ಮಡಿಕೇರಿ, ನ. 14: ಗೋಣಿಕೊಪ್ಪಲು ಎ.ಪಿ.ಎಂ.ಸಿ.ಯಲ್ಲಿನ ವಿಯೆಟ್ನಾಂ ಕಾಳುಮೆಣಸು ಕಲಬೆರಕೆ ಹಗರಣ ಇಂದು ವಿಧಾನಪರಿಷತ್‍ನಲ್ಲಿ ಪ್ರತಿಧ್ವನಿಸಿತು. ಈ ಬಗ್ಗೆ ಗಂಭೀರವಾಗಿ ಗಮನ ಸೆಳೆದ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಹಗರಣ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟು ಇದರಿಂದ ಕೊಡಗಿನ ಹಾಗೂ ರಾಜ್ಯ ಬೆಳೆಗಾರರು ತೀರಾ ಅನ್ಯಾಯಕ್ಕೆ ಒಳಗಾಗಿದ್ದು, ಆಡಳಿತ ಮಂಡಳಿಯ ಕಣ್ಣೆದುರೇ ದುರುಪಯೋಗ ನಡೆದಿದೆ, ಈ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಸೂಪರ್‍ಸೀಡ್ ಮಾಡಬೇಕೆಂದು ಆಗ್ರಹಿಸಿದರು.ಈ ಬಗ್ಗೆ ಕೊಡಗಿನಲ್ಲಿ ಕಳೆದ ಎರಡು ತಿಂಗಳಿಂದ ರೈತರು - ಬೆಳೆಗಾರರು ಪ್ರತಿಭಟನೆ ಮಾಡುತ್ತಿದ್ದಾರೆ. ವಿಯೆಟ್ನಾಂನಿಂದ 2017ರ ಮಾರ್ಚ್‍ನಿಂದ ಕರಿಮೆಣಸು ಆಮದು ಮಾಡಿಕೊಂಡು ಉತ್ತಮ ಗುಣಮಟ್ಟದ ಕೊಡಗಿನ ಕರಿಮೆಣಸಿನೊಂದಿಗೆ ಕಲಬೆರಕೆ ಮಾಡಲಾಗಿದೆ. ಇದರಿಂದ ದರ ತೀರಾ ಕುಸಿದಿದ್ದು, ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಆದರೆ ಆಡಳಿತ ಮಂಡಳಿಯ ಕಣ್ಣೆದುರೇ ಪ್ರಕರಣ ನಡೆದಿರುವದರಿಂದ ಆಡಳಿತ ಮಂಡಳಿಯನ್ನು ಸೂಪರ್‍ಸೀಡ್ ಮಾಡಬೇಕೆಂದು ವೀಣಾ ಅಚ್ಚಯ್ಯ ಒತ್ತಾಯಿಸಿದರು.

ಕೇಂದ್ರಕ್ಕೆ ಸಿ.ಎಂ. ಪತ್ರ

ವೀಣಾ ಅವರ ಪ್ರಶ್ನೆಗೆ ಉತ್ತರಿಸಿದ ತೋಟಗಾರಿಕಾ ಹಾಗೂ ಮಾರುಕಟ್ಟೆ ಸಚಿವ ಶಿವಶಂಕರಪ್ಪ ಅವರು ರಾಜ್ಯದಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕರಿಮೆಣಸು ಬೆಳೆಯಲಾಗುತ್ತಿದೆ. ವಿಯೆಟ್ನಾಂನಿಂದ ಶ್ರೀಲಂಕಾಕ್ಕೆ ಕರಿಮೆಣಸು ತಂದು ಅಲ್ಲಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಶ್ರೀಲಂಕಾದಿಂದ ಆಮದು ಮಾಡಲು 2500 ಮೆಟ್ರಿಕ್ ಟನ್‍ಗೆ ಆಮದು ಶುಲ್ಕ (ಡ್ಯೂಟಿ) ಇಲ್ಲ. 2500 ಮೆಟ್ರಿಕ್ ಟನ್‍ಗಿಂತ ಜಾಸ್ತಿ ಇದ್ದಲ್ಲಿ ಶೇ. 8, ಏಷ್ಯಾದ ಇತರ ರಾಷ್ಟ್ರಗಳಿಂದ ಆಮದು ಮಾಡಿದಲ್ಲಿ ಶೇ. 54 ಹಾಗೂ ಬೇರೆ ದೇಶಗಳಿಂದ ಆಮದಿಗೆ ಶೇ. 70ರಷ್ಟು (ಡ್ಯೂಟಿ) ವಿಧಿಸಲಾಗುತ್ತಿದೆ. ಈ ಬಗ್ಗೆ 2.1.2017ರಲ್ಲಿ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದು, ಆಮದು ಶುಲ್ಕ ಹೆಚ್ಚಳ ಮಾಡಲು ಮನವಿ ಮಾಡಿದ್ದಾರೆ ಎಂದು ಉತ್ತರಿಸಿದರು.

ಮಧ್ಯ ಪ್ರವೇಶಿಸಿದ ಸಭಾಪತಿ

ಈ ಸಂದರ್ಭ ಮಧ್ಯ ಪ್ರವೇಶಿಸಿದ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರು ಸದಸ್ಯರು ಗಂಭೀರ ಪ್ರಶ್ನೆಯನ್ನು ಕೇಳಿದ್ದಾರೆ. ಇದರಲ್ಲಿ ಗುಣಮಟ್ಟ ಕಾಪಾಡಿಲ್ಲ ಎಂಬ ಆಕ್ಷೇಪವೂ ಇದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಸಚಿವ ಶಿವಶಂಕರಪ್ಪ ಅವರು ಶ್ರೀಲಂಕಾದಿಂದ ಭಾರತಕ್ಕೆ ಕಡಿಮೆ ಆಮದು ಶುಲ್ಕ ಇದೆ. ಇಲ್ಲಿಂದ ಕರಿಮೆಣಸು ಆಮದಾಗಿದ್ದು ಬೇರೆ ರಾಜ್ಯದಿಂದ ಕೊಡಗಿಗೆ ಬಂದಿರಬಹುದು. ಕಳಪೆ ಗುಣಮಟ್ಟದ ಬಗ್ಗೆ ಕೇಂದ್ರ ಸರಕಾರ ಗಮನಹರಿಸಬೇಕು, ಈ ಬಗ್ಗೆ ನಮಗೂ ಅರಿವಾಗದು ಎಂದರು.

ಸುನಿಲ್ ಸುಬ್ರಮಣಿ ಪ್ರಶ್ನೆ

ಸಚಿವರ ಉತ್ತರ ಸಂದರ್ಭ ಮಧ್ಯಪ್ರವೇಶಿಸಿದ ಜಿಲ್ಲೆಯ ಮತ್ತೋರ್ವ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಕಲಬೆರಕೆ ವಿಚಾರಕ್ಕೆ ಸಂಬಂಧಿಸಿದಂತೆ

(ಮೊದಲ ಪುಟದಿಂದ) ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.

ಉತ್ತರ ನೀಡಿದ ಸಚಿವರು ಈ ಬಗ್ಗೆ ಜಿಲ್ಲೆಯಿಂದ ನಿಯೋಗ ಬಂದಿತ್ತು. ಈ ಮನವಿಯಂತೆ ತನಿಖೆಗೆ ಸೂಚನೆ ನೀಡಲಾಗಿದ್ದು, ಈಗಾಗಲೇ ವರದಿ ಬಂದಿದೆ. ಇದನ್ನು ಪರಿಶೀಲಿಸಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಜರುಗಿಸುವದಾಗಿ ಹೇಳಿದರು.

ಕ್ಯಾ. ಗಣೇಶ್ ಕಾರ್ಣಿಕ್ ಭಾಗಿ

ಚರ್ಚೆಯ ನಡುವೆ ಕೊಡಗನ್ನು ಪ್ರತಿನಿಧಿಸುತ್ತಿರುವ ಶಿಕ್ಷಕರ ಕ್ಷೇತ್ರದ ಸದಸ್ಯ ಗಣೇಶ್ ಕಾರ್ಣಿಕ್ ಅವರು ಬೆಲೆ ಕುಸಿದಿರುವದಾಗಿ ಸದಸ್ಯೆ ವೀಣಾ ಅವರು ಹೇಳಿರುವದು ಸತ್ಯ. ಆದರೆ ಕೇವಲ ಆಮದಿನ ಕಾರಣದಿಂದ ಈ ಸಮಸ್ಯೆಯಾಗಿದೆಯೇ ಅಥವಾ ರೈತರು ಬೇರೆ ಯಾವದಾದರೂ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದ್ದಾರೆಯೇ ಎಂದು ಪರಿಶೀಲಿಸಬೇಕು ಎಂದರು. ಆಮದು ಕಲಬೆರಕೆ ವಿಚಾರ ಒಂದು ಭಾಗ ಇದರಲ್ಲಿ ತಪ್ಪಾಗಿದ್ದಲ್ಲಿ ಇದನ್ನು ತಿದ್ದಿಕೊಳ್ಳಬೇಕು. ಆದರೆ ರೈತರ ಸಹಾಯಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬದೂ ವೀಣಾ ಅವರು ಪ್ರಶ್ನೆಯಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಸಚಿವರು ಈ ಹಿಂದೆ ಅಡಿಕೆ ¨ಳೆಗೂ ಈ ಸ್ಥಿತಿ ಎದುರಾಗಿತ್ತು. ಆ ಸಂದರ್ಭ ರಾಜ್ಯ ಸರಕಾರದ ಮನವಿಗೆ ಸ್ಪಂದಿಸಿ ಕೇಂದ್ರ ಡ್ಯೂಟಿ ಹೆಚ್ಚಳ ಮಾಡಿತ್ತು. ಈಗಲೂ ಅದನ್ನು ಮಾಡಿಸಿಕೊಂಡು ಬನ್ನಿ ಎಂದು ಕಾರ್ಣಿಕ್ ಅವರಿಗೆ ಹೇಳಿದರು. ನಾವು ಮಾಡಿಸಿಕೊಂಡು ಬರುವದಾದರೆ ನೀವೇಕೆ ಎಂದು ಕಾರ್ಣಿಕ್ ಅವರು ತಿರುಗೇಟು ನೀಡಿದರು. ಈ ಸಂದರ್ಭ ಆಡಳಿತ ವಿಪಕ್ಷದವರ ನಡುವೆ ಕೆಲ ಕ್ಷಣ ಮಾತಿನ ಚಕಮಕಿ ನಡೆಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ನೀವುಗಳು ಸಹಕರಿಸಬೇಕು ಎಂದು ಸಚಿವರು ಹೇಳಿದರು.

ಮಾಹಿತಿ ಪಡೆಯಲು ಸಲಹೆ

ಚರ್ಚೆಯಲ್ಲಿ ಪಾಲ್ಗೊಂಡ ಚಿಕ್ಕಮಗಳೂರು ಎಂಎಲ್‍ಸಿ ಪ್ರಾಣೇಶ್ ಅವರು ವಿಯೆಟ್ನಾಂನಿಂದ ಎಷ್ಟು ಕರಿಮೆಣಸು ಆಮದಾಗಿದೆ, ಶ್ರೀಲಂಕಾ ಹಾಗೂ ಇಂಡೋನೇಷಿಯಾದಿಂದ ಎಷ್ಟು ಆಮದು ಮಾಡಲಾಗಿದೆ ಎಂದು ಮಾಹಿತಿ ಸಂಗ್ರಹಿಸುವಂತೆ ಸಲಹೆಯಿತ್ತರು. ಕೇಂದ್ರದ ಗಮನ ಸೆಳೆಯುವ ಪ್ರಯತ್ನ ಶೀಘ್ರ ಮಾಡಬೇಕು ಹಾಗಾದಲ್ಲಿ ಹೀಗಾದಲ್ಲಿ ಪರಿಹಾರ ಸಿಗಲಿದೆ ಎಂದೂ ಅವÀರು ಅಭಿಪ್ರಾಯ ವ್ಯಕ್ತಪಡಿಸಿದರು.

ಆಡಳಿತ ಮಂಡಳಿ ಬಗ್ಗೆ ಕ್ರಮಕ್ಕೆ ಮತ್ತೆ ಒತ್ತಾಯ

ಚರ್ಚೆಯ ಅಂತಿಮ ಹಂತದಲ್ಲಿ ಸಭಾಪತಿಗಳು ಸದಸ್ಯೆ ವೀಣಾ ಅಚ್ಚಯ್ಯ ಅವರು ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿರುವ ಕುರಿತು ಸಚಿವರಲ್ಲಿ ಪ್ರಸ್ತಾಪಿಸಿದರು. ಈ ಸಂದರ್ಭ ವೀಣಾ ಅಚ್ಚಯ್ಯ ಅವರು ಕ್ರಮ ಜರುಗಿಸುವಂತೆ ಮರು ಆಗ್ರಹಪಡಿಸಿದರು. ಈಗಾಗಲೇ ತನಿಖೆಗೆ ಸೂಚನೆ ನೀಡಿ ವರದಿ ಪಡೆಯಲಾಗಿದೆ ಎಂದು ಸಚಿವರು ತಿಳಿಸಿದಾಗ ಈ ಬಗ್ಗೆ ಪರಿಶೀಲಿಸುವಂತೆ ಸಭಾ ನಾಯಕರು ಸಲಹೆ ನೀಡಿದರು.