ಸೋಮವಾಪೇಟೆ, ನ. 14: ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದ್ದು, ಅಧಿಕಾರಿಗಳು ಕೆಲವೊಂದು ದಾಖಲಾತಿಗಳಿಗೆ ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ದುಪ್ಪಟ್ಟು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಇವರುಗಳ ವಿರುದ್ಧ ಕಂದಾಯ ಇಲಾಖಾ ಸಚಿವರಿಗೆ ದೂರು ನೀಡಲಾಗುವದು ಎಂದು ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಲಂಚದ ಹಾವಳಿ ಮಿತಿಮೀರಿದೆ. ಮಧ್ಯವರ್ತಿಗಳು ಸಾರ್ವಜನಿಕರಿಂದ ಹಣ ಮಾಡುವ ದಂಧೆಗೆ ಇಳಿದಿದ್ದಾರೆ. ಅಧಿಕಾರಿಗಳೂ ಸಹ ಸರ್ಕಾರಿ ಕೆಲಸಕ್ಕೆ ಹಣ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ತಾಲೂಕು ತಹಶೀಲ್ದಾರ್ ನಿರುಮ್ಮಳರಾಗಿದ್ದು, ಭ್ರಷ್ಟಾಚಾರದಲ್ಲಿ ಇವರ ಪಾತ್ರವೂ ಇರುವ ಸಂಶಯ ಮೂಡಿದೆ ಎಂದರು.

ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ 160ರಲ್ಲಿ 150 ಭರವಸೆಗಳನ್ನು ಈಗಾಗಲೇ ಈಡೇರಿಸಿದೆ. ರೈತರಿಗೆ ಮತ್ತು ಕೃಷಿಕಾರ್ಮಿಕ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಗೆ ತಂದ 94 ಸಿ, 94ಸಿ.ಸಿ., ಫಾರಂ 50, 53 ಮತ್ತು ಕಂದಾಯ ಗ್ರಾಮದಂತಹ ಹಲವು ಯೋಜನೆಗಳನ್ನು ಜಾರಿಗೆ ತಂದು ಡಿಸೆಂಬರ್ 30ರೊಳಗೆ ಕ್ರಮವಹಿಸುವಂತೆ ಆದೇಶಿಸಿದ್ದರೂ ಸ್ಥಳೀಯ ಕಂದಾಯ ಇಲಾಖಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ 4 ಪಟ್ಟು ವಸೂಲಿ ಮಾಡುತ್ತಿರುವದು ಕಂಡುಬಂದಿದೆ. ಶಾಸಕರ ಕಚೇರಿಯ ಪಕ್ಕದಲ್ಲೇ ಇಂತಹ ಭ್ರಷ್ಟಾಚಾರ ನಡೆಯುತ್ತಿದ್ದರೂ ಶಾಸಕ ಅಪ್ಪಚ್ಚು ರಂಜನ್ ಮೌನವಹಿಸಿರುವದು ಖಂಡನೀಯ ಎಂದರು.

ಫಲಾನುಭವಿಗಳಿಂದ ಸರ್ಕಾರಿ ಅಧಿಕಾರಿಗಳು, ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚು ಪಡೆಯುವ ಪ್ರಕರಣಗಳು ಕಂಡುಬಂದಲ್ಲಿ ಬ್ಲಾಕ್ ಕಾಂಗ್ರೆಸ್ ಗಮನಕ್ಕೆ ತರಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖಾ ಸಚಿವರು ಸೇರಿದಂತೆ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುವದು ಎಂದು ಎಚ್ಚರಿಸಿದ ಲೋಕೇಶ್, ಶಾಸಕರು ತಕ್ಷಣ ಕೆಡಿಪಿ ಸಭೆ ಕರೆದು ಅಧಿಕಾರಿಗಳಿಗೆ ತಾಕೀತು ಮಾಡಬೇಕು. ಸಾರ್ವಜನಿಕರ ಕೆಲಸ ಕಾರ್ಯಗಳು ಭ್ರಷ್ಟಾಚಾರವಿಲ್ಲದೇ ನಡೆಯುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ತಹಶೀಲ್ದಾರ್ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿದ್ದು, ಕಂದಾಯ ಇಲಾಖೆಗೆ ಸಂಬಂಧಿಸಿದ ಕಡತಗಳು ವಿಲೇವಾರಿಯಾಗುತ್ತಿಲ್ಲ. ಇದರೊಂದಿಗೆ ಭೂ ದಾಖಲೆಗಳಿಗೆ ಸಂಬಂಧಿಸಿದಂತೆ 30 ರಿಂದ 40 ಸಾವಿರ ಲಂಚ ಪಡೆಯುತ್ತಿರುವ ಬಗ್ಗೆಯೂ ದೂರುಗಳು ಕೇಳಿಬಂದಿದ್ದು, ಸಾರ್ವಜನಿಕರು ಅಧಿಕಾರಿಗಳಿಗೆ ಯಾವದೇ ಕಾರಣಕ್ಕೂ ಹಣ ನೀಡಬಾರದು. ಹಣಕ್ಕೆ ಬೇಡಿಕೆಯಿಟ್ಟರೆ ಬ್ಲಾಕ್ ಕಾಂಗ್ರೆಸ್ ಗಮನಕ್ಕೆ ತರಬೇಕು. ಅಥವಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಚಂಗಪ್ಪ, ವಕ್ತಾರ ಹೆಚ್.ಸಿ. ನಾಗೇಶ್, ಪ್ರಮುಖರಾದ ಎ.ಕೆ. ಹಕೀಂ, ಹೆಚ್.ಎಸ್. ನಂದಕುಮಾರ್, ಬಿ.ಜಿ. ಇಂದ್ರೇಶ್, ಬಿ.ಬಿ. ಸತೀಶ್, ಮಿಥುನ್ ಹಾನಗಲ್ಲು ಅವರುಗಳು ಉಪಸ್ಥಿತರಿದ್ದರು.