ಶ್ರೀಮಂಗಲ, ನ. 15: ಕೊಡಗಿನಲ್ಲಿ ಹಿಂದಿನಿಂದಲೂ ಸಾಂಪ್ರದಾಯಿಕ ವಾಗಿ ಸ್ವಂತ ಬಳಕೆಗೆ ತರಕಾರಿ ಬೆಳೆಯಲಾಗುತ್ತಿತ್ತು. ಈ ಸಾಂಪ್ರದಾಯಿಕ ಕೃಷಿಗೆ ವೈಜ್ಞಾನಿಕ ಹಾಗೂ ತಾಂತ್ರಿಕತೆ ಅಳವಡಿಸಿಕೊಂಡು ಕೊಡಗಿನ ಕೃಷಿಕರ ಆರ್ಥಿಕ ಸುಧಾರಣೆಗೆ ಉತ್ತೇಜನ ನೀಡಲು ಸಾಧ್ಯವಿದೆ. ಕೊಡಗಿನ ತರಕಾರಿ ಬ್ರಾಂಡ್ ಸ್ಥಾಪನೆ ಮಾಡಿ ಮಾರುಕಟ್ಟೆ ಕಲ್ಪಿಸಲು ಹೆಚ್ಚಿನ ಅವಕಾಶಗಳು ಇದೆ. ಜಿಲ್ಲೆಯ ಕೃಷಿಕರಿಗೆ ಈ ಮಾಹಿತಿ ಕಾರ್ಯಗಾರ ಅನುಕೂಲವಾಗಲಿದೆ ಎಂದು ಯುಕೊ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅಭಿಪ್ರಾಯ ಪಟ್ಟರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ ಯುನೈಟೆಡ್ ಕೊಡವ ಅರ್ಗನೈಸೇಷನ್ ಸಂಘಟನೆಯ ‘ನಾಡ ಮಣ್ಣ್ ನಾಡ ಕೂಳ್’ ಅಭಿಯಾನ ಹಾಗೂ ಲೀಫ್ (ಎಲ್.ಇ.ಎ.ಎಫ್)ಸಂಸ್ಥೆಯ ಜಂಟಿ ಆಶ್ರಯದಲ್ಲಿ ತರಕಾರಿ ಬೆಳೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತು ಮಾಹಿತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಕೊಡಗಿನ ಮಣ್ಣು ಫಲವತ್ತತೆ, ರಾಸಾಯನಿಕ ಮುಕ್ತವಾಗಿದ್ದು ಸ್ವಾಭಾವಿಕವಾಗಿಯೇ ಗುಣಮಟ್ಟದ ಕೃಷಿ ಉತ್ಪನ್ನ ಇಲ್ಲಿ ಬೆಳೆಯಲು ಸಾಧ್ಯವಿದೆ. ಕೊಡಗಿನ ಬ್ರಾಂಡ್‍ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ಹೆಚ್ಚಿನ ಬೇಡಿಕೆ ಲಭ್ಯ ಇರುವ ಬಗ್ಗೆ ಸಲಹೆ ನೀಡಿದರು.
ಮೂರು ರಾಜ್ಯಗಳ ಲೀಫ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಆನಂದ್ ಮಾತನಾಡಿ ನಮ್ಮ ಸಂಸ್ಥೆಯು ರೈತ ಉತ್ಪಾದಕರ ಸಂಸ್ಥೆ. ಸರ್ಕಾರ ಹಾಗೂ ರೈತರ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಥೆ ತಾಂತ್ರಿಕ ಸಲಹೆ, ಬಿತ್ತನೆ ಬೀಜವನ್ನು ಪೂರೈಸುವ ಮೂಲಕ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಈ ನಿಟ್ಟಿನಲ್ಲಿ ಆಸಕ್ತ ರೈತರಿಂದ ಜಾಗ ಗುರುತಿಸುವಿಕೆ, ಮಣ್ಣಿನ ಪರೀಕ್ಷೆ, ಈ ಹವಮಾನಕ್ಕೆ ಸೂಕ್ತವಾದ ತರಕಾರಿ, ವಿವಿಧ ತರಕಾರಿಗಳನ್ನು ಬೆಳೆಯಲು ಹಂಚಿಕೆ, ವರ್ಷದ ಎಲ್ಲಾ ಕಾಲಕ್ಕೆ ಲಭ್ಯವಿರುವಂತೆ ತರಕಾರಿ ಬಿತ್ತನೆ. ರೈತರಿಂದ ನೇರವಾಗಿ ಖರೀದಿ, ಉತ್ಪಾದನೆ ವೆಚ್ಚ ಕಡಿತ, ಆಧುನಿಕ ಪ್ಯಾಕಿಂಗ್ ಮೂಲಕ ತಾಜತನ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವಿಕೆ, ಅಲ್ಲದೆ, ರೈತನ ಉತ್ಪನ್ನಕ್ಕೆ ಆಯಾ ರೈತರ ಹೆಸರು, ಬೆಳೆದ ಪ್ರದೇಶ ಇತ್ಯಾದಿಗಳನ್ನು ಭಾರ್‍ಕೋಡ್ ಮೂಲಕ ನಮೂನೆ ಇವೆಲ್ಲವನ್ನು ಸಂಸ್ಥೆ ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲು ಕಾರ್ಯಕ್ರಮ ರೂಪಿಸಿದೆ ಎಂದು ಮಾಹಿತಿ ನೀಡಿದರು.
ಊಟಿಯಲ್ಲಿ ಅತ್ಯಧಿಕ ತರಕಾರಿ ಬೆಳೆಯಲಾಗುತ್ತಿದ್ದು, ಕೊಡಗು ಹಾಗೂ ಊಟಿಗೆ ಹವಮಾನದಲ್ಲಿ ವ್ಯತ್ಯಾಸವಿಲ್ಲ ಆದ್ದರಿಂದ ಕೊಡಗಿನಲ್ಲಿಯೂ ಗುಣಮಟ್ಟದ ತರಕಾರಿ ಬೆಳೆಯಲು ಹೆಚ್ಚಿನ ಅವಕಾಶವಿದೆ. ಈ ನಿಟ್ಟಿನಲ್ಲಿ ಇಲ್ಲಿನ ಕೃಷಿಕರು ಪ್ರಯತ್ನಿಸುವದಾದರೆ ನಮ್ಮ ಸಂಸ್ಥೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಕೆವಿಕೆಯ ವಿಷಯ ತಜ್ಞರಾದ ಕೆ.ಎ.ದೇವಯ್ಯ ಮಾತನಾಡಿ ಕೊಡಗಿನಲ್ಲಿ ತರಕಾರಿ ಬೆಳೆ ಬೆಳೆಯುವದು ಹಳೆಯ ಅನುಭವ. ಈಗ ಗುತ್ತಿಗೆ ಕಂಪೆನಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಕೊಡಗಿನಲ್ಲಿ ಹವಮಾನ ಪರಿಗಣನೆ ಮುಖ್ಯ. ಊಟಿ ಮತ್ತು ಕೊಡಗಿನಲ್ಲಿ ಹವಮಾನ ಒಂದೇಯಾದರೂ ಮಳೆ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಆಯಾ ಋತುವಿಗೆ ಸರಿ ಹೊಂದುವ ತರಕಾರಿ ಬೆಳೆಯನ್ನು ಬೆಳೆಯಲು ಆಯ್ಕೆ ಮಾಡಿಕೊಳ್ಳುವದು ಸೂಕ್ತ ಎಂದು ಸಲಹೆ ನೀಡಿದರು.
ಯುಕೊ ಸದಸ್ಯ ಹಾಗೂ ಸವಾಯವ ಕೃಷಿಯ ತಾಂತ್ರಿಕ ಸಲಹೆಗಾರ ಮಾದೇಟಿರ ತಿಮ್ಮಯ್ಯ ಮಾತನಾಡಿ ಪ್ರಪಂಚದಾದ್ಯಂತ ರಾಸಾಯನಿಕ ಹಾಗೂ ವಿಷ ಮುಕ್ತ ಆಹಾರಕ್ಕೆ ಬಾರಿ ಬೇಡಿಕೆ ಇದೆ. ರಾಸಾಯನಿಕ ಯುಕ್ತ ಹಾಗೂ ವಿಷ ಯುಕ್ತ ಆಹಾರ ಸೇವನೆಯಿಂದ ನಾನಾ ತರದ ಕಾಯಿಲೆಗಳು ಮನುಷ್ಯನಿಗೆ ತಗುಲುತ್ತಿದ್ದು ರೋಗ ನಿರೋಧಕ ಶಕ್ತಿ ಕುಂದುತ್ತಿದೆ. ಆದ್ದರಿಂದ ಆರೋಗ್ಯಕರ ಮಣ್ಣು ಹಾಗೂ ವಿಷ ಹಾಗೂ ರಾಸಾಯನಿಕ ಮುಕ್ತ ಆಹಾರ ಬೆಳೆಯಲು ಪ್ರತಿಯೊಬ್ಬ ಕೃಷಿಕರು ಮುಂದಾಗಬೇಕು. ಇದರ ಮೊದಲ ಹಂತವಾಗಿ ತಮಗೆ ಬೇಕಾದ ಆಹಾರವನ್ನು ಸ್ವಸಂರಕ್ಷಣೆಗಾಗಿ ಬೆಳೆಸಲು ಆಧ್ಯತೆ ನೀಡಬೇಕಾಗಿದೆ ಎಂದರು.
ಯುಕೊ ನಾಡ ಮಣ್ಣ್ ನಾಡ ಕೂಳ್ ಯೋಜನೆಯ ನಿರ್ದೇಶಕ ಚೆಪ್ಪುಡೀರ ಸುಜು ಕರುಂಬಯ್ಯ ಮಾತನಾಡಿ ಇಂದಿನ ಕಾರ್ಯಕ್ರಮದಲ್ಲಿ ಪ್ರೇರಿತರಾಗಿ ಯಾವದೇ ಕೃಷಿಕ ತರಕಾರಿ ಬೆಳೆಯಲು ಆಸಕ್ತಿ ವಹಿಸಿದರೆ ಅಂತಹ ಕೃಷಿಕರಿಗೆ ಅಗತ್ಯವಾದ ತಾಂತ್ರಿಕ ಸಲಹೆ, ಬೇಕಾದ ತರಕಾರಿ ಬೆಳೆಯ ಬೀಜ ಇತ್ಯಾದಿಗಳನ್ನು ನೀಡುವದರೊಂದಿಗೆ ತರಕಾರಿ ಬೆಳೆಯಲು ಉತ್ತೇಜನ ನೀಡಲಾಗುವದು. ಈ ನಿಟ್ಟಿನಲ್ಲಿ ಅಗತ್ಯವಾದರೆ ಮತ್ತೊಂದು ಕಾರ್ಯಗಾರವನ್ನು ನಡೆಸಲಾಗುವದೆಂದು ತಿಳಿಸಿದರು.
ಕೇರಳದ ಕಾಂಕೂರ್ ಸಂಸ್ಥೆಯ ಅನಿತಾ.ಕೆ.ಮೆನಾನ್ ಮಾತನಾಡಿ ವೆನಿಲಾಕ್ಕೆ ಉತ್ತಮವಾದ ಮಾರುಕಟ್ಟೆ ಇದ್ದು. ಸಿಂಥೆಟಿಕ್ ವೆನಿಲಾ ಪರಿಮಳಕ್ಕೆ ಬೇಡಿಕೆ ಕುಸಿಯುತ್ತಿದ್ದು ನೈಸರ್ಗಿಕವಾದ ವೆನಿಲಾ ಬಳಕೆಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ವೆನಿಲಾ ಬೆಳೆಗೆ ಉತ್ತಮ ಮಾರುಕಟ್ಟೆ ದೊರೆಯುತ್ತಿದೆ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾರ್ಜ್ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಕೆವಿಕೆ ವಿಷಯ ತಜ್ಞ ಪ್ರಭಾಕರ್, ಬಾಳೆಲೆಯ ಪೋಡಮಾಡ ಸ್ವಾತಿ ಕುಟ್ಟಯ್ಯ, ಗೋಣಿಕೊಪ್ಪದ ಕಾಳಿಮಾಡ ರಾಣ, ಬಲ್ಯಮುಂಡೂರು ಮಾಣಿಯಪಂಡ ನಿರಂತ್, ಸಿದ್ದಾಪುರ ಕೊಂಗೇರ ಗಪ್ಪಣ್ಣ, ಎಪಿಎಂಸಿ ಸದಸ್ಯ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಪೊನ್ನಂಪೇಟೆಯ ತೀತಮಾಡ ಗಣೇಶ್, ಮದ್ರೀರ ಮಂಜು ಮತ್ತಿತರರು ಹಾಜರಿದ್ದರು.