ಬೆಳಗಾವಿ, ನ. 14: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರಿಂದಾಗಿ ಚಳಿಗಾಲದ ಅಧಿವೇಶನದ ಎರಡನೇ ದಿನದ ಕಲಾಪ ಬಲಿಯಾಯಿತು. ನಿನ್ನೆ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಿದ ಬಳಿಕ ಸ್ಪೀಕರ್ ಕೆ.ಬಿ. ಕೋಳಿವಾಡ್ ಕಲಾಪವನ್ನು ಇಂದಿಗೆ ಮುಂದೂಡಿದ್ದರು. ಇಂದು ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಜಾರ್ಜ್ ರಾಜೀನಾಮೆ ನೀಡಬೇಕು ಮತ್ತು ಈ ಸಂಬಂಧ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಪ್ರಶ್ನೋತ್ತರ ಅವಧಿ ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಸಚಿವ ಜಾರ್ಜ್ ರಾಜೀನಾಮೆ ಕೋರಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಬಲವಾದ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಪರ, ವಿರೋಧದ ಸಂಘರ್ಷ ನಡೆಯಿತು. ಸಮಾಜದಲ್ಲಿ ಹೆಚ್ಚುತ್ತಿರುವ ಮೂಢನಂಬಿಕೆಗಳಿಗೆ ಕಡಿವಾಣ ಹಾಕುವದಕ್ಕಾಗಿ ರಾಜ್ಯ ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ವಿವಾದಿತ ಹಾಗೂ ಬಹು ಚರ್ಚಿತ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ಮಂಡಿಸಿದೆ.
(ಮೊದಲ ಪುಟದಿಂದ) ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ಒತ್ತಾಯಿಸಿ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆಯ ನಡುವೆಯೇ ವಿಧಾನಸಭೆಯಲ್ಲಿ ಇಂದು ಮೌಢ್ಯ ಪ್ರತಿಬಂಧಕ ವಿಧೇಯಕ, ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿ ವಿಧೇಯಕ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು. ವಿಧೇಯಕ ಮಂಡನೆಯಾದ ನಂತರವೂ ಜಾರ್ಜ್ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದ್ದರಿಂದ ಸ್ಪೀಕರ್ ಕೆ.ಬಿ. ಕೋಳಿವಾಡ್ ಅವರು ಕಲಾಪವನ್ನು ನಾಳೆಗೆ ಮುಂದೂಡಿದ್ದಾರೆ. ನಾಳೆ ವಿಧಾನಸಭೆಯಲ್ಲಿ ಈ ವಿಧೇಯಕಗಳ ಮೇಲೆ ಚರ್ಚೆ ನಡೆಯಲಿದೆ. ಎರಡೂ ಸದನಗಳಲ್ಲಿ ಅಂಗೀಕಾರ ದೊರೆತ ನಂತರ ವಿಧೇಯಕ ಕಾಯ್ದೆ ರೂಪದಲ್ಲಿ ಜಾರಿಗೆ ಬರಲಿದೆ.