ವೀರಾಜಪೇಟೆ, ನ. 14: ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಜನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಿ ಅಭಿವೃದ್ಧಿಯತ್ತ ಸಾಗುತ್ತಿದ್ದರೂ ವಿರೋಧ ಪಕ್ಷದವರು ಕ್ಷುಲ್ಲಕ ಕಾರಣಕ್ಕು ಬಂದ್ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಆರೋಪಿಸಿದರು.

ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರುರೋಡ್ ಬಳಿ ಕೆದಮುಳ್ಳೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಡ ಕುಟುಂಬಗಳಿಗೆ ಉಚಿತ ಅಕ್ಕಿ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಹಾಲು ಮತ್ತು ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಇದರ ಸದುಪಯೋಗವನ್ನು ಪಡಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕೆಲಸಗಳ ಸಾಧನೆ ಜನರ ಮನೆ ಬಾಗಿಲಿಗೆ ತಲುಪುವಂತಾಗುತ್ತಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಲ್ಲ ಇದೊಂದು ಸಂಸ್ಕøತಿ, ವೈಜ್ಞಾನಿಕವಾಗಿ ಪ್ರಗತಿಯ ಸಂಕೇತದ ಕುರುಹು ಆಗಿದೆ. ಜನರಿಗೆ ಬೇಕಾಗಿರುವಂತಹ ಸೌಲಭ್ಯಗಳನ್ನು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿಗೆ ಆದ್ಯತೆ ನೀಡಿ ಈಗಾಗಲೇ ಪ್ಯಾಕೇಜ್ ನೀಡಿದ್ದಾರೆ. ಕಾಂಗ್ರೆಸ್ ಸರಕಾರದ ಅನುದಾನ, ಕಾಮಗಾರಿಗೆ ಪ್ರಚಾರ ಕೊಟ್ಟು ಉದ್ಘಾಟನೆ ಮಾಡುವದು ವಿರೋಧ ಪಕ್ಷದವರು. ಕೊಡಗಿನ ಶಾಸಕರು ಹಾಗೂ ಸಂಸದರಿಗೆ ಕೇಂದ್ರದಿಂದ ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆಯಲ್ಲಿ ಅನುದಾನ ತಂದು ಭೂಮಿಪೂಜೆ ಮಾಡಲಿ ಎಂದರು.

ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಮಾತನಾಡಿ, ಹಿಂದಿನ ಸರ್ಕಾರಕ್ಕಿಂತಲೂ ಈಗ ಕಾಂಗ್ರೆಸ್ ಸರ್ಕಾರ ಹೆಚ್ಚು ಅಭಿವೃದ್ಧಿ ಜನಪರ ಕಾಮಗಾರಿಗಳಿಗೆ ಒತ್ತು ನೀಡಿದೆ. ಜನರಿಗೆ ಎಲ್ಲಾ ಸವಲತ್ತುಗಳನ್ನು ನೀಡುವ ಮೂಲಕ ಈ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ರೂ. 60 ಲಕ್ಷ ಅನುದಾನ ಬಂದಿದ್ದು, ಕಾಮಗಾರಿ ಪ್ರಾರಂಭಿಸ ಲಾಗಿದೆ ಉಳಿದ ಕಾಮಗಾರಿಗಾಗಿ ಇನ್ನೂ ರೂ. 60 ಲಕ್ಷ ಬರಲಿದೆ. ವಿರೋಧ ಪಕ್ಷದವರು ಕೊಡಗಿನ ಅಭಿವೃದ್ಧಿಗೆ ಬೆಂಗಳೂರಿಗೆ ಹೋಗಿ ಅನುದಾನ ತರುವ ಬದಲು ಕೆಲವರು ಇಲ್ಲಿ ಕುಳಿತು ಜಾತಿ ಜಾತಿ ಮಧ್ಯೆ ಒಡಕು ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ರಾಜ್ಯ ಸರ್ಕಾರ ವಿನೂತನವಾದ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಯಾವದೇ ಪಕ್ಷ ನೀಡದಂತಹ ನಿರ್ಗತಿಕರಿಗೆ ಹಕ್ಕು ಪತ್ರಗಳ ವಿತರಣೆ, ಕೊಡಗಿನವರೇ ಆಗಿದ್ದು ವಿಧಾನಸಭಾ ಅಧ್ಯಕ್ಷರು ಆಗಿದ್ದಾಗ ಈಗಿನ ಶಾಸಕರು ತನ್ನ ಅವಧಿಯಲ್ಲಿ ಕೋಟಿಗಟ್ಟಲೇ ಅನುದಾನ ತಂದಿದ್ದೇವೆ ಎಂದು ಭಾಷಣ ಬಿಗಿಯುವವರು ಎಷ್ಟು ಅಭಿವೃದ್ಧಿ ಮಾಡಿದ್ದಾರೆಂದು ಜನರ ಮುಂದೆ ಇಡಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಮುಖಂಡರು ಗಳು ವಿಧಾನಸೌಧಕ್ಕೆ ಹೋಗಿ ಅನುದಾನ ತಂದರೆ ವಿರೋಧ ಪಕ್ಷದವರು ಪ್ರಚಾರ ಗಿಟ್ಟಿಸಿಕೊಂಡು ಗುದ್ದಲಿ ಹಿಡಿದು ಕಾಮಗಾರಿಗೆ ಚಾಲನೆ ನೀಡುತ್ತಾರೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿ ಕೊಡಬೇಕು ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡ ಗಣಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜನರಿಗೆ ಬೇಕಾಗಿರುವ ಕುಡಿಯುವ ನೀರು ಮತ್ತು ರಸ್ತೆ ದುರಸ್ತಿ ಮಾಡುವದು ಜನಪ್ರತಿನಿಧಿಗಳ ಕರ್ತವ್ಯ ಎಂದು ಹೇಳಿದರು.

ವೀರಾಜಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ನಾಪೋಕ್ಲು ವಲಯ ಅಧ್ಯಕ್ಷ ರಮಾನತ್, ಕೃಷಿ ಮೋರ್ಚಾದ ಅಧ್ಯಕ್ಷ ಉಮೇಶ್ ಸಭೆಯನ್ನು ದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಆರ್.ಎಂ.ಸಿ. ಸದಸ್ಯ ಮಾಳೇಟಿರ ಬೋಪಣ್ಣ, ಮುಖಂಡರಾದ ಟಾಟು ಮೊಣ್ಣಪ್ಪ, ಮಹಿಳಾ ಕಾಂಗ್ರೆಸ್‍ನ ಕಾವೇರಮ್ಮ, ರೋಹಿಣಿ, ಪೊರೇರ ಬಿದ್ದಪ್ಪ, ನಗರ ಅಧ್ಯಕ್ಷ ಜಿ.ಜಿ. ಮೋಹನ್ ಉಪಸ್ಥಿತರಿದ್ದರು. ನಡಿಕೇರಿಯಂಡ ಮಹೇಶ್ ಸ್ವಾಗತಿಸಿ, ಗ್ರಾ.ಪಂ. ಸದಸ್ಯ ಇಸ್ಮಾಯಿಲ್ ವಂದಿಸಿದರು.