ಮಡಿಕೇರಿ, ನ. 15: ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನು ಹತ್ಯೆ ಮಾಡಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಡಿಕೇರಿಯ ಜಯನಗರದಲ್ಲಿರುವ ನಗರಸಭಾ ಸದಸ್ಯ ಪಿ.ಟಿ. ಉಣ್ಣಿಕೃಷ್ಣನ್ ಅವರ ಹೋಂಸ್ಟೇನ ಔಟ್‍ಹೌಸ್‍ನಲ್ಲಿ ಆ ಹೋಂಸ್ಟೇನ ವ್ಯವಸ್ಥಾಪಕನಾಗಿದ್ದ ಚಂಗುಲಂಡ ರಾಕೇಶ್ ಅಲಿಯಾಸ್ ರಾಕಿ ಎಂಬಾತನೊಂದಿಗೆ ಅದೇ ಹೋಂಸ್ಟೇನಲ್ಲಿ ಅಡುಗೆ ಕೆಲಸಕ್ಕಿದ್ದ ಬಾಯಡ ಡೀನಾ ಎಂಬಾಕೆಗೆ ಅಕ್ರಮ ಸಂಬಂಧವಿತ್ತು. ಈ ಅಕ್ರಮ ಸಂಬಂಧಕ್ಕೆ ತನ್ನ ಪತಿ ಪ್ರಸನ್ನನಿಂದ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ಡೀನಾ ಹಾಗೂ ರಾಕೇಶ್, ಪ್ರಸನ್ನನನ್ನು ಹತ್ಯೆ ಮಾಡುವ ಸಂಚು ರೂಪಿಸುತ್ತಾರೆ. ಅದರಂತೆ ತಾ. 8.2.2010ರಂದು ರಾತ್ರಿ ಡೀನಾ ತನ್ನ ಪತಿ ಪ್ರಸನ್ನನಿಗೆ ನಿದ್ರೆ ಮಾತ್ರೆ ಕೊಟ್ಟು ಮಲಗಿಸಿ ರಾಕೇಶ್‍ಗೆ ದೂರವಾಣಿ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಳು. ಮನೆಗೆ ಬಂದ ರಾಕೇಶ್ ಗಾಢ ನಿದ್ರೆಯಲ್ಲಿದ್ದ ಪ್ರಸನ್ನನ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ. ನಂತರ ಕೃತ್ಯವನ್ನು ಮರೆ ಮಾಚುವದಕ್ಕಾಗಿ ಕತ್ತಿಯನ್ನು ಪ್ರಸನ್ನನ ಕೈ ಹತ್ತಿರ ಇಟ್ಟು ಡೀನಾಳ ಸಹಕಾರದೊಂದಿಗೆ ಮನೆಯೊಳಗೆ ತನ್ನ ಹೆಜ್ಜೆ ಗುರುತುಗಳನ್ನೆಲ್ಲಾ ಬಟ್ಟೆಯಿಂದ ಒರೆಸಿ ಶುಚಿಮಾಡಿ ಅಲ್ಲಿಂದ ಕಾಲ್ಕಿತ್ತಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಡಿಕೇರಿ ನಗರ ಠಾಣಾ ಪೊಲೀಸರು ಆರೋಪಿಗಳಾದ ರಾಕೇಶ್ ಹಾಗೂ ಡೀನಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪನಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಅವರು ಆರೋಪಿಗಳಿಗೆ ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ತಲಾ 7500 ರೂ. ದಂಡ, ಕೊಲೆ ಕೃತ್ಯವನ್ನು ಮರೆ ಮಾಚಲು ಯತ್ನಿಸಿದ ಅಪರಾಧಕ್ಕೆ 5 ವರ್ಷ ಕಠಿಣ ಸಜೆ ತಲಾ 2500 ರೂ. ದಂಡ ವಿಧಿಸಿದ್ದಾರೆ. ವಸೂಲಿಯಾಗುವ ದಂಡದಲ್ಲಿ ಮೃತನ ತಂದೆ ಡಿ.ಎಂ. ಅಣ್ಣಯ್ಯ ಅವರಿಗೆ ರೂ. 15,000 ವನ್ನು ಪರಿಹಾರವಾಗಿ ನೀಡಲು ಸೂಚಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಎಂ.ಕೃಷ್ಣವೇಣಿ ವಾದಿಸಿದರು.