಲ್ಲಿ ಮಕ್ಕಳ ದಿನಾಚರಣೆ ದಿನ ಕಂಪ್ಯೂಟರ್ ಆಧಾರಿತ ಶಿಕ್ಷಣದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಕೆ. ರಿಕ್ಷಿತ್ ಪಾಲ್ಗೊಂಡಿದ್ದರು.
ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ಕೆ.ಎಸ್ ಮಂಜುನಾಥ ಅಧ್ಯಕ್ಷತೆ ವಹಿಸಿದರು.
ಶಾಲೆಯ ಆಡಳಿತ ಮಂಡಳಿ ಹಿರಿಯ ಸದಸ್ಯ ಬಿ.ಡಿ. ಪುರುಷೋತ್ತಮ ರೈ ಕಂಪ್ಯೂಟರ್ ‘ಮೌಸ್’ ಒತ್ತುವ ಮೂಲಕ ಚಾಲನೆ ನೀಡಿದರು.
ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಎಜುಕೇಷನ್ ಸೊಸೈಟಿ ಶಾಲೆ ಕೊಡಗರಹಳ್ಳಿಯ ಮುಖ್ಯೋಪಾದ್ಯಾಯಿನಿ ಕೆ.ಎ. ಇಂದಿರಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುಂಟಿಕೊಪ್ಪ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರಾದ ಮೋಹನ್, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷೆ ಮೀನಾ ಸೋಮಯ್ಯ, ಶಾಲೆ ಆಡಳಿತ ಮಂಡಳಿ ಸದಸ್ಯ ಪೊನ್ನಪ್ಪ, ವಿಎಸ್ಎಸ್ಎನ್ ಉಪಾಧ್ಯಕ್ಷ ಮಂಜುನಾಥ್ ವೇದಿಕೆಯಲ್ಲಿದ್ದರು.
ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ ಕೆ.ಎಸ್. ಮಂಜುನಾಥ್ ಸ್ವಾಗತಿಸಿ, ಶಿಕ್ಷಕ ಗುರ್ಕಿ ನಿರೂಪಿಸಿ ವಂದಿಸಿದರು.
ಕೂಡಿಗೆ: ಕೂಡಿಗೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮವನ್ನು ಶಿರಂಗಾಲ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ಹಂಡ್ರಂಗಿ ನಾಗರಾಜ್ ಉದ್ಘಾಟಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ವಸತಿ ಶಾಲೆಯ ಪ್ರಾಂಶುಪಾಲ ಪ್ರಕಾಶ್ ಮಾತನಾಡಿದರು. ಈ ಸಂದರ್ಭ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ, ಶಾಲೆಯ ಶಿಕ್ಷಕರಾದ ದಿನೇಶಾಚಾರಿ, ನಾಗೇಂದ್ರ, ಚಿದಂಬರ, ದೊಡ್ಡಯ್ಯ, ಸುನೀಲ್, ಕೀರ್ತನ ಮೊದಲಾದವರು ಇದ್ದರು.
ಸಮಾರಂಭದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನಗಳನ್ನು ವಿತರಣೆ ಮಾಡಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಸುಂಟಿಕೊಪ್ಪ: ಮಡಿಕೇರಿ ಕ್ಲಬ್ ಮಹೀಂದ್ರ ಮತ್ತು ಇಲ್ಲಿನ ಸ್ವಸ್ಥ ವಿಶೇಷ ಶಾಲೆಯ ಸಹಯೋಗದಲ್ಲಿ ಮಂಗಳವಾರ ಸ್ವಸ್ಥ ಶಾಲಾ ಆವರಣದಲ್ಲಿ ಮಕ್ಕಳ ದಿನಾಚರಣೆಯನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ಉಸ್ಘಾಟಿಸಿದರು.
ಕ್ಲಬ್ ಮಹೀಂದ್ರ ರೆಸಾರ್ಟ್ನ ವ್ಯವಸ್ಥಾಪಕ ಸ್ವಪನ್ ದಾಸ್, ಸ್ವಸ್ಥ ವಿಶೇಷ ಶಾಲೆಯ ನಿರ್ದೇಶಕಿ ಆರತಿ ಸೋಮಯ್ಯ ಮಾತನಾಡಿದರು.
ಇದೇ ಸಂದರ್ಭ ವಿಶೇಷ ಮಕ್ಕಳಾದ ಮಹಮ್ಮದ್ ಆನಸ್, ವಿನೋದ್, ರಾಜು ಅವರ ಹುಟ್ಟುಹಬ್ಬವನ್ನು ಕೇಕು ಕತ್ತರಿಸುವದರೊಂದಿಗೆ ಆಚರಿಸಲಾಯಿತು.
ನಂತರ ಕ್ಲಬ್ ಮಹೀಂದ್ರ ವತಿಯಿಂದ ಜಾದು ಪ್ರದರ್ಶನ ಮಿಮಿಕ್ರಿ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳ ಜೊತೆಯಲ್ಲಿ ವಿಶೇಷ ಮಕ್ಕಳ ನೃತ್ಯ ಪ್ರದರ್ಶನ ನಡೆಯಿತು.
ಸ್ವಸ್ಥ ಸಂಸ್ಥೆಯ ಸಂಯೋಜಕ ಮುರುಗೇಶ್, ವಿಜು, ಪವಿತ್ರ, ಲತಾ, ಶಿಕ್ಷಕಿಯರು, ಕ್ಲಬ್ ಮಹೀಂದ್ರದ ಸಿಬ್ಬಂದಿಗಳು ಇದ್ದರು. ಕ್ಲಬ್ ಮಹೀಂದ್ರ ಸಿಬ್ಬಂದಿ ಮಾನಸ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
ಸೋಮವಾರಪೇಟೆ: ಸಮೀಪದ ದೊಡ್ಡಮಳ್ತೆ ಸ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು.
ತಾಜಾ ಸೊಪ್ಪು, ತರಕಾರಿ, ಔಷಧೀಯ ಸೊಪ್ಪುಗಳು, ಮಜ್ಜಿಗೆ, ಪಾನಕ, ಪುಸ್ತಕಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿದರು. ಪೋಷಕರು, ಸಾರ್ವಜನಿಕರು ಶಾಲಾ ಆವರಣಕ್ಕೆ ಆಗಮಿಸಿ ತರಕಾರಿ ಸೊಪ್ಪುಗಳನ್ನು ಖರೀದಿಸಿದರು.
ತಮ್ಮ ಪರಿಸರದಲ್ಲೇ ತರಕಾರಿ ಬೆಂಕಿಯಲ್ಲಿ ಸುಟ್ಟು ಹೋಗುತ್ತಿದ್ದ ತ್ಯಾಜ್ಯ ಕಾಗದ ಪುಷ್ಪಹಾರವಾಯಿತು... ತೊಟ್ಟಿಯಲ್ಲಿದ್ದ ಕಸ ಪ್ರೇಕ್ಷಕರ ಮೈಮೇಲೆರೆಚಿದಾಗ ಹೂವಿನ ಎಸಳುಗಳಾಯಿತು..!
ಹೌದು.... ಇಂಥ ಕೌತುಕ ಸಂಭವಿಸಿದ್ದು ಹಾಕತ್ತೂರು ಪ್ರೌಢಶಾಲೆಯಲ್ಲಿ ಜರುಗಿದ ಮಕ್ಕಳ ದಿನಾಚರಣೆಯಲ್ಲಿ. ಮಡಿಕೇರಿ ಬಳಿಯ ಹಾಕತ್ತೂರು ಪ್ರೌಢಶಾಲೆ ಯಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಸಂದರ್ಭಕ್ಕಾಗಿನ ಸ್ವಚ್ಛತಾ ಜಾಗೃತಿ ಜಾದೂ ಕಾರ್ಯಕ್ರಮದಲ್ಲಿ ಹೆಸರಾಂತ ಜಾದೂಗಾರ ವಿಕ್ರಮ್ ಜಾದೂಗಾರ್ ವಿಭಿನ್ನ ರೀತಿಯ ಜಾದೂ ಪ್ರದರ್ಶನದೊಂದಿಗೆ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಅರಿವು ಉಂಟು ಮಾಡಿದರು.
ರೋಟರಿ ಜಿಲ್ಲಾ ಯೋಜನೆ ಯಾಗಿರುವ ಸ್ವಚ್ಛತಾ ಅಭಿಯಾನಕ್ಕೆ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಜಾದೂ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ದಿನಾಚರಣೆಯಂದು ಹಾಕತ್ತೂರು ಪ್ರೌಢಶಾಲೆಯಲ್ಲಿ ಆಯೋಜಿತವಾಗಿದ್ದ ಸ್ವಚ್ಛತಾ ಜಾಗೃತಿ ಜಾದೂ ಕಾಯ್ರ್ಛಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಉದ್ಘಾಟಿಸಿದರು. ತ್ಯಾಜ್ಯ ಕಾಗದವನ್ನು ಡಬ್ಬದಲ್ಲಿ ಹಾಕಿ ಸುಟ್ಟ ನಂತರ ಡಬ್ಬ ತೆರೆದಾಗ ಪುಷ್ಪಹಾರವೇ ಸುರೇಶ್ ಚಂಗಪ್ಪ ಅವರನ್ನು ಸ್ವಾಗತಿಸಿ ಅಚ್ಚರಿಗೆ ಕಾರಣವಾಯಿತು.
ಈ ಸಂದರ್ಭ ಮಾತನಾಡಿದ ಸುರೇಶ್ ಚಂಗಪ್ಪ, ಯಾವದೇ ಸಾಧನೆಗಳು ಸುಲಭಸಾಧ್ಯವಲ್ಲ. ಪ್ರತೀ ಸಾಧನೆಗೂ ಅಪರಿಮಿತ ಶ್ರಮ ಮತ್ತು ಛಲ ಮುಖ್ಯವಾಗುತ್ತದೆ ಎಂದರು.
ರೋಟರಿ ಜಿಲ್ಲೆಯ ಸಹಾಯಕ ರಾಜ್ಯಪಾಲ ಮಹೇಶ್ ನಲ್ವಾಡೆ ಮಾತನಾಡಿ, ಮನೆಯಿಂದಲೇ ಸ್ವಚ್ಛತೆಯ ಪರಿಕಲ್ಪನೆ ಮಕ್ಕಳಲ್ಲಿ ಮೊದಲಾಗಬೇಕು ಎಂದು ಕರೆ ನೀಡಿದರು.
ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ ಮಾತನಾಡಿ, ಮಕ್ಕಳ ಮನಸೂರೆ ಗೊಳ್ಳಬಲ್ಲ ಮ್ಯಾಜಿಕ್ ಮಾಧ್ಯಮವನ್ನು ಸಮರ್ಪಕವಾಗಿ ಬಳಸಿ ಸ್ವಚ್ಛತೆಯ ಕುರಿತಾಗಿ ಸಂದೇಶ ನೀಡುವ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿರುವ ರೋಟರಿ ಮಿಸ್ಟಿ ಹಿಲ್ಸ್ ಕಾರ್ಯ ಶ್ಲಾಘನೀಯ ಎಂದರು.
ರೋಟರಿ ಜಿಲ್ಲಾ ವಾರ್ತಾ ಸಂಚಿಕೆ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಮಕ್ಕಳು ದೊಡ್ಡ ಕನಸುಗಳನ್ನು ಹೊಂದಬೇಕು. ಭವಿಷ್ಯದಲ್ಲಿ ಉನ್ನತ ಹುದ್ದೆ ಅಲಂಕರಿಸುವ ನಿಟ್ಟಿನಲ್ಲಿ ಸಾಧನೆ ಮಾಡಬೇಕೆಂದು ಕರೆ ನೀಡಿದರು.
ಮೂಡುತ್ತಿದ್ದು, ಇದು ಶೀಘ್ರಗತಿಯಲ್ಲಿ ಉಂಟಾಗಲು ರೋಟರಿಯಂತ ಸಂಸ್ಥೆಗಳು ಕಾರ್ಯೋನ್ಮುಖವಾಗಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ರೋಟರಿ ಜಿಲ್ಲಾ ಯೋಜನೆಯಾದ ಸ್ವಚ್ಛತಾ ಅಭಿಯಾನಕ್ಕೆ ಜಾದೂಗಾರ ವಿಕ್ರಮ್ ಅವರನ್ನೇ ರಾಯಬಾರಿ ಯಾಗಿಸುವ ಮೂಲಕ ಜಿಲ್ಲೆಯ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಮುಂದಿನ ಎರಡು ತಿಂಗಳಲ್ಲಿ ಅನೇಕ ಜಾದೂ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ರೋಟರಿ ಜಿಲ್ಲಾ ಸಮಾವೇಶ ಸಮಿತಿ ಅಧ್ಯಕ್ಷ ದೇವಣೀರ ಕಿರಣ್, ಹಾಕತ್ತೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ, ಮುಖ್ಯಶಿಕ್ಷಕಿ ರಮ್ಯ, ರೋಟರಿ ಮಿಸ್ಟಿ ಹಿಲ್ಸ್ ಪ್ರಮುಖರಾದ ಕೆ.ಕೆ. ವಿಶ್ವನಾಥ್, ರತ್ನಾಕರ್ ರೈ, ಎಂ. ಧನಂಜಯ್, ಅನಿತಾ ಪೂವಯ್ಯ, ಮಹೇಶ್, ಕಾಂಗೀರ ಸತೀಶ್ ಪಾಲ್ಗೊಂಡಿದ್ದರು. ಇದೇ ಸಂದರ್ಭ ವಿದ್ಯಾರ್ಥಿಗಳು ಸ್ವಚ್ಛತೆ ಬಗ್ಗೆ ಜಾಗೃತರಾಗಿರುತ್ತೇವೆ ಎಂಬ ಸಂದೇಶದ ಪ್ರತಿಜ್ಞೆ ಸ್ವೀಕರಿಸಿದರು.
ವಿಕ್ರಮ್ ಜಾದೂಗಾರ್ ಸ್ವಚ್ಛತೆ, ದೇಶಪ್ರೇಮ, ಆರೋಗ್ಯ ರಕ್ಷಣೆ ಸಂಬಂಧಿತ ವೈವಿಧ್ಯಮಯ ಜಾದೂ ಪ್ರದರ್ಶನದ ಮೂಲಕ ಕುತೂಹಲ ದೊಂದಿಗೆ ಮಕ್ಕಳ ಮನಗೆದ್ದರು.