ಗೋಣಿಕೊಪ್ಪಲು, ನ. 15: ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ರೈತ ಸಂಘ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಪ್ರತಿಭಟನೆ ನಡೆಸಿತು.
ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಸಚಿವ ಜಯಚಂದ್ರ ಅವರು ಪ್ರತಿಭಟನಾ ಸ್ಥಳಕ್ಕಾಗಮಿಸಿ ರೈತ ಸಂಘದ ಮನವಿ ಸ್ವೀಕರಿಸಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅದಿವೇಶನದಲ್ಲಿ ಪ್ರಸ್ತಾಪಿಸುವದಾಗಿ ಭರವಸೆ ನೀಡಿದರು.
ಸಹಕಾರ ಬ್ಯಾಂಕಿನಲ್ಲಿ ಪಡೆದಿರುವ ಸಾಲವನ್ನು ಸಂಪೂರ್ಣ ವಾಗಿ ಮನ್ನಾ ಮಾಡುವದು, ಬೆಳೆ ನಷ್ಟ ಪರಿಹಾರ, ಬೆಳೆ ವಿಮೆ ಹಣ ವಾಪಸ್, ಬೆಳೆ ನಷ್ಟದ ಬಗ್ಗೆ ವಿಶೇಷ ಪ್ಯಾಕೇಜ್ ಘೋಷಣೆ, ಮೈಸೂರಿ ನಿಂದ ಕುಶಾಲನಗರ, ಕುಶಾಲನಗರ ದಿಂದ ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ಹಾದು ಹೋಗುವ ರೈಲು ಮಾರ್ಗಕ್ಕೆ ತಡೆ, ಆನೆ-ಹುಲಿ ಹಾವಳಿ ನಿಯಂತ್ರಣ, ಬೆಳೆ ಹಾಗೂ ಆಸ್ತಿ-ಪಾಸ್ತಿ ಜೀವ ನಷ್ಟಕ್ಕೆ ಪರಿಹಾರ, ಭತ್ತ ಬೆಳೆಯುವ ರೈತರಿಗೆ ಎಕರೆಗೆ ರೂ. 20 ಸಾವಿರ ಪ್ರೋತ್ಸಾಹ ಧನ, ತಾಲೂಕಿಗೊಂದು ಸೂಪರ್ ಸ್ಪೆಷಲಿಸ್ಟ್ ಆಸ್ಪತ್ರೆ ಕಾಫಿ ಹಾಗೂ ಕಾಳುಮೆಣಸು ಆಮದು ತಡೆಯು ವಂತೆ, ಹೈಟೆನ್ಷನ್ ಲೈನ್ ಹಾದು ಹೋಗಿರುವದರಿಂದ ರೈತರು ಬೆಳೆದ ಕಾಫಿ, ಮೆಣಸು, ಭತ್ತದ ಬೆಳೆಗಳು ನಷ್ಟವಾಗುತ್ತಿರುವ ಬಗ್ಗೆ ಎಕ್ರೆಗೆ ರೂ. 7 ಲಕ್ಷ ಪರಿಹಾರ ಧನವನ್ನು ರೈತರಿಗೆ ನೀಡುವಂತೆ ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ರೈತ ಮುಖಂಡರುಗಳಾದ ಪುಚ್ಚಿಮಾಡ ಸಂತೋಷ್, ಮಲ್ಚೀರ ಅಶೋಕ್, ಗಿರೀಶ್, ಹರೀಶ್ ಹಾಗೂ ಇತರ ಮುಖಂಡರಗಳು ಇದ್ದರು.