ಮಡಿಕೇರಿ, ನ. 14: ವೀರಾಜಪೇಟೆಯಲ್ಲಿ ಕಳೆದ ಆರು ತಿಂಗಳ ಹಿಂದೆ ನಡೆದ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವೀರಾಜಪೇಟೆ ನಗರ ಪೊಲೀಸರಿಂದ ಬಂಧಿತರಾಗಿರುವ ಇಬ್ಬರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಮೂವರು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.20.5.2017 ರಂದು ವೀರಾಜಪೇಟೆಯ ದಖ್ಖನಿಮೊಹಲ್ಲಾ ನಿವಾಸಿ ಸುಭಾಷ್ ಎಂಬವರು ಪೆಟ್ರೋಲ್ ಬಂಕ್‍ನಿಂದ ಹಣದೊಂದಿಗೆ ಬೈಕ್‍ನಲ್ಲಿ ಬರುತ್ತಿದ್ದಾಗ ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆಗೆ ಯತ್ನಿಸಲಾಗಿತ್ತು.
(ಮೊದಲ ಪುಟದಿಂದ) ಇದರಲ್ಲಿ ವಿಫಲಗೊಂಡ ಆರೋಪಿಗಳು ಬಳಿಕ ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಇತ್ತೀಚೆಗೆ ಗಾಂಧಿನಗರದ ಸವಿನ್ ಜಿ. ಮತ್ತು ಅಸ್ಗರ್ ಎಂಬವರನ್ನು ಬಂಧಿಸಿದ್ದರು. ಇವರ ವಿಚಾರಣೆ ಸಂದರ್ಭ ಈ ಪ್ರಕರಣದಲ್ಲಿ ಇನ್ನೂ ಮೂವರು ಭಾಗಿಯಾಗಿರುವದು ತಿಳಿದು ಬಂದಿದೆ.
ಪೂಣಚ್ಚ, ಯೋಗೇಶ್ ಹಾಗೂ ಸಂತೋಷ್ ಎಂಬವರು ತಲೆಮರೆಸಿ ಕೊಂಡಿರುವ ಆರೋಪಿಗಳಾಗಿದ್ದಾರೆ. ಇದಲ್ಲದೆ ಈ ತಂಡ ಅರಮೇರಿಯ ಅನಸೂಯ ಹಾಗೂ ನಲ್ವತ್ತೊಕ್ಲುವಿನ ನೆಲ್ಲಚಂಡ ಪೂವಪ್ಪ ಅವರ ಮನೆಯಲ್ಲಿ ಈ ಹಿಂದೆ ಕಳ್ಳತನ ನಡೆಸಿರುವದೂ ಬಯಲಾಗಿದೆ.
ಡಿವೈಎಸ್‍ಪಿ ನಾಗಪ್ಪ ಮಾರ್ಗ ದರ್ಶನದಲ್ಲಿ ವೃತ್ತ ನಿರೀಕ್ಷಕರಾದ ಕುಮಾರ್ ಆರಾಧ್ಯ, ಉಪ ನಿರೀಕ್ಷಕರುಗಳಾದ ಸಂತೋಷ್ ಕಶ್ಯಪ್, ಸುರೇಶ್ ಬೋಪಣ್ಣ, ಸಿಬ್ಬಂದಿಗಳಾದ ಸುನಿಲ್, ನಂಜಪ್ಪ, ರಜನ್, ಮುನೀರ್ ಹಾಗೂ ಯೋಗೇಶ್ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ, ಪ್ರಕರಣ ಬಯಲಿಗೆಳೆದಿದ್ದಾರೆ. ಉಳಿದ ಮೂವರನ್ನು ಸದ್ಯದಲ್ಲೇ ಬಂಧಿಸಲಾಗುವದೆಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.