ಪಿಎಫ್‍ಐ ಜಿಲ್ಲಾ ಸಮಿತಿ ಹೇಳಿಕೆ
ಮಡಿಕೇರಿ, ನ. 15: ತಾ.10ರ ಟಿಪ್ಪು ಜಯಂತಿ ಆಚರಣೆ ಸಂದರ್ಭ ಸೆಕ್ಷನ್ 144 ಜಾರಿಯಲ್ಲಿದ್ದ ಕೆಲವರು ಕಾನೂನನ್ನು ಧಿಕ್ಕರಿಸಿ, ಗುಂಪು ಸೇರಿ ತೊಂದರೆ ಮಾಡಿರುವದು ಖಂಡನೀಯ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೇಳಿದೆ.
ತಾ. 10ರಂದು ಕೊಡಗು ಜಿಲ್ಲೆಯೂ ಮೌನಕ್ಕೆ ಶರಣಾಗಿದ್ದು, ಟಿಪ್ಪು ಜಯಂತಿ ಒಂದು ಕಡೆ ವಿರೋಧದ ನಡುವೆಯು ನಡೆದಿದೆ ಎಂದು ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ನಾಯಕರು ಸಂತೋಷ ಪಟ್ಟರೆ ಮತ್ತೊಂದು ಕಡೆ ಬಿಜೆಪಿ ಹಾಗೂ ಸಂಘ ಪರಿವಾರದವರು ಜಿಲ್ಲೆಯ ಜನತೆಯಲ್ಲಿ ಭಯದ ವಾತಾವರಣ ಮೂಡಿಸಿ ಬಂದ್ ಯಶಸ್ವಿಯೆಂದು ಸಂತೋಷದಿಂದ ಬೀಗುತ್ತಿರುವದು ಕಂಡು ಬರುತ್ತಿದೆ. ಇದೆಲ್ಲದರ ಮಧ್ಯೆ ಜನಸಾಮಾನ್ಯರು ಮಾತ್ರ ವ್ಯಾಪಾರ ವಹಿವಾಟು ನಡೆಸಲಾಗದೆ ಕೂಲಿ ಕೆಲಸ ಮಾಡಲಾಗದೆ ಹಾಗೂ ತಮ್ಮ ಭವಿಷ್ಯ ರೂಪಿಸಬೇಕಾದ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ಮುಂದೂಡುವ ಪ್ರಸಂಗ ಎದುರಾಗಿರುವದು ಮಾತ್ರ ಕಣ್ಮರೆಯಾಗಿದೆ. ಇದು ನಿಜಕ್ಕೂ ಖಂಡನೀಯ.
ಜಿಲ್ಲೆಯಲ್ಲಿ 144 ನಿಷೇದಾಜ್ಞೆ ಕೇವಲ ಮುಸಲ್ಮಾನರಿಗೆ ಹಾಗೂ ಜನ ಸಾಮಾನ್ಯರಿಗೆ ಎಂಬಂತೆ ಕಂಡು ಬಂದಿದ್ದು, ಮತ್ತೊಂದು ವಿಪರ್ಯಾಸ. ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸಿ.ಸಿ. ಕ್ಯಾಮರ ಅಳವಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಸಂತೆ ವ್ಯಾಪಾರ ಮಾಡುತ್ತಿದ್ದ ಹಾಗೂ ಮಸೀದಿಗೆ ಹೋಗುತ್ತಿದ್ದ ಜನರಿಗೆ 5 ಜನರಿಗಿಂತ ಹೆಚ್ಚಿನ ಜನಕೂಟ ಸೇರಬಾರದೆಂದು ನಗರದಾದ್ಯಂತ ಪ್ರಚಾರ ಮಾಡಲಾಗುತ್ತಿದ್ದರೂ, ಸಿ.ಸಿ. ಕ್ಯಾಮರ ಅಥವಾ ಪೊಲೀಸ್ ಅಧಿಕಾರಿಗಳಿಗೆ ನೂರಾರು ಮಂದಿ ಪ್ರತಿಭಟನಾಕಾರರು ಕೋಟೆ ಆವರಣ ತಲುಪುವವರೆಗೂ ಕಣ್ಣಿಗೆ ಕಾಣಿಸದೇ ಇರುವದು ವಿಪರ್ಯಾಸವೇ ಸರಿ.
ಕಳೆದ 2 ವರ್ಷಗಳಿಂದಲೂ ಟಿಪ್ಪು ಜಯಂತಿಯಂದು ಕೊಡಗಿನಲ್ಲಿ ನಡೆಯುತ್ತಿದ್ದ ಕೆಲವರ ಅಟ್ಟಹಾಸ ಈ ವರ್ಷವೂ ಮುಂದುವರಿದಿದೆ. ಕೊಡಗಿನಲ್ಲ್ಲಿ ಏನೇ ಮುಂಜಾಗ್ರತ ಕ್ರಮಕೈಗೊಂಡರು ನಮ್ಮನ್ನು ತಡೆಯಲು ಅಸಾಧ್ಯ ಎಂಬಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡÀಳಿತವನ್ನು ಅಣಕಿಸುವಂತೆ ಮರಗಳನ್ನು ಉರುಳಿಸಿ ರಸ್ತೆ ತಡೆ ನಡೆಸಿರುತ್ತಾರೆ. ಬಸ್ಸುಗಳಿಗೆ ಕಲ್ಲು ಹೊಡೆದು ಗಾಜು ಪುಡಿ ಮಾಡಿರುತ್ತಾರೆ ಹಾಗೂ ಟಿಪ್ಪು ಜಯಂತಿಯನ್ನು ವಿರೋಧಿಸಿದವರನ್ನು ಬಂಧಿಸಿದಾಗ ಜನಪ್ರತಿನಿಧಿಗಳು ಆ ಬಸ್ಸಿನಲ್ಲಿದ್ದರೂ, ಬಸ್ಸಿನ ಸೀಟುಗಳನ್ನು ಧ್ವಂಸ ಮಾಡಿರುತ್ತಾರೆ. ಇಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಂಡು ಅವರಿಗೆ ಕುಮ್ಮಕ್ಕನ್ನು ನೀಡಿರುವ ವ್ಯಕ್ತಿಗಳನ್ನು ಬಂಧಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾ ಸಮಿತಿ ಆಗ್ರಹಿಸುತ್ತಿದೆ.
ಈಗಾಗಲೇ ಬಸ್ಸಿಗೆ ಕಲ್ಲು ಹೊಡೆದ ದುಷ್ಕರ್ಮಿಗಳನ್ನು ಬಂಧಿಸಿರುವದಾಗಿ ತಿಳಿದು ಬಂದಿದ್ದು, ಇದು ಪೊಲೀಸರ ಕಾರ್ಯ ಚಟುವಟಿಕೆಯಲ್ಲಿ ಜನರಿಗೆ ವಿಶ್ವಾಸ ಮೂಡಲು ಸಾಧ್ಯವಾಗಿದೆ ಎಂದು ಜಿಲ್ಲಾಧ್ಯಕ್ಷ ಟಿ.ಎ. ಹ್ಯಾರೀಸ್ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಿಸಿದ್ದಾರೆ.