ಗೋಣಿಕೊಪ್ಪ, ನ. 15 : ಎಂ. ಎನ್. ಕರುಂಬಯ್ಯ ಜ್ಞಾಪಕಾರ್ಥ ಜಿಲ್ಲಾ ಪ್ರೌಢಶಾಲಾ ಮಟ್ಟದ ಮಾಸ್ಟರ್ಸ್ ಕಪ್‍ನಲ್ಲಿ ಆತಿಥೇಯ ಕಾಲ್ಸ್ ಹಾಗೂ ಕೊಡಗು ವಿದ್ಯಾಲಯ ತಂಡವು ಸೆಮಿ ಫೈನಲ್‍ನಲ್ಲಿ ಜಯ ಸಾಧಿಸುವ ಮೂಲಕ ಫೈನಲ್‍ಗೆ ಪ್ರವೇಶ ಪಡೆದಿವೆ.

ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ವತಿಯಿಂದ ಹಾಕಿಕೂರ್ಗ್ ಸಹಯೋಗದಲ್ಲಿ ನಡೆದ ಸೆಮಿ ಫೈನಲ್‍ನಲ್ಲಿ ಸೋಲನುಭವಿಸಿದ ಗೋಣಿಕೊಪ್ಪ ಲಯನ್ಸ್ ಹಾಗೂ ಅಮ್ಮತ್ತಿ ಹೈಸ್ಕೂಲ್ ತಂಡವು ಸೋಲನುಭವಿಸಿತು.

ಭಾರತೀಯ ವಿದ್ಯಾ ಭವನ ಕೊಡಗು ವಿದ್ಯಾಲಯ ತಂಡವು ಗೋಣಿಕೊಪ್ಪ ಲಯನ್ಸ್ ತಂಡವನ್ನು 3-0 ಗೋಲುಗಳಿಂದ ಮಣಿಸಿ ಫೈನಲ್‍ಗೆ ಲಗ್ಗೆ ಇಟ್ಟಿತು. ಕೊಡಗು ವಿದ್ಯಾಲಯ ಪರ 14 ನೇ ನಿಮಿಷದಲ್ಲಿ ತಿಮ್ಮಯ್ಯ, 28 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‍ನ್ನು ಆರ್ಯನ್ ಗೋಲಾಗಿ ಪರಿವರ್ತಿಸಿದರು. 34 ನೇ ನಿಮಿಷದಲ್ಲಿ ನಿತಿನ್ 1 ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು. ಉಭಯ ತಂಡಗಳು ರೋಚಕ ಆಟ ಪ್ರದರ್ಶಿಸಿ ಕ್ರೀಡಾಭಿಮಾನಿಗಳ ಮನ ಗೆದ್ದರು.

ಆತಿಥೇಯ ಕಾಲ್ಸ್ ತಂಡವು ಅಮ್ಮತ್ತಿ ಹೈಸ್ಕೂಲ್ ವಿರುದ್ಧ 5-0 ಗೋಲುಗಳಿಂದ ಜಯಿಸಿತು. ಕಾಲ್ಸ್ ಪರವಾಗಿ 11, 17, 26 ನೇ ನಿಮಿಷಗಳಲ್ಲಿ ಪೂವಣ್ಣ 3 ಗೋಲು ಹೊಡೆದು ಮಿಂಚು ಹರಿಸಿದರು. 9 ನೇ ನಿಮಿಷದಲ್ಲಿ ಕುಶಾಲಪ್ಪ ಹಾಗೂ 19 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‍ನ್ನು ತಶ್ವಿನ್ ಗೋಲಾಗಿ ಪರಿವರ್ತಿಸಿ ದೊಡ್ಡ ಮೊತ್ತದ ಗೆಲುವಿಗೆ ಕಾರಣಕರ್ತರಾದರು.

ದಿನದ ಆರಂಭದಲ್ಲಿ ನಡೆದ ಕ್ವಾರ್ಟರ್ ಫೈನಲ್‍ನಲ್ಲಿ ಕಾಲ್ಸ್ ತಂಡವು ಗೋಣಿಕೊಪ್ಪ ಹೈಸ್ಕೂಲ್ ವಿರುದ್ಧ 5-0 ಗೋಲುಗಳಿಂದ ಜಯಿಸಿ ಸೆಮಿಗೆ ಪ್ರವೇಶ ಪಡೆಯಿತು. ಕಾಲ್ಸ್ ಪರ 6 ರಲ್ಲಿ ಮೌರ್ಯ, 13 ರಲ್ಲಿ ನಿಖಿಲ್, 21 ರಲ್ಲಿ ಪೂವಣ್ಣ, 23 ಹಾಗೂ 29 ರಲ್ಲಿ ತಶ್ವಿನ್ 2 ಗೋಲು ಹೊಡೆದರು.

ಫೈನಲ್ ಪಂದ್ಯಾವಳಿ ನಿರ್ದೇಶಕರಾಗಿ ಅಂಜಪರವಂಡ ಕುಶಾಲಪ್ಪ, ಅಂಪೈರ್ ಕಮಿಟಿ ವ್ಯವಸ್ಥಾಪಕ ಬೊಳ್ಳಚಂಡ ನಾಣಯ್ಯ, ತಾಂತ್ರಿಕ ವರ್ಗದಲ್ಲಿ ಸುಳ್ಳಿಮಾಡ ಸುಬ್ಬಯ್ಯ, ಅನ್ನಾಡಿಯಂಡ ಪೊನ್ನಣ್ಣ, ಕಾಟುಮಣಿಯಂಡ ಕಾರ್ತಿಕ್, ಮೇರಿಯಂಡ ಅಯ್ಯಣ್ಣ, ಚೋಯಮಾಡಂಡ ಬಿಪಿನ್, ಎಂ. ವಿನೋದ್, ಮುಂಡ್ಯೋಳಂಡ ದರ್ಶನ್ ಹಾಗೂ ಹರಿಣಾಕ್ಷಿ ಕಾರ್ಯನಿರ್ವಹಿಸಿದರು.

ತಾ. 16 ರಂದು (ಇಂದು) ಮಧ್ಯಾಹ್ನ 3 ಕ್ಕೆ ಫೈನಲ್ ಹಣಾಹಣಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಭಾರತ ಹಾಕಿ ಮಾಜಿ ಆಟಗಾರ ಬಿ. ಪಿ. ಗೋವಿಂದ ಪಾಲ್ಗೊಳ್ಳಲಿದ್ದಾರೆ.