ಮಡಿಕೇರಿ, ನ. 15: ಡಿವೈಎಸ್ಪಿ ಎಂ.ಕೆ. ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಸಿಬಿಐ ತನಿಖೆ ಮುಂದುವರಿದಿದೆ. ಚೆನ್ನೈನಿಂದ ಆಗಮಿಸಿದ್ದ ಮೂರು ತಂಡಗಳ ಪೈಕಿ ಕೆಲವರು ಹಿಂತೆರಳಿದ್ದರೂ, ತಂಡವೊಂದು ಪ್ರಕರಣದ ತನಿಖೆಯನ್ನು ಮುಂದುವರಿಸಿದೆ. ಸಿಬಿಐ ಅಧಿಕಾರಿಗಳು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಪ್ರವಾಸಿ ಮಂದಿರದಲ್ಲಿ ತಂಗಿದ್ದಾಗಿ ಗೊತ್ತಾಗಿದೆ.

ಗಣಪತಿ ಸಾವು ಪ್ರಕರಣಕ್ಕೆ ಕಾರಣವೆಂದು ಹೇಳಲಾದ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎಂ.ಎ. ಪ್ರಸಾದ್ ಹಾಗೂ ಸಚಿವ ಕೆ.ಜೆ. ಜಾರ್ಜ್ ಇವರುಗಳ ಅಸಡ್ಡೆ ಮತ್ತು ಕಿರುಕುಳದ ಬಗ್ಗೆ ಗಣಪತಿ ಸಂದರ್ಶನದಲ್ಲಿ ಹೇಳಿದ್ದ ವೀಡಿಯೋ ದಾಖಲೆಯನ್ನು ಸಿಬಿಐ ಪ್ರಮುಖವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಗಣಪತಿ ಸಾವಿಗೂ ಮುನ್ನ, ಅದೇ ದಿನ ಭಿತ್ತರವಾದ ವೀಡಿಯೋ ಚಿತ್ರೀಕರಣ ಮಾಡಿದ್ದ ಸ್ಥಳೀಯ ಟಿವಿ-1 ಚಾನಲ್‍ನ ಪ್ರಮುಖ ಪ್ರಸಾದ್ ಅವರಿಂದಲೂ ಸಿಬಿಐ ತಂಡ ಮಾಹಿತಿ ಪಡೆದಿದೆ.

ನಿನ್ನೆ ದಿನ ಕಲೈಮಣಿ ಎಂಬ ಸಿಬಿಐ ಅಧಿಕಾರಿ ನೇತೃತ್ವದ ತಂಡವು ಮಡಿಕೇರಿಯ ವಿನಾಯಕ ಲಾಡ್ಜ್‍ನಲ್ಲಿ ಹಗಲಿಡೀ ಪರಿಶೀಲನೆ ನಡೆಸಿದ್ದು, ಗಣಪತಿ ಸಾವಿಗೀಡಾದ ಕೊಠಡಿ ಸಂಖ್ಯೆ 315ರಲ್ಲಿ ಹಾಸಿಗೆ ಒಳಗಡೆ ಕಂಡು ಬಂದ ಬುಲೆಟ್ ತುಂಡೊಂದನ್ನು ವಶಪಡಿಸಿ ಕೊಂಡಿದೆ. ತಪಾಸಣೆ ಬಳಿಕ ಆ ಕೊಠಡಿಗೆ ಬಿಗ ಜಡಿದು ಮೊಹರು ಮಾಡಲಾಯಿತು.

ನಿನ್ನೆ ದಿನ ಸ್ಥಳ ಮಹಜರು ಸಂದರ್ಭ ಸಂಬಂಧಿತ ಸಾಕ್ಷಿಗಳನ್ನು ಕರೆಸಲಾಗಿತ್ತು. ದುರ್ಘಟನೆಯ ದಿನವಾದ 2016ರ ಜುಲೈ 7ರಂದು ಪೊಲೀಸರು ಮಹಜರು ನಡೆಸಿದಾಗ, ಸ್ಥಳದಲ್ಲಿದ್ದ ಸಾಕ್ಷಿಗಳು ಮೃತರ ಸಹೋದರ ಎಂ.ಕೆ. ಮಾಚಯ್ಯ ಹಾಗೂ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಸಿಬಿಐ ಮತ್ತೆ ಮಹಜರು ನಡೆಸಿತು.

ಇಂದು ಬೆಂಗಳೂರಿನ ಸಿಬಿಐ ಕಚೇರಿಯಲ್ಲಿ ಅಧಿಕಾರಿಗಳು ಮೃತ ಗಣಪತಿ ಅವರ ಸಹೋದರಿ ಸಬಿತಾ ಹಾಗೂ ಸಹೋದರ ಡಿವೈಎಸ್ಪಿ ಎಂ.ಕೆ. ತಮ್ಮಯ್ಯ ಇವರುಗಳ ಹೇಳಿಕೆ ಪಡೆದಿರುವದಾಗಿ ತಿಳಿದುಬಂದಿದೆ.

ನಿನ್ನೆ ದಿನ ಮಡಿಕೇರಿಯಲ್ಲಿ ನಡೆದ ತನಿಖೆ ಸಂದರ್ಭ ನವದೆಹಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಣಿತರು ಕೂಡ ಹಾಜರಿದ್ದು, ತನಿಖೆಯಲ್ಲಿ ಸಿಬಿಐನೊಂದಿಗೆ ಕೈ ಜೋಡಿಸಿದ್ದಾರೆ.