ಮೂರ್ನಾಡು, ನ. 14: ಮಂದಪ್ಪ ರೂರಲ್ ಫ್ರೆಂಡ್ಸ್ ಸ್ಪೋಟ್ರ್ಸ್ ಮತ್ತು ರಿಕ್ರಿಯೇಶನ್ ಕ್ಲಬ್ ವತಿಯಿಂದ ಹಾಕಿ ಕೂರ್ಗ್ ಸಹಯೋಗದಲ್ಲಿ ನಡೆದ ಬಾಚ್ಚೆಟಿರ ಮಂದಪ್ಪ ಸ್ಮರಣಾರ್ಥ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಹಾತೂರು ಯೂತ್ ಕ್ಲಬ್ ಚಾಂಪಿಯನ್ ಪಟ್ಟ ಅಲಂಕರಿಸಿತು.ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾ ಮೈದಾನದಲ್ಲಿ 4 ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಇಂದು ನಡೆದ ಅಂತಿಮ ಪಂದ್ಯದಲ್ಲಿ ಬಿಬಿಸಿ ಗೋಣಿಕೊಪ್ಪಲು ತಂಡವನ್ನು ಹಾತೂರು ಯೂತ್ ಕ್ಲಬ್ ತಂಡ ಪೆನಾಲ್ಟಿ ಶೂಟೌಟ್‍ನಲ್ಲಿ 5-3 ಗೋಲುಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಿಬಿಸಿ ಗೋಣಿಕೊಪ್ಪಲು ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ಬಿಬಿಸಿ ಗೋಣಿಕೊಪ್ಪಲು ಹಾಗೂ ಹಾತೂರು ಯೂತ್ ಕ್ಲಬ್ ನಡುವೆ ನಡೆದ ಪೈನಲ್ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ 3-3 ಗೋಲುಗಳ ಸಮಬಲದಲ್ಲಿ ಪಂದ್ಯ ಡ್ರಾ ಗೊಂಡಿತು. ಬಿಬಿಸಿ ಗೋಣಿಕೊಪ್ಪಲು ತಂಡದ ಪರ ಶರತ್, ಸೋಮಣ್ಣ ಹಾಗೂ ಹರೀಶ್ ತಲಾ 1ಗೋಲು ಹೊಡೆದರು. ಹಾತೂರು ಯೂತ್ ಕ್ಲಬ್ ತಂಡದ ಪರ ಕುಶಗೌಡ ತಲಾ 2 ಗೋಲು,

(ಮೊದಲ ಪುಟದಿಂದ) ಚಂಗಪ್ಪ 1ಗೋಲು ಹೊಡೆದರು. ಬಳಿಕ ನಡೆದ ಪೆನಾಲ್ಟಿ ಶೂಟೌಟ್‍ನಲ್ಲಿ ಹಾತೂರು ತಂಡ 2ಗೋಲುಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.

ಹಾತೂರು ಯೂತ್ ಕ್ಲಬ್ ತಂಡ 50,000 ನಗದು ವಿನರ್ಸ್ ಟ್ರೋಫಿಯನ್ನು ಪಡೆದುಕೊಂಡಿತು. ಬಿಬಿಸಿ ಗೋಣಿಕೊಪ್ಪಲು ತಂಡ 30,000 ನಗದು ಹಾಗೂ ರನ್ನರ್ಸ್ ಟ್ರೋಫಿ ಪಡೆದುಕೊಂಡಿತು. ಸೆಮಿಫೈನಲ್ ಪಂದ್ಯಕ್ಕೆ ಪ್ರವೇಶ ನೀಡಿದ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಹಾಗೂ ಡಾಲ್ಪಿನ್ಸ್ ಸೋಮವಾರಪೇಟೆ ತಂಡಗಳಿಗೆ 10,000 ನಗದು ಬಹುಮಾನ ನೀಡಲಾಯಿತು.

ಉತ್ತಮ ಗೋಲು ಕೀಪರ್ ಬಿಬಿಸಿ ಗೋಣಿಕೊಪ್ಪಲು ತಂಡದ ಹೇಮಂತ್, ಉತ್ತಮ ಹಿಂಬದಿ ಆಟಗಾರ ಬಿಬಿಸಿ ಗೋಣಿಕೊಪ್ಪಲು ತಂಡದ ರಾಹುಲ್, ಉತ್ತಮ ಆಫ್ ಬ್ಯಾಕ್ ಆಟಗಾರ ಹಾತೂರು ಯೂತ್ ಕ್ಲಬ್‍ನ ಕಾರ್ಯಪ್ಪ, ಉತ್ತಮ ಮುಂಬದಿ ಆಟಗಾರ ಯುಎಫ್‍ಸಿ ಬೇರಳಿನಾಡು ತಂಡದ ಎಚ್.ಟಿ. ರಮೇಶ್, ಉತ್ತಮ ಆಟಗಾರ ಹಾತೂರು ಯೂತ್ ಕ್ಲಬ್ ಕೌಶಿಕ್ ಸುಬ್ರಮಣಿ ಪ್ರಶಸ್ತಿ ಪಡೆದುಕೊಂಡರು. ವೀಕ್ಷಕ ವಿವರಣೆಯನ್ನು ಮಾಳೇಟಿರ ಶ್ರೀನಿವಾಸ್ ಮತ್ತು ನೆರ್ಪಂಡ ಹರ್ಷ ಮಂದಣ್ಣ ನೀಡಿದರು. ಫೈನಲ್ ಪಂದ್ಯದ ತೀರ್ಪುಗಾರರಾಗಿ ಐನಂಡ ಲಾಲ ಅಯ್ಯಣ್ಣ ಹಾಗೂ ನೆಲ್ಲಮಕ್ಕಡ ಪವನ್ ಕಾರ್ಯನಿರ್ವಹಿಸಿದರು.

ಕ್ರೀಡೆಗೆ ಪ್ರೋತ್ಸಾಹ ಅಗತ್ಯ

ಕೊಡಗಿನ ಜನತೆಯಿಂದ ಕ್ರೀಡೆಗೆ ಪ್ರೋತ್ಸಾಹ, ಸಹಕಾರ ನಿರಂತರವಾಗಿ ದೊರಕಬೇಕು ಎಂದು ಕೋಡಂಬೂರು ಕಾಫಿ ಬೆಳೆಗಾರ ಮೇಜರ್ ಬಡುವಂಡÀ ಯು. ಅಚ್ಚಪ್ಪ ಹೇಳಿದರು.

ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾ ಮೈದಾನದಲ್ಲಿ ಮಂದಪ್ಪ ರೂರಲ್ ಫ್ರೆಂಡ್ಸ್ ಸ್ಪೋಟ್ರ್ಸ್ ಮತ್ತು ರಿಕ್ರಿಯೇಶನ್ ಕ್ಲಬ್ ವತಿಯಿಂದ ಹಾಕಿ ಕೂರ್ಗ್ ಸಹಯೋಗದಲ್ಲಿ 4 ದಿನಗಳ ಕಾಲ ನಡೆದ ಬಾಚ್ಚೆಟಿರ ಮಂದಪ್ಪ ಸ್ಮರಣಾರ್ಥ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಹಾಕಿ ಕ್ರೀಡೆಯನ್ನು ಕೊಡಗಿನ ಜನ ತಮ್ಮ ಜನ್ಮಸಿದ್ದ ಕ್ರೀಡೆ ಎಂಬವದಾಗಿ ಭಾವಿಸಿ, ಕ್ರೀಡೆಗೆ ಜಿಲ್ಲೆಯಲ್ಲಿ ಎಲ್ಲರು ಪ್ರೋತ್ಸಾಹ ಸಹಕಾರ ನೀಡುತ್ತಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಬಾಚ್ಚೆಟಿರ ಜಿ. ಮಾದಪ್ಪ ಮಾತನಾಡಿ ಜನತೆ ವಿಶೇಷ ಮಟ್ಟದಲ್ಲಿ ಹಾಕಿ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿದ್ದು, ನಮ್ಮ ವಿದ್ಯಾಸಂಸ್ಥೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗಿದೆ. ವಿದ್ಯಾಸಂಸ್ಥೆ ಮೈದಾನವನ್ನು ಕೇವಲ ಕ್ರೀಡೆಗೆ ಮಾತ್ರ ಸೀಮಿತಗೊಳಿಸಿದಾಗ ಕ್ರೀಡಾ ಮೈದಾನವಾಗಿ ಉಳಿಯುತ್ತದೆ. ದಾನಿಗಳಾದ ಬಾಚ್ಚೆಟಿರ ಲಾಲು ಮುದ್ದಯ್ಯ ಹಾಗೂ ಇತರ ದಾನಿಗಳ ಸಹಕಾರದಿಂದ ಗುಣಮಟ್ಟದ ಶಿಕ್ಷಣದತ್ತ ವಿದ್ಯಾಸಂಸ್ಥೆಯನ್ನು ಕೊಂಡೊಯ್ಯಲು ಸಾಧ್ಯವಾಗುತ್ತಿದೆ ಎಂದರು.

ಸನ್ಮಾನ : ಸಮಾಜ ಸೇವಕರಾದ ಮೇಜರ್ ಬಡುವಂಡ ಯು. ಅಚ್ಚಪ್ಪ, ಪತ್ನಿ ಸೀತಾ ಅಚ್ಚಪ್ಪ ಹಾಗೂ ಹಾಕಿ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಅವರೆಮಾದಂಡ ಪಚ್ಚು ಕುಶಾಲಪ್ಪ ಪತ್ನಿ ಜ್ಯೋತಿ ಕುಶಾಲಪ್ಪ ಅವರನ್ನು ಕ್ಲಬ್‍ನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮಂದಪ್ಪ ರೂರಲ್ ಫ್ರೆಂಡ್ಸ್ ಸ್ಪೋಟ್ರ್ಸ್ ಮತ್ತು ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ಬಡುವಂಡ ಎ. ವಿಜಯ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಮೂರ್ನಾಡು ವಿದ್ಯಾಸಂಸ್ಥೆ ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ, ಹೊದ್ದೂರು ಕಾಫಿ ಬೆಳೆಗಾರ ನೆರವಂಡ ಕೆ. ನಂಜಪ್ಪ, ಚೌರೀರ ಸುನಿ ಅಚ್ಚಯ್ಯ, ಅಚ್ಚಪಂಡ ಗಿರಿ ಉತ್ತಪ್ಪ, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಚೇತನ್, ಎಂಆರ್‍ಎಫ್ ಕ್ಲಬ್‍ನ ಗೌರವ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಖಜಾಂಚಿ ಕೋಟೆರ ಪ್ರತಾಪ್ ಕಾರ್ಯಪ್ಪ ಹಾಗೂ ಕ್ಲಬ್‍ನ ಸದಸ್ಯರು ಹಾಜರಿದ್ದರು. ಕೋಡಂಬೂರು ಜ್ಞಾನಜ್ಯೋತಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಬ್ಯಾಡ್ ಶೋ ಗಮನ ಸೆಳೆಯಿತು.