ಮಡಿಕೇರಿ, ನ. 15: ಕೊಡಗಿನ ಪೊನ್ನಂಪೇಟೆ ಹಾಗೂ ಕುಶಾಲನಗರವನ್ನು ಪ್ರತ್ಯೇಕ ಕಾವೇರಿ ತಾಲೂಕು ರಚಿಸುವ ಬೇಡಿಕೆ ಬಗ್ಗೆ ಸರಕಾರದಿಂದ ಪರಿಶೀಲಿಸಲಾಗುವದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದಾರೆ. ಇಂದು ಸದನದಲ್ಲಿ ಪ್ರಶ್ನೋತ್ತರ ವೇಳೆ ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಶ್ನೆಗೆ ಕಂದಾಯ ಸಚಿವರು ಈ ಉತ್ತರ ನೀಡಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಪೊನ್ನಂಪೇಟೆ ಮತ್ತು ಕಾವೇರಿ ತಾಲೂಕುಗಳ ರಚನೆಗಾಗಿ ಒತ್ತಾಯಿಸಿ ಕಳೆದ ಒಂದು ತಿಂಗಳಿನಿಂದ ಕುಶಾಲನಗರ ಮತ್ತು ಪೊನ್ನಂಪೇಟೆಯಲ್ಲಿ ಅಲ್ಲಿನ ಸಾರ್ವ ಜನಿಕರು, ಸಂಘ - ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳ ನೇತೃತ್ವದಲ್ಲಿ ಧರಣಿ ಮುಷ್ಕರವನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಮಾನ್ಯ ಕಂದಾಯ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದಾಗ ಈ ಕುರಿತು ಸಲ್ಲಿಸಿದ ಮನವಿಗೆ ಕಂದಾಯ ಸಚಿವರು ಎರಡು ತಾಲೂಕುಗಳ

(ಮೊದಲ ಪುಟದಿಂದ) ರಚನೆ ಮಾಡುವ ಭರವಸೆ ನೀಡಿದ್ದರು. ಆದರೆ ಇದುವರೆಗೆ ಈ ಬಗ್ಗೆ ಯಾವದೇ ಕ್ರಮ ಆಗಿರುವದಿಲ್ಲ. ಪೊನ್ನಂಪೇಟೆ ಮತ್ತು ಕಾವೇರಿ ತಾಲೂಕುಗಳ ರಚನೆ ಬಗ್ಗೆ ಬೇಕಾದಂತಹ ಎಲ್ಲಾ ಮೂಲಭೂತ ಸೌಕರ್ಯಗಳು ಪೊನ್ನಂಪೇಟೆ ಮತ್ತು ಕುಶಾಲನಗರದಲ್ಲಿದ್ದು, ಸರ್ಕಾರಕ್ಕೆ ಯಾವದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳುವದಿಲ್ಲ. ಇದುವರೆಗೂ ಸರ್ಕಾರ ಪ್ರತ್ಯೇಕ ತಾಲೂಕುಗಳ ರಚನೆಗೆ ಕ್ರಮ ಕೈಗೊಳ್ಳದೆ ಇರುವದನ್ನು ಖಂಡಿಸಿ ಸಾರ್ವಜನಿಕರು ಸಂಘ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ಪರಿಸ್ಥಿತಿ ಗಂಭೀರವಾಗಿ ಕಾನೂನು ಸುವ್ಯವಸ್ಥೆಯ ಸಮಸ್ಯೆಯು ಬರಬಹುದು. ಇದೆಲ್ಲವನ್ನು ಪರಿಗಣಿಸಿ ಸರ್ಕಾರವು ಕೂಡಲೇ ಪೊನ್ನಂಪೇಟೆ ತಾಲೂಕು ಮತ್ತು ಕಾವೇರಿ ತಾಲೂಕು ರಚನೆಗೆ ಕ್ರಮ ಕೈಗೊಳ್ಳಬೇಕಾಗಿ ಒತ್ತಾಯಿಸುತ್ತೇನೆ ಎಂದು ಶಾಸಕರು ಗಮನ ಸೆಳೆದಿದ್ದಾರೆ.

ಸಚಿವರ ಹೇಳಿಕೆ : ಯಾವದೇ ಒಂದು ಹೋಬಳಿ, ಪ್ರದೇಶವನ್ನು ತಾಲೂಕನ್ನಾಗಿ ರಚಿಸಬೇಕಾದರೆ ಹಣಕಾಸಿನ ಪರಿಸ್ಥಿತಿಯನ್ನು ಅವಲಂಬಿಸಬೇಕಾಗಿರುತ್ತದೆ. ಅದರಂತೆ ಹೊಸ ತಾಲೂಕುಗಳನ್ನು ರಚಿಸುವ ಪ್ರಸ್ತಾವನೆಗಳು ಹಣಕಾಸಿನ ಸಂಪನ್ಮೂಲಗಳ ಕ್ರೋಢೀಕರಣ ಹಾಗೂ ಹಣಕಾಸಿನ ಇತಿಮಿತಿಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ ಹೊಸ ತಾಲೂಕುಗಳನ್ನು ರಚನೆ ಮಾಡುವ ವಿಷಯವು ಸರ್ಕಾರದ ಒಂದು ನೀತಿಯ ವಿಷಯವಾಗಿರುತ್ತದೆ. ಆದುದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಪೊನ್ನಂಪೇಟೆ ಹಾಗೂ ಕಾವೇರಿ ತಾಲೂಕುಗಳನ್ನು ರಚಿಸುವ ಬಗ್ಗೆ ಪರಿಶೀಲನೆ ಮಾಡಲಾಗುವದೆಂದು ಸಚಿವರು ಲಿಖಿತ ಉತ್ತರ ನೀಡಿದ್ದಾರೆ.