ಮಡಿಕೇರಿ, ನ. 15 : ಪೊಲೀಸ್ ಇಲಾಖೆಯಲ್ಲಿ ಹುದ್ದೆ ಪಡೆಯಲು ತಮ್ಮನಿಗೆ ಕಾನೂನು ಬಾಹಿರವಾಗಿ ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ಅಣ್ಣ ಸಹಕರಿಸಿ ಇಲಾಖೆಯನ್ನು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಕ್ರಮವಾಗಿ ಹುದ್ದೆಗೆ ಆಯ್ಕೆಗೊಂಡಿದ್ದ ತಮ್ಮ ಇದೀಗ ಪೊಲೀಸರಿಂದ ಬಂಧಿತನಾಗಿದ್ದರೆ, ಕರ್ತವ್ಯದಲ್ಲಿದ್ದ ಇಲಾಖೆಯನ್ನು ವಂಚಿಸಿದ್ದ ಪೊಲೀಸಪ್ಪ ತಲೆ ಮರೆಸಿಕೊಂಡಿದ್ದಾನೆ.ಸರಕಾರಿ ಹುದ್ದೆ ಪಡೆಯಲು ಈ ರೀತಿಯಲ್ಲೂ ಅಕ್ರಮವಾಗಿ ಪ್ರಯತ್ನ ನಡೆಯುತ್ತದೆ ಎಂಬದಕ್ಕೆ ಇದು ಸಾಕ್ಷಿಯಾಗಿದೆ. ಈ ಪ್ರಕರಣವೇನು...? ನೋಡಿ ಇಲ್ಲಿದೆ ವಿವರ.2017ರಲ್ಲಿ ನಡೆದ ಜಿಲ್ಲಾ ಸಶಸ್ತ್ರ ಮೀಸಲು ದಳದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಆಯ್ಕೆ ಪ್ರಕ್ರಿಯೆಯ ವೇಳೆ ಮೂಲ ಅಭ್ಯರ್ಥಿಯ ಬದಲಾಗಿ ಆತನ ಅಣ್ಣ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡು ತನ್ನ ತಮ್ಮನಿಗೆ ಪೊಲೀಸ್ ಇಲಾಖೆಯ ಎಪಿಸಿ ಹುದ್ದೆಗೆ ಅಕ್ರಮವಾಗಿ ಆಯ್ಕೆಯಾಗಲು ಸಹಾಯ ಮಾಡಿರುವ ಕುತೂಹಲಕಾರಿ ಪ್ರಕರಣವಿದು.
2017ನೇ ಸಾಲಿನ ಜಿಲ್ಲಾ ಸಶಸ್ತ್ರ ಮೀಸಲು ದಳದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ದೇಹದಾಡ್ರ್ಯ ಪರೀಕ್ಷೆಯು 28.01.2017ರಂದು ನಿಗದಿಯಾಗಿದ್ದು, ಆ ದಿನ ಎಪಿಸಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಶರೀಫ್ ಸಾಬ ಲಾಲ ಸಾಬ ವಾಲೀಕರ್ ಎಂಬಾತ ಬಾಗಲಕೋಟೆ ಜಿಲ್ಲೆಯಿಂದ ಮಡಿಕೇರಿಗೆ ಬಂದಿದ್ದ ದಾಖಲಾತಿ ಪರಿಶೀಲನೆಯ ವೇಳೆ ಹಾಜರಿದ್ದು, ತದನಂತರ ನಡೆದ ದೇಹದಾಡ್ರ್ಯ ಪರೀಕ್ಷೆಯ ವೇಳೆಯಲ್ಲಿ ತಾನು ನಿಗದಿಪಡಿಸಿದ ಎತ್ತರಕ್ಕಿಂತ 6 ಸೆ.ಮೀ. ಕಡಿಮೆ ಇದ್ದ ಕಾರಣ ತಾನು ಆಯ್ಕೆಯಾಗುವದಿಲ್ಲವೆಂದು ತಿಳಿದು, ಹಾಲಿ
(ಮೊದಲ ಪುಟದಿಂದ) ಮಂಗಳೂರು ಜಿಲ್ಲೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯದಲ್ಲಿದ್ದ ತನ್ನ ಅಣ್ಣ ಮೊೈದೀನ್ ಸಾಬ ಲಾಲ ಸಾಬ ವಾಲೀಕರ್ನಿಗೆ ದೇಹದಾಡ್ರ್ಯ ಪರೀಕ್ಷೆಗೆ ಹಾಜರಾಗುವಂತೆ ಕೋರಿ ಪ್ರಚೋದನೆ ನೀಡಿದ್ದಾರೆ. ಅದರಂತೆ ಮೊೈದೀನ್ ಸಾಬ ಲಾಲ ಸಾಬ ವಾಲೀಕರ್ 28.01.2017ರಂದು ನಡೆದ ದೇಹದಾಡ್ರ್ಯ ಪರೀಕ್ಷೆಯಲ್ಲಿ ಪಾಲ್ಗೊಂಡು ತನ್ನ ತಮ್ಮ ಎಪಿಸಿ ಹುದ್ದೆಗೆ ಅಕ್ರಮವಾಗಿ ಆಯ್ಕೆಯಾಗುವಂತೆ ಸಹಕರಿಸಿದ್ದಾನೆ.
ಆಯ್ಕೆಯಾದ ನಂತರ 03.11.2017ರಂದು ತಮ್ಮ ಕರ್ತವ್ಯಕ್ಕೆ ಶರೀಫ್ ಸಾಬ ವರದಿ ಮಾಡಿಕೊಂಡಿದ್ದು, ಆತನಿಗೆ ಎಪಿಸಿ 68 ಸಂಖ್ಯೆಯನ್ನು ನೀಡಲಾಗಿದೆ. ಈತ ಡಿಎಆರ್ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಿನ್ನೆ ಸಂಜೆ ಹಾಜರಾತಿಯ ವೇಳೆ ಸಶಸ್ತ್ರ ಪೊಲೀಸ್ ನಿರೀಕ್ಷಕರು, ಜಿಲ್ಲಾ ಸಶಸ್ತ್ರ ಮೀಸಲು ದಳ, ಮಡಿಕೇರಿ ಇವರಿಗೆ ಅನುಮಾನ ಬಂದು ಆತನ ಎತ್ತರವನ್ನು ಎತ್ತರ ಮಾಪನದಲ್ಲಿ ಪರೀಕ್ಷಿಸಿದಾಗ ಶರೀಫ್ ಸಾಬ ಲಾಲ ಸಾಬ ವಾಲೀಕರ್ನು ನಿಗದಿಪಡಿಸಿದ ಎತ್ತರಕ್ಕಿಂತ 6 ಸೆ.ಮೀ. ಕಡಿಮೆ ಇರುವದು ತಿಳಿದುಬಂದಿದೆ. ಆತನನ್ನು ವಿಚಾರ ಮಾಡಿದಾಗ ಆತನು ಸಮಂಜಸವಾದ ಉತ್ತರ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಆ ದಿನದ ವಿಡಿಯೋ ಚಿತ್ರೀಕರಣವನ್ನು ವೀಕ್ಷಿಸಿದಾಗ ಶರೀಪ್ ಸಾಬ ಲಾಲ ಸಾಬ ವಾಲೀಕರ್ ಹಾಗೂ ಮೊೈದೀನ್ ಸಾಬ ಲಾಲ ಸಾಬ ವಾಲೀಕರ್ ಮಾಡಿದ ಅಕ್ರಮದ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ಜಿಲ್ಲಾ ಸಶಸ್ತ್ರ ಮೀಸಲು ದಳದ ಸಶಸ್ತ್ರ ಪೊಲೀಸ್ ನಿರೀಕ್ಷಕರು ತಿಮ್ಮಪ್ಪಗೌಡ ನೀಡಿದ ದೂರಿನ ಅನ್ವಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ 114, 419, 420 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಶರೀಫ್ ಸಾಬ ಲಾಲ ಸಾಬ ವಾಲೀಕರ್ನನ್ನು ದಸ್ತಗಿರಿ ಮಾಡಲಾಗಿದ್ದು, ಆತನ ಅಣ್ಣ ಮೊೈದೀನ್ ಸಾಬ ಲಾಲ ಸಾಬ ವಾಲೀಕರ್ನು ತಲೆಮರೆಸಿಕೊಂಡಿದ್ದಾರೆ.