ಕುಶಾಲನಗರ, ನ. 14: ಮೂಲ ಕಾವೇರಿ ಸ್ಥಾನವಾದ ಕೊಡಗು ಜಿಲ್ಲೆಯ ಪ್ರಾಕೃತಿಕ ಸಂಪತ್ತಿಗೆ ಯಾವದೇ ರೀತಿಯ ಧಕ್ಕೆ ಬಾರದಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಯೋಜನೆ ರೂಪಿಸಿ ಜೀವನದಿ ಕಾವೇರಿಯ ಸಂರಕ್ಷಣೆಗೆ ಒತ್ತು ನೀಡಬೇಕೆಂದು ಅಖಿಲ ಭಾರತ ಸಾಧು ಸಂತರ ಸಂಘದ ಪ್ರಮುಖ ರಮಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಕಾವೇರಿ ನದಿ ಸ್ವಚ್ಛತಾ ಆಂದೋಲನ ಮತ್ತು ಅಖಿಲ ಭಾರತ ಸಾಧುಸಂತರ ಸಂಘದ ಆಶ್ರಯದಲ್ಲಿ ತಮಿಳುನಾಡಿನ ಪೂಂಪ್‍ಹಾರ್‍ನಲ್ಲಿ ನಡೆದ 7ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ಪ್ರಕೃತಿಗೆ ಹಾನಿಯಾದಲ್ಲಿ ಜೀವನದಿ ಕಾವೇರಿಗೆ ಧಕ್ಕೆಯಾಗುವದರೊಂದಿಗೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳು ಅವನತಿಯತ್ತ ಸಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈಗಾಗಲೆ ಕಾವೇರಿ ನದಿ ಸಂರಕ್ಷಣೆಯ ಬಗ್ಗೆ ಕರ್ನಾಟಕ, ತಮಿಳುನಾಡು ಮತ್ತು ಕೇಂದ್ರ ಸರಕಾರಗಳಿಗೆ ಸಾಧುಸಂತರ ಮೂಲಕ ಮನವಿ ಸಲ್ಲಿಸಲಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೂ ತರಲಾಗಿದೆ. ಸ್ವಚ್ಛ ಕಾವೇರಿ ನಿರ್ಮಾಣದೊಂದಿಗೆ ಕಾವೇರಿ ನದಿ ತಟಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಕೇಂದ್ರ ಸರಕಾರ ಯೋಜನೆ ರೂಪಿಸುವಂತೆ ಸಂತರ ಸಭೆಯಲ್ಲಿ ಆಗ್ರಹ ಕೇಳಿಬಂತು.

ಅಖಿಲ ಭಾರತ ಸಾಧುಸಂತರ ಸಂಘದ ಅಧ್ಯಕ್ಷ ವೇದಾನಂದ ಆನಂದ ಸ್ವಾಮೀಜಿ, ಮಾತನಾಡಿ, 22 ದಿನಗಳ ಕಾಲ ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ನದಿ ತಟದಲ್ಲಿ ಯಾತ್ರೆ ಮಾಡಿದ ತಂಡ ಲಕ್ಷಾಂತರ ಜನರಿಗೆ ನದಿ ಉಳಿವಿನ ಬಗ್ಗೆ ಅರಿವು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಮುಂದಿನ ದಿನಗಳಲ್ಲಿ ಕಾವೇರಿ ಕುಟುಂಬ ರಚನೆಯೊಂದಿಗೆ ನದಿ ರಕ್ಷಣೆಯ ನಿಟ್ಟಿನಲ್ಲಿ 1 ಕೋಟಿ ಸದಸ್ಯರನ್ನು ಹೊಂದುವ ಗುರಿಯಿದೆ ಎಂದರು.

ಅಕ್ಟೋಬರ್ 22 ರಂದು ಕೊಡಗು ಜಿಲ್ಲೆಯ ತಲಕಾವೇರಿ ಯಿಂದ ಚಾಲನೆಗೊಂಡ ರಥಯಾತ್ರೆ ತಾ. 13 ರಂದು ಕಾವೇರಿ ನದಿ ಸಮುದ್ರ ಸಂಗಮವಾಗುವ ಪೂಂಪ್‍ಹಾರ್ ಬಳಿ ಅಂತ್ಯಗೊಂಡಿತು.

ಈ ಸಂದರ್ಭ ಅಲ್ಲಿನ ಪೂರ್ಣೇಶ್ವರಿ ದೇವಾಲಯದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನಂತರ ಹೋಮ ಹವನಾದಿಗಳು ಜರುಗಿದವು.

ತಲಕಾವೇರಿಯಿಂದ ಒಯ್ಯಲಾದ ಕಾವೇರಿ ತೀರ್ಥ ತುಂಬಿದ 7 ಕಳಶಗಳನ್ನು ಸಂಗಮ ಕ್ಷೇತ್ರದಲ್ಲಿ ವಿಸರ್ಜಿಸಲಾಯಿತು.

ತೀರ್ಥಯಾತ್ರೆ ಸಮಿತಿಯ ಅಧ್ಯಕ್ಷ ನಾಗೇಶ್ವರಂ ಸ್ವಾಮೀಜಿ,

ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ತಮಿಳುನಾಡು ಪ್ರಾಂತ್ಯದ ಸಂಚಾಲಕ ವಾಸು ರಾಮಚಂದ್ರನ್, ರಾಮನಾಥಪುರ ವಿಭಾಗದ ಸಂಚಾಲಕ ಎಂ.ಎನ್. ಕುಮಾರಸ್ವಾಮಿ, ಕುಶಾಲನಗರದ ಪ್ರಮುಖರಾದ ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ಮಂಜುನಾಥ್, ನಿಡ್ಯಮಲೆ ದಿನೇಶ್, ದಕ್ಷಿಣ ಭಾರತದ ವಿವಿಧೆಡೆಯ ಸಾಧುಸಂತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೊಡಗು ಜಿಲ್ಲೆಯಿಂದ 15 ಕ್ಕೂ ಅಧಿಕ ಕಾರ್ಯಕರ್ತರು ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.